ಪ್ರಗತಿವಾಹಿನಿ ಸುದ್ದಿ; ರಾಯಚೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಬೆನ್ನಲ್ಲೇ ಕ್ವಾರಂಟೈನ್ ನಲ್ಲಿರುವ ಹಲವರು ಖಿನ್ನತೆಗೊಳಗಾಗಿ ಸಾವನ್ನಪ್ಪಿದ್ದರೆ ಇನ್ನು ಕೆಲವರು ಏಕಾಏಕಿ ಸಾವನ್ನಪ್ಪುತಿದ್ದಾರೆ. ಇದೀಗ ರಾಯಚೂರಿನ ದೇವದುರ್ಗದಲ್ಲಿ ಕ್ವಾರಂಟೈನ್ ನಲ್ಲಿದ್ದ ಬಾಲಕ ಸಾವನ್ನಪ್ಪಿದ್ದಾನೆ.
ಮಹಾರಾಷ್ಟ್ರದಿಂದ ಬಂದ 14 ವರ್ಷದ ಬಾಲಕನನ್ನು ದೇವದುರ್ಗದ ಕ್ವಾರಂಟೈನ್ ಕೇಂದ್ರದಲ್ಲಿಡಲಾಗಿತ್ತು. ಈತ ಮೂಲತಃ ದೇವದುರ್ಗ ತಾಲೂಕಿನ ಮದರಕಲ್ ಗ್ರಾಮದ ನಿವಾಸಿ. ತಂದೆ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದರಿಂದ ಕುಟುಂಬವು ಅಂದೇರಿ ನಗರದಲ್ಲಿ ವಾಸವಾಗಿತ್ತು. ನಾಲ್ಕು ತಿಂಗಳ ಹಿಂದೆ ಮನೆಯಲ್ಲಿ ಕಾರ್ಯಕ್ರಮ ಇದೆ ಎಂದು ತಂದೆ-ತಾಯಿ, ತಂಗಿ ಮತ್ತು ತಮ್ಮ ಮದರಕಲ್ ಗ್ರಾಮಕ್ಕೆ ಬಂದಿದ್ದರು. ಆದರೆ ಪರೀಕ್ಷೆ ಇದ್ದರಿಂದ ಬಾಲಕ ಅಲ್ಲೇ ಉಳಿದುಕೊಂಡಿದ್ದ. ಕೊರೊನಾ ಸೋಂಕಿನಿಂದ ದೇಶಾದ್ಯಂತ ಲಾಕ್ಡೌನ್ ಘೋಷಿಸಲಾಗಿತ್ತು. ಬಸ್, ರೈಲು ಸಂಚಾರ ನಿಲ್ಲಿಸಿದ್ದರಿಂದ ಬಾಲಕ ಮುಂಬೈನಲ್ಲೇ ಉಳಿದಿದ್ದ.
ಲಾಕ್ಡೌನ್ ಸಡಿಲಿಕೆಯಿಂದಾಗಿ ಮೇ 16ರಂದು ಮಹಾರಾಷ್ಟ್ರದಿಂದ ದೇವದುರ್ಗಕ್ಕೆ ಬಂದಿದ್ದ. ಹೀಗಾಗಿ ಆತನನ್ನು ದೇವದುರ್ಗದ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು. ಈ ವೇಳೆ ಬಾಲಕನ ಗಂಟಲು ದ್ರವವನ್ನು ಕೊರೊನಾ ಟೆಸ್ಟ್ಗೆ ಕಳುಹಿಸಿದಾಗ ರಿಪೋರ್ಟ್ ನೆಗೆಟಿವ್ ಬಂದಿತ್ತು. ಆದರೆ ಬಾಲಕ ಕಳೆದ ಎರಡ್ಮೂರು ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ. ಇಂದು ಆತನನ್ನು ಆಸ್ಪತ್ರೆಗೆ ದಾಖಲಿಸುವ ಮಾರ್ಗಮಧ್ಯೆಯೇ ಬಾಲಕ ಸಾವನ್ನಪ್ಪಿದ್ದಾನೆ. ಇದೀಗ ಮತ್ತೆ ಕೊರೊನಾ ಟೆಸ್ಟ್ಗಾಗಿ ಬಾಲಕನ ಮೃತದೇಹದಿಂದ ಗಂಟಲು ದ್ರವವನ್ನು ತೆಗೆದು ಲ್ಯಾಬ್ಗೆ ಕಳುಹಿಸಲಾಗಿದ್ದು ವರದಿಗಾಗಿ ಕಾಯಲಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ