Kannada NewsKarnataka NewsLatest

ಸುವರ್ಣ ಸೌಧಕ್ಕೆ ಕಚೇರಿ ಸ್ಥಳಾಂತರ: ಕತ್ತಿ ದಾಳಕ್ಕೆ ಸಿಎಂ ಪ್ರತ್ಯುತ್ತರ?

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:  ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ದಾಳವನ್ನು ಮಾಜಿ ಸಚಿವ ಉಮೇಶ ಕತ್ತಿ ಉರುಳಿಸಲಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನನೆಗುದಿಗೆ ಬಿದ್ದಿದ್ದ ಕಚೇರಿಗಳ ಸ್ಥಳಾಂತರ ಕಾರ್ಯಕ್ಕೆ ಹಠಾತ್ ಆದೇಶಿಸಿದ್ದಾರೆ.
ರಾಜ್ಯಮಟ್ಟದ ನಿಗದಿತ ಸರ್ಕಾರಿ ಕಚೇರಿಗಳನ್ನು ಒಂದು ತಿಂಗಳಲ್ಲಿ ಬೆಳಗಾವಿ ಸುವರ್ಣಸೌಧಕ್ಕೆ ಸ್ಥಳಾಂತರಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬುಧವಾರ ನಡೆದ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಭೆಯಲ್ಲಿ ಈ ಸೂಚನೆ ನೀಡಿದ್ದಾರೆ.
ಮುಂದಿನ ಸಭೆಯೊಳಗೆ ಹಲವು ಕಚೇರಿಗಳು ಅಲ್ಲಿ ಕೆಲಸ ನಿರ್ವಹಿಸುವುದನ್ನು ಖುದ್ದಾಗಿ ಪರಿಶೀಲಿಸುವುದಾಗಿಯೂ ಬಿಎಸ್ ವೈ ಹೇಳಿದ್ದಾರೆ.
ತಮಗೆ ಮಂತ್ರಿಸ್ಥಾನ ಮತ್ತು ತಮ್ಮ ಸಹೋದರ ರಮೇಶ ಕತ್ತಿಗೆ ರಾಜ್ಯಸಭೆ ಟಿಕೆಟ್ ಬೇಡಿಕೆ ಮುಂದಿಟ್ಟಿರುವ ಉಮೇಶ ಕತ್ತಿ, ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟು ಹೋರಾಟಕ್ಕಿಳಿಯುವ ಸಾಧ್ಯತೆ ಇಲ್ಲದಿಲ್ಲ. ಈ ಹಿನ್ನೆಲೆಯಲ್ಲಿ, ಅಂತಹ ಕೂಗು ಏಲುವುದನ್ನು ತಡೆಯುವ ಉದ್ದೇಶದಿಂದ ಯಡಿಯೂರಪ್ಪ ದಿಢೀರ್ ಸುವರ್ಣ ವಿಧಾನಸೌಧಕ್ಕೆ ಕಚೇರಿಗಳ ಸ್ಥಳಾಂತರ ನಿರ್ಧಾರ ಕೈಗೊಂಡಿದ್ದಾರೆ.
ಇಂಜಿನಿಯರ್ ಗಳ ನೇಮಕಾತಿ ಪ್ರಕ್ರಿಯೆ ವಿಳಂಬವಾಗಿರುವುದರಿಂದ ನಿರುದ್ಯೋಗಿ ಇಂಜಿನಿಯರ್ ಗಳನ್ನು ಟ್ರೈನಿಗಳೆಂದು ನೇಮಕ ಮಾಡಲು ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ.
ವಿಜಯಪುರ ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಜಮೀನನ್ನು ಈಗಾಗಲೇ ಗುರುತಿಸಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಪುನರ್ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button