ಪ್ರಗತಿವಾಹಿನಿ ಸುದ್ದಿ; ಶಿರಸಿ: ಕ್ವಾರಂಟೈನ್ ತ್ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಮಹಾರಾಷ್ಟ್ರದಿಂದ ಯಾವುದೇ ಪಾಸ್ ಇಲ್ಲದೇ ಉತ್ತರ ಕನ್ನಡ ಜಿಲ್ಲೆಯ ಶಿರಸಿಗೆ ಬಂದಿದ್ದ ಓರ್ವ ಚಾಲಕನನ್ನು ಸ್ಥಳೀಯರ ದೂರಿನ ಮೇರೆಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಈತನೊಂದಿಗೆ ಬಂದಿದ್ದ ಇನ್ನೋರ್ವ ಪರಾರಿಯಾಗಿದ್ದಾನೆ.
ವಶಕ್ಕೆ ಪಡೆದ ವ್ಯಕ್ತಿ ಶಿರಸಿಯ ದೀವಗಿ ವಾರ್ನರ್ ಫ್ಯಾಕ್ಟರಿಗೆ ಸೇರಿದ ಚಾಲಕನಾಗಿದ್ದು, ಮಹಾರಾಷ್ಟ್ರದಿಂದ ಯಾವುದೇ ಪಾಸ್ ಪಡೆಯದೆ ಸಹ ಚಾಲಕನ ಜೊತೆ ಶಿರಸಿಗೆ ಬಂದಿದ್ದನು. ಅಲ್ಲದೇ ಇಲ್ಲಿ ದೀವಗಿ ವಾರ್ನರ್ ಫ್ಯಾಕ್ಟರಿಗೆ ಸೇರಿದ್ದ ಸಹ್ಯಾದ್ರಿ ಕಾಲೋನಿಯ ಮನೆಯಲ್ಲಿ ಇಬ್ಬರು ತಂಗಿದ್ದರು.
ಚಾಲಕರ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ ಓರ್ವ ತಪ್ಪಿಸಿಕೊಂಡಿದ್ದಾನೆ. ಇತ್ತ ಓರ್ವನನ್ನು ಪೊಲೀಸರು ವಶಕ್ಕೆ ಪಡೆದು, ಶಿರಸಿಯ ಅಲೇಖ ಇಂಟರ್‌ನ್ಯಾಷನಲ್ ಕ್ವಾರಂಟೈನ್ ಸೆಂಟರ್ ನಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ಇನ್ನೋರ್ವ ಚಾಲಕನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಶಿರಸಿಯ ದೀವಗಿ ಫ್ಯಾಕ್ಟರಿಯಲ್ಲಿ ಮಹಾರಾಷ್ಟ್ರದಿಂದ ಬಂದ ಹಲವು ಚಾಲಕರಿದ್ದು, ಕೆಲವರು ಮಾತ್ರ ಪಾಸ್ ಪಡೆದು ಅನುಮತಿಯೊಂದಿಗೆ ಬಂದಿದ್ದರೆ ಇನ್ನು ಹಲವರು ಅನುಮತಿ ಪಡೆಯದೇ ನಗರದ ವಿವಿಧ ಭಾಗದಲ್ಲಿ ತಂಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ