ಕೆಎಂಎಫ್‌ನಿಂದ ಅರಿಸಿನ ಮಿಶ್ರಿತ ಹಾಲು ಬಿಡುಗಡೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ವಿಶ್ವ ಹಾಲು ದಿನವಾಗಿ ಆಚರಿಸಲಾಗುತ್ತಿರುವ ಜೂನ್ ೧ ರಂದು ಕರ್ನಾಟಕ ಹಾಲು ಮಹಾಮಂಡಳಿಯು ಕೊರೋನಾದಂತಹ ಸಂದರ್ಭದಲ್ಲಿ ಜನರಲ್ಲಿ ಆರೋಗ್ಯ ವೃದ್ಧಿಗಾಗಿ ಮತ್ತು ಅವರಲ್ಲಿ ಪೌಷ್ಠಿಕಾಂಶ ಹೆಚ್ಚಳಕ್ಕಾಗಿ ಅರಿಸಿನ ಮಿಶ್ರಿತ ನಂದಿನಿ ಹಾಲನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಿದೆ ಎಂದು ಕರ್ನಾಟಕ ಹಾಲು ಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಕೊರೋನಾ ದಾಳಿ ಮಾಡಿರುವ ಈ ಸಂದರ್ಭದಲ್ಲಿ ಜನರು ಹೆಚ್ಚು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲಿ ಎಂಬ ಕಾರಣಕ್ಕೆ ಕೆಎಂಎಫ್ ಅರಿಸಿನಯುಕ್ತ ಹಾಲನ್ನು ಬಿಡುಗಡೆಗೊಳಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಬೆಂಗಳೂರ ನಗರದಲ್ಲಿ ಕೆಎಂಎಫ್‌ನ ನಾನಾ ಶ್ರೇಣಿಯ ನಂದಿನಿ ಉತ್ಪಾದನೆಯ ಮೋಬೈಲ್ ಪಾರ್ಲರ್ ವ್ಯಾನ್‌ಗಳನ್ನು ಲೋಕಾರ್ಪಣೆಗೊಳಿಸಲಾಗುತ್ತಿದೆ. ಇಲ್ಲಿ ಕೆಎಂಎಫ್ ತಯಾರಿಸುತ್ತಿರುವ ನಂದಿನಿ ಹಾಲು, ಮೊಸರು, ಐಸ್‌ಕ್ರೀಮ್, ಗಟ್ಟಿ ಹಾಲು ಸೇರಿದಂತೆ ಇತರೇ ಉತ್ಪನ್ನಗಳು ಗ್ರಾಹಕರಿಗೆ ಲಭ್ಯವಾಗಲಿವೆ ಎಂದು ಅವರು ತಿಳಿಸಿದ್ದಾರೆ.
ಗ್ರಾಹಕರ ಲಭ್ಯತೆ ಆಧಾರದ ಮೇಲಿಂದ ಮುಂದಿನ ದಿನಗಳಲ್ಲಿ ರಾಜ್ಯದ ಇತರೇ ಭಾಗಗಳಲ್ಲಿಯೂ ನಂದಿನಿ ಮೋಬೈಲ್ ಪಾರ್ಲರ್ ವ್ಯಾನ್‌ಗಳನ್ನು ವಿಸ್ತರಿಸುವ ಚಿಂತನೆ ಕೆಎಂಎಫ್‌ದ್ದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ಸೇರಿದಂತೆ ವಿಶ್ವದ ನೂರು ಕೋಟಿಗೂ ಅಧಿಕ ಜನರು ಹೈನುಗಾರಿಕೆಯಿಂದಲೇ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಈಗಲೂ ಅದನ್ನೆ ನೆಚ್ಚಿಕೊಂಡು ಜೀವನ ಸಾಗಿಸುತ್ತಿದ್ದಾರೆ. ನಿತ್ಯ ವಿಶ್ವದಾಧ್ಯಂತ ಕನಿಷ್ಠ ೬೦೦ ಕೋಟಿ ಜನರು ಹಾಲಿನ ವಿವಿಧ ರೂಪಗಳಲ್ಲಿರುವ ವಸ್ತುಗಳನ್ನು ಸೇವಿಸುತ್ತಿದ್ದಾರೆ. ಉತ್ತಮ ಆರೋಗ್ಯಕ್ಕಾಗಿ ಹಾಲನ್ನು ಸೇವನೆ ಯೋಗ್ಯ ಎಂಬ ದೃಷ್ಟಿ ಅವರಲ್ಲಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಹಾಲು ಸೇವನೆಯಿಂದ ಸಾಕಷ್ಟು ಲಾಭವಿದ್ದು, ಸ್ನಾಯು ಬೆಳವಣಿಗೆ ಪ್ರವರ್ಧಕವಾಗಿದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇರುಳು ಗಣ್ಣಿನ ಸಮಸ್ಯೆ ಇರುವವರಿಗೆ ವಿಟ್ಯಾಮಿನ್ ಎ ಒದಗಿಸುತ್ತದೆ. ಐ೧೨ ಇರುವದರಿಂದ ದೈಹಿಕ ಬೆಳವಣಿಗೆಗೆ ಇದು ಪೂರಕವಾಗಿದೆ. ಜೊತೆಗೆ ಜೀರ್ಣಕ್ರಿಯೆಗೆ ಪೂರಕವಾಗಿ ಕೆಲಸ ಮಾಡುತ್ತದೆ. ಒಣಗಿದ ಚರ್ಮಕ್ಕೆ ಇದು ಉತ್ತಮ ಮದ್ದಾಗಿದೆ. ಮೆದುಳಿನ ಕಾರ್ಯಶಕ್ತಿಯನ್ನು ವೃದ್ಧಿಸುತ್ತದೆ. ಜೊತೆಗೆ ಮೂಳೆಗಳಿಗೆ ಕ್ಯಾಲ್ಸಿಯಂ ಒದಗಿಸುತ್ತದೆ. ಹಾಲು ಆಮ್ಲೀಯ ವೇದನೆಗೆ ಪರಿಹಾರವಾಗಿದೆ. ಹೀಗಾಗಿ ಹಾಲಿನಿಂದ ಇಷ್ಟೆಲ್ಲ ಅನುಕೂಲಗಳಿರುವುದರಿಂದ ಜನರಿಗೆ ಉತ್ತಮ ಆರೋಗ್ಯದಾಯಕ ವಸ್ತುವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.
ಇಷ್ಟೆಲ್ಲ ಅನುಕೂಲವಿರುವ ಈ ಹಾಲನ್ನು ಅಭಿವೃದ್ಧಿಶೀಲ ದೇಶಗಳಲ್ಲಿ ಹಾಲಿನ ಬಳಕೆ ಮತ್ತು ಸದುಪಯೋಗವನ್ನು ಆಹಾರ ಪದ್ಧತಿಯಲ್ಲಿ ಬಳಸುವ ಕ್ರಮ ಕೈಗೊಳ್ಳುವ ಉದ್ಧೇಶದಿಂದ ಆಹಾರ ಮತ್ತು ಕೃಷಿ ಸಂಸ್ಥೆಯು ಜೂನ್ ೧ ರಂದು ವಿಶ್ವ ಹಾಲು ದಿನಾಚರಣೆಯನ್ನು ಪ್ರಾರಂಭ ಮಾಡಿದೆ. ವಿಶ್ವದ ಅನೇಕ ರಾಷ್ಟ್ರಗಳು ಹಾಲು ದಿನವನ್ನು ಆಚರಣೆ ಮಾಡುತ್ತಿವೆ. ಕೆಎಂಎಫ್ ಕೂಡ ಪ್ರತಿವರ್ಷ ಹಾಲು ದಿನವನ್ನು ಆಚರಿಸಿಕೊಂಡು ಬರುತ್ತಿದೆ. ಹಾಲಿನ ಮಹತ್ವವನ್ನು ಗ್ರಾಹಕರಿಗೆ ತಿಳಿಸುವ ನಿಟ್ಟಿನಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ. ಅದೇ ರೀತಿ ಕರ್ನಾಟಕ ಸರ್ಕಾರದ ಕ್ಷೀರಭಾಗ್ಯ ಯೋಜನೆ ಕೂಡ ವಿಶ್ವ ಹಾಲು ದಿನಾಚರಣೆ ಎಂದೇ ಜಾರಿಗೊಳಿಸಿದ್ದು ಸ್ಮರಣೀಯವಾಗಿದೆ. ಈ ಮೂಲಕ ಶಾಲಾ ಮಕ್ಕಳಿಗೆ ಉಚಿತವಾಗಿ ಹಾಲು ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button