Latest

ಯಡಿಯೂರಪ್ಪನವರೇ, ಇವರಿಗೂ ಪರಿಹಾರ ಪ್ಯಾಕೇಜ್, ವಿಮಾ ಸೌಲಭ್ಯ ಕೊಡಿ – ಸಿಎಂ ಭೇಟಿ ಮಾಡಿದ ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ,  ಬೆಂಗಳೂರು – ಕೊರೋನಾ ಸಂಕಷ್ಟದಲ್ಲಿರುವ ಕೆಲವು ವರ್ಗಗಳು ಸರಕಾರದ ಸೌಲಭ್ಯದಿಂದ ವಂಚಿತರಾಗಿದ್ದು ಅಂತವರಿಗೂ ಪರಿಹಾರ ನೀಡುವಂತೆ  ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಆಗ್ರಹಿಸಿದ್ದಾರೆ.
ಬುಧವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಲಕ್ಷ್ಮಿ ಹೆಬ್ಬಾಳಕರ್, ಸಂಪೂರ್ಣ ವಿವರವುಳ್ಳ ಮನವಿಯನ್ನು ಸಲ್ಲಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈಚೆಗೆ ಕೊರೆನಾ ಸಂಕಷ್ಟದ ಹಿನ್ನೆಲೆಯಲ್ಲಿ ಕೆಲವು ಪರಿಹಾರ ಪ್ಯಾಕೇಜ್ ಗಳನ್ನು ನೀಡಿದ್ದಾರೆ. ಆದರೆ, ಈ ಪ್ಯಾಕೇಜ್ ಮತ್ತು ವಿಮಾ ಸೌಲಭ್ಯದಿಂದ ಕೆಲವರು ಹೊರಗುಳಿದಿದ್ದಾರೆ. ಅಂತವರನ್ನು ಗುರುತಿಸಿರುವ ಲಕ್ಷ್ಮಿ ಹೆಬ್ಬಾಳಕರ್ ಅವರ ನೆರವಿಗೆ ಬರುವಂತೆ ಮನವಿ ಮಾಡಿದರು.
ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಸಂಬಂಧ ಕಾರ್ಯನಿರ್ವಹಿಸುತ್ತಿರುವ ಎಲ್ಲ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಕೊರೋನಾ ಯೋಧರು ಎಂದು ಪರಿಗಣಿಸಿ ವೈದ್ಯಕೀಯ ವಿಮಾ ಯೋಜನೆಯನ್ನು ವಿಸ್ತರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರು, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಹೋಮ್ ಗಾರ್ಡ್ಸ್, ಪೌರ ರಕ್ಷಣಾ ದಳ, ಅಗ್ಮಿಶಾಮಕ ದಳದ ಅಧಿಕಾರಿಗಳು, ಸಿಬ್ಬಂದಿ, ಬಂದಿಖಾನೆ ಸಿಬ್ಬಂದಿ, ಪೌರಕಾರ್ಮಿಕರು, ಸ್ಯಾನಿಟೈಸರ್ ಕೆಲಸಗಾರರು ಮತ್ತು ಅವರಿಗೆ ಸಂಬಂಧಿಸಿದ ವಾಹನ ಚಾಲಕರು, ಲೋಡರ್ ಗಳು ಇವರಿಗೆಲ್ಲ ರೋಗದಿಂದ ಮೃತಪಟ್ಟಲ್ಲಿ 30 ಲಕ್ಷ ರೂ. ಪರಿಹಾರ ಒದಗಿಸುವ ಆದೇಶ ಹೊರಡಿಸಿರುವುದು ಶ್ಲಾಘನೀಯ. ಇವರಂತೆ ಕೋವಿಡ್ -19 ಕಾರ್ಯಾಚರಣೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಇಲಾಖೆಯ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಯ ಸಿಬ್ಬಂದಿ, ಗ್ರಾಮ ಮಟ್ಟದ ಕಾರ್ಯಪಡೆಯ ಅಧ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯಿತಿ ಸಿಬ್ಬಂದಿ, ಕಂದಾಯ ಇಲಾಖೆಯ ಸಿಬ್ಬಂದಿಗಳಾದ ತಹಸಿಲ್ದಾರರು, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು, ಶಿಕ್ಷಣ ಇಲಾಖೆಯ ಶಿಕ್ಷಕ ವೃಂದದವರು ಮತ್ತಿತರ ಸಿಬ್ಬಂದಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿ, ವಿದ್ಯುತ್ ಪ್ರಸರಣ ಇಲಾಖೆಯ ಸಿಬ್ಬಂದಿ ಸೇರಿದಂತೆ ಇತರ ಅನೇಕ ಇಲಾಖೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರೆಲ್ಲರಿಗೂ ವೈದ್ಯಕೀಯ ವಿಮಾನಯೋಜನೆಯನ್ನು ವಿಸ್ತರಿಸಿದಲ್ಲಿ ಅವರ ಮನೋಸ್ಥೈರ್ಯ ಹೆಚ್ಚಾಗಿ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಲು ಸಹಾಯವಾಗುತ್ತದೆ. ಹಾಗಾಗಿ ಪ್ರಾಣವನ್ನು ಪಣಕ್ಕಿಟ್ಟು ಹೋರಾಡುತ್ತಿರುವ ಎಲ್ಲರಿಗೂ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ವೈದ್ಯಕೀಯ ವಿಮೆ ಯೋಜನೆಯನ್ನು ವಿಸ್ತರಿಸಬೇಕು ಎಂದು ಲಕ್ಷ್ಮಿ ಹೆಬ್ಬಾಳಕರ್ ವಿನಂತಿಸಿದ್ದಾರೆ.
ಮಹಿಳಾ ಉದ್ಯೋಗಿಗಳಿಗೆ ಧನ ಸಹಾಯ ನೀಡಿ
ಕರ್ನಾಟಕದಲ್ಲಿ 6 ಲಕ್ಷ ಗಾರ್ಮೆಂಟ್ಸ್ ನೌಕರರು, 3 ಲಕ್ಷ ಬೀಡಿ ಕಾರ್ಮಿಕರು, 25 ಲಕ್ಷ ಕೃಷಿ ಕೂಲಿಕಾರರು, 6 ಲಕ್ಷ ಹೈನುಗಾರಿಕೆ ಕೆಲಸಗಾರರು, 5 ಲಕ್ಷ ಕಟ್ಟಡ ಕಾರ್ಮಿಕರು, 4 ಲಕ್ಷ ಬ್ಯೂಟಿ ಪಾರ್ಲರ್ ಸಿಬ್ಬಂದಿ, 8 ಲಕ್ಷ ಆಶಾ ಮತ್ತು ಅಂಗಮನವಾಡಿ ಕಾರ್ಯಕರ್ತೆಯರು ಸೇರಿ ಸುಮಾರು 60 ಲಕ್ಷ ಮಹಿಳಾ ಉದ್ಯೋಗಿಗಳಿದ್ದು ಇವರೆಲ್ಲ ಪುರುಷರಿಗೆ ಸರಿಸಮಾನವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಲಾಕ್ ಡೌನ್ ನಿಂದಾಗಿ ಇವರ ಉದ್ಯೋಗಕ್ಕೆ ತಡೆಬಿದ್ದಿದೆ. ಇದರಿಂದಾಗಿ ಮಹಿಳೆಯರು ಮತ್ತು ಮಕ್ಕಳಿಗೆ ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದಂತಾಗಿದೆ.ಇವರ ಬದುಕು ಬೀದಿಗೆ ಬಿದ್ದಿದೆ. ಇವರಿಗೆ ವಿಶೇಷ ಭತ್ಯೆಯ ಪ್ಯಾಕೇಜ್ ಘೋಷಿಸಿ ಹೆಣ್ಣು ಸಮುದಾಯದ ಕಣ್ಣು  ಎಂಬ ಮಾತಿನಂತೆ ಇವರ ಕುಟುಂಬದ ನಿರ್ವಹಣೆಗೆ ಸರಕಾರವು ವಿಶೇಷ ಧನಸಹಾಯ ಮಂಜೂರು ಮಾಡಬೇಕು ಎಂದು ಕೋರಿದ್ದಾರೆ.
ಕರಕುಶಲ ಕಾರ್ಮಿಕರಿಗೆ ಆರ್ಥಿಕ ಪ್ಯಾಕೇಜ್
ಕರಕುಶಲ ವೃತ್ತಿಯವರಾದ ಕಮ್ಮಾರರು, ಬಡಿಗೇರರು ಸಹ ಕೊರೋನಾ ಸಂಕಷ್ಟದಿಂದ ತತ್ತರಿಸಿ ಹೋಗಿದ್ದಾರೆ. ತಮ್ಮ ಕುಲಕಸುಬನ್ನೇ ನಂಬಿ ಬದುಕುತ್ತಿರುವ ಇವರು ಕೃಷಿಕರಿಗೂ ಅಗತ್ಯ ಪರಿಕರಗಳನ್ನು ಪೂರೈಸುತ್ತ ವಿಶಿಷ್ಟವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಲಾಕ್ ಡೌನ್ ನಿಂದಾಗಿ ಇವರ ಬದುಕು ತತ್ತರಿಸಿ ಹೋಗಿದೆ. ಇವರ ಬದುಕು ಕಟ್ಟಿಕೊಡಲು ಸರಕಾರ ವಿಶೇಷ ಧನ ಸಹಾಯ ನೀಡಬೇಕು ಎಂದು ಲಕ್ಷ್ಮಿ ಹೆಬ್ಬಾಳಕರ್ ಮನವಿ ಮಾಡಿದರು.
 
ಸ್ವಯಂ ಉದ್ಯೋಗಿಗಳಿಗೆ ಧನಸಹಾಯ ನೀಡಿ
ಹಲವಾರು ರೀತಿಯ ಸ್ವಯಂ ಉದ್ಯೋಗಿಗಳೂ ಲಾಕ್ ಡೌನ್ ನಿಂದಾಗಿ ಕಂಗೆಟ್ಟಿದ್ದಾರೆ. ಪೆಂಡಾಲ್ ವೃತ್ತಿಯವರು,ಇಲೆಕ್ಟ್ರಿಕಲ್ಸ್ ಡೆಕಾರೇಟರ್ಸ್ ಮೊದಲಾದವರ ವೃತ್ತಿಯು ಸಾಮಾಜಿಕ, ಧಾರ್ಮಿಕ ಹಾಗೂ ಸಾಸಂಕ್ೃತಿಕ ಕಾರ್ಯಕ್ರಮಗಳ ಮೇಲೆಯೇ ಅವಲಂಬಿಸಿದೆ. ಆದರೆ ಲಾಕ್ ಡೌನ್ ನಿಂದಾಗಿ ಅವರ ಬದುಕು ಬೀದಿಗೆ ಬಂದಿದೆ. ಮಾಡಿದ ಸಾಲವನ್ನು ತೀರಿಸಲು ಸಾಧ್ಯವಾಗುತ್ತಿಲ್ಲ. ಸರಕಾರ ತಕ್ಷಣ ಇಂತವರ ನೆರವಿಗೆ ಬರಬೇಕು. ಧನಸಹಾಯ ನೀಡಬೇಕು ಎಂದು ಹೆಬ್ಬಾಳಕರ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button