Latest

#BoycottChineseProducts ಅಭಿಯಾನಕ್ಕೆ ಪ್ರಗತಿವಾಹಿನಿ ಬೆಂಬಲ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ದೇಶಾದ್ಯಂತ ಆರಂಭವಾಗಿರುವ #BoycottChineseProducts (ಚೀನಾದ ವಸ್ತುಗಳನ್ನು ನಿಷೇಧಿಸಿ) ಅಭಿಯಾನಕ್ಕೆ ಪ್ರಗತಿವಾಹಿನಿ ಬೆಂಬಲಿಸುತ್ತದೆ.

ಪದೇ ಪದೆ ಗಡಿ ತಂಟೆ ತೆಗೆದು ಭಾರತದ ಪಕ್ಕೆಯಲ್ಲಿ ನೆತ್ತರು ಬಸಿಯುವ ಚೀನಾದ ಹುನ್ನಾರಕ್ಕೆ ಭಾರತೀಯ ಸೈನಿಕರು ತಕ್ಕ ಉತ್ತರ ನೀಡುತ್ತಲೇ ಇದ್ದಾರೆ, ಜೊತೆಗೆ ಈಗ  ದೇಶದ ಜನಸಾಮಾನ್ಯರು ಸಹ  ಚೀನಾದ ವಸ್ತುಗಳನ್ನು ಬೈಕಾಟ್ ಮಾಡುವ ಮೂಲಕ  ಪಾಠ ಕಲಿಸಲು ಸಿದ್ಧರಾಗಿದ್ದಾರೆ.
  ಲಡಾಕ್ ಗಡಿಯಲ್ಲಿ ಮತ್ತೊಮ್ಮೆ ಚೀನಾ ಕ್ಯಾತೆ ತೆಗೆದಿದೆ. ಚೀನಾಕ್ಕೆ ಅದರದ್ದೇ ಆದ ದಾಟಿಯಲ್ಲಿ ಉತ್ತರ ನೀಡಬೇಕಾದ ಕಾಲ ಸನ್ನಿಹಿತವಾಗಿದೆ. ಚೀನಾ ಉತ್ಪಾದಿಸುವ ವಸ್ತುಗಳಿಗೆ ಭಾರತ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಈ ಹಿನ್ನೆಲೆಯಲ್ಲಿ ಚೀನಾ ವಸ್ತುಗಳನ್ನು ಭಾರತೀಯರೇ ಕೊಳ್ಳದಿದ್ದರೆ ಆ ದೇಶದ ಆರ್ಥಿಕತೆಗೆ ಭಾರೀ ಹೊಡೆತ ಬೀಳಲಿದೆ. ಈ ನಿಟ್ಟಿನಲ್ಲಿ ಭಾರತದ ಜನಸಾಮಾನ್ಯರು ಟ್ವಿಟರ್, ಫೇಸ್ ಬುಕ್ ಸೇರಿದಂತೆ
ಸೋಷಿಯಲ್ ಮೀಡಿಯಾಗಳಲ್ಲಿ #BoycottChineseProducts  ಅಭಿಯಾನ ಆರಂಭಿಸಿದ್ದಾರೆ. ಅಭಿಯಾನವನ್ನು ಬೆಂಬಲಿಸುವವರ ಸಂಖ್ಯೆ ಪ್ರತಿ ಕ್ಷಣ ಸಾವಿರಾರು ಸಂಖ್ಯೆಯಲ್ಲಿ ಹೆಚ್ಚುತ್ತಿದೆ.

ಬಾಲಿವುಡ್ ಬೆಂಬಲ

ತ್ರಿ ಈಡಿಯಟ್ಸ್ ಚಿತ್ರದ ಕತೆಗೆ ಸ್ಪೂರ್ತಿಯಾಗಿರುವ ಸೋನಮ್ ವಾಂಗ್ಚುಕ್ ಟ್ವಿಟರ್ ನಲ್ಲಿ #BoycottChineseProducts ಅಭಿಯಾನ ಆರಂಭಿಸಿದ್ದಾರೆ. Use your wallet power ಎಂಬ ತಲೆಬಹರಹದ ಅವರ ಟ್ವಿಟ್ ನಲ್ಲಿ ಚೀನಾ ಉತ್ಪಾದಿತ ವಸ್ತುಗಳನ್ನು ಕೊಳ್ಳದಂತೆ ಮನವಿ ಮಾಡಿದ್ದಾರೆ. ಅಲ್ಲದೇ ‘ ಸೇನಾ ದೇಗಿ ಬುಲ್ಲೆಟ್ ಸೆ ನಾಗರೀಕ್ ದೇಂಗೆ ವಾಲೆಟ್ ಸೆ ‘ ಎಂಬ ಅವರ ವಿಡಿಯೋ ಸಹ ಭಾರಿ ಜನಪ್ರಿಯವಾಗುತ್ತಿದೆ.
   ಈಗಾಗಲೇ ಲಕ್ಷಾಂತರ ಜನ ಅಭಿಯಾನದಲ್ಲಿ ಭಾಗಿಯಾಗಿದ್ದಾರೆ.  ಬಾಲಿವುಡ್ ನ ಖ್ಯಾತ ನಟ ಅರ್ಷದ್ ವಾರ್ಸಿ ,ರಣಬೀರ್ ಶೌರಿ ಸೇರಿದಂತೆ ಹಲವರು ಬೆಂಬಲಿಸಿರುವುದು ವಿಶೇಷ.

ಚೀನಾ ಆ್ಯಪ್ ಡಿಲೀಟ್

ಅಭಿಯಾನದಲ್ಲಿ ಪಾಲ್ಗೊಂಡಿರುವ ಹಲವರು ಚೀನಾ ಮೊಬೈಲ್ ಗಳನ್ನು ಕೊಳ್ಳುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರೆ ಇನ್ನು ಕೆಲವರು ಈಗಾಗಲೇ ಚೀನಾದ ಆ್ಯಪ್ ಗಳನ್ನು ಡಿಲೀಟ್ ಮಾಡಿರುವುದಾಗಿ ತಿಳಿಸಿದ್ದಾರೆ‌. ಭಾರತೀಯರ ಈ ದಿಟ್ಟ ಹೆಜ್ಜೆ ಚೀನಾವನ್ನು ಅಕ್ಷರಶಃ ನಡುಗಿಸಲಿದೆ ಎಂಬ ಅಭಿಪ್ರಾಯ ಜಾಗತಿಕ ಮಾರುಕಟ್ಟೆಯ ವಲಯದಲ್ಲಿ ವ್ಯಕ್ತವಾಗುತ್ತಿದೆ.

ಪ್ರಗತಿವಾಹಿನಿ ಬೆಂಬಲ

ಭಾರತೀಯರಿಗೆ ತನ್ನ ವಸ್ತುಗಳನ್ನು ಮಾರಿ, ಲಾಭದ ಹಣವನ್ನು ಪಾಕಿಸ್ತಾನದ ಉಗ್ರಗಾಮಿ ಚಟುವಟಿಕೆಗಳಿಗೆ ಚೀನಾ ಬಳಸುತ್ತಿದೆ. ಚೀನಾ ನೀಡುವ ಹಣದಿಂದ ಉಗ್ರರು ನಮ್ಮ ಸೈನಿಕರ ವಿರುದ್ಧ ಕಾರ್ಯಾಚರಣೆ ನಡೆಸುತ್ತಾರೆ.  ಚೀನಾದ ವಸ್ತುಗಳನ್ನು ಕೊಂಡರೆ ಪರೋಕ್ಷವಾಗಿ ನಾವೇ ನಮ್ಮ ಕಾಲಮೇಲೆ ಕಲ್ಲು ಹಾಕಿಕೊಂಡಂತೆ. ಈ ಹಿನ್ನೆಲೆಯಲ್ಲಿ ಚೀನಾಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಶಕ್ತವಾದ  #BoycottChineseProducts ಅಭಿಯಾನವನ್ನು ಪ್ರಗತಿವಾಹಿನಿ ಬೆಂಬಲಿಸುತ್ತದೆ. ಮೊಬೈಲ್, ಆ್ಯಪ್ ಗಳಿಂದ ಹಿಡಿದು ಕೃಷಿ ಸಲಕರಣೆಗಳು,  ಮಕ್ಕಳ ಆಟಿಕೆಯವರೆಗೆ  ನೂರಾರು ಕ್ಷೇತ್ರಗಳ ಮಾರುಕಟ್ಟೆಯಲ್ಲಿ ಚೀನಾ ಸಾಧಿಸುತ್ತಿರುವ ಪ್ರಾಬಲ್ಯವನ್ನು ಮುರಿಯಬೇಕಿದೆ. ಭಾರತೀಯರು ಚೀನಾ ಉತ್ಪಾದಿತ ವಸ್ತುಗಳನ್ನು ಕೊಳ್ಳುವುದು ನಿಲ್ಲಿಸಿದರೆ ಮಾತ್ರ ಇದು ಸಾಧ್ಯ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button