
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ವಿಶ್ವ ಪರಿಸರ ದಿನಾಚರಣೆ ಹಿನ್ನಲೆಯಲ್ಲಿ ಭೂಮಿಯ ಸಮೃದ್ಧ ಜೀವವೈವಿಧ್ಯತೆ ರಕ್ಷಣೆ ಮಾಡಲು ನಾವು ಪ್ರತಿಜ್ಞಾಬದ್ದರಾಗಿದ್ದೇವೆ ಎಂದು ಪ್ರಧಾನಿ ಮೋದಿ ದೇಶದ ಜನತೆಗೆ ಸಂದೇಶ ರವಾನಿಸಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಪ್ರಧಾನಿ ಮೋದಿ, ಸಾಧ್ಯವಾದಷ್ಟು ಮರಗಳನ್ನು ನೆಡಿ. ಪ್ರಕೃತಿಯ ಸೇವೆಗಾಗಿ ಸಂಕಲ್ಪ ಮಾಡಿ. ಈ ಮೂಲಕ ಪ್ರಕೃತಿ ಜೊತೆ ಬಾಂಧವ್ಯ ಬೆಳೆಸಿಕೊಳ್ಳಿ. ಭೂಮಿಯ ಸಮೃದ್ಧ ಜೀವವೈಧ್ಯತೆಯನ್ನು ನಾವು ಕಾಪಾಡಬೇಕಿದೆ. ಭೂಮಿಯನ್ನು ಹಂಚಿಕೊಳ್ಳುವ ಸಸ್ಯ ಸಂಪತ್ತು ಹಾಗೂ ಪ್ರಾಣಿಗಳು ಸಮೃದ್ಧವಾಗಿರುವುದನ್ನು ಖಚಿಪಡಿಸಲು ಸಾಧ್ಯವಾದಷ್ಟು ಒಗ್ಗಟ್ಟಾಗಿ ಕೆಲಸ ಮಾಡಬೇಕು. ಮುಂಬರುವ ಪೀಳಿಗೆಗೆ ಇನ್ನಷ್ಟು ಉತ್ತಮವಾದ ಗ್ರಹವನ್ನು ಬಿಟ್ಟುಕೊಡಬೇಕು ಎಂದು ಹೇಳಿದ್ದಾರೆ.
ಜೂನ್ 5 ಇಡೀ ಜಗತ್ತು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸುತ್ತಿದೆ. ಈ ಬಾರಿ ಜೈವಿಕ ವೈವಿಧ್ಯತೆ ಪ್ರಮುಖ ವಿಷಯವಾಗಿದೆ. ಸಮಕಾಲೀನ ಪರಿಸ್ಥಿತಿಯಲ್ಲಿ ಈ ವಿಷಯ ಹೆಚ್ಚಿನ ಮಹತ್ವದ್ದಾಗಿದೆ. ಕೊರೊನಾ ವೈರಸ್ ಲಾಕ್ಡೌನ್ನಿಂದ ಕಳೆದ ಕೆಲವು ಸಮಯಗಳಿಂದ ಜೀವನದ ಆವೇಗವು ಕುಂಠಿತವಾಗಿದೆ. ಅದೇ ಸಂದರ್ಭದಲ್ಲಿ ನಮ್ಮ ಸುತ್ತುಮುತ್ತಲಿನ ಪರಿಸರ ಜೀವವೈವಿಧ್ಯತೆಯನ್ನು ಹತ್ತಿರದಿಂದ ನೋಡುವ ಅವಕಾಶ ದೊರಕಿದೆ ಎಂದಿದ್ದಾರೆ.
ಜನರು ಈಗ ಕಣ್ಮರೆಯಾದ ಅನೇಕ ಪಕ್ಷಿಗಳ ಚಿಲಿಪಿಲಿಯನ್ನು ಆಲಿಸುತ್ತಿದ್ದಾರೆ. ಅನೇಕ ಪ್ರದೇಶಗಳಲ್ಲಿ ಪ್ರಾಣಿಗಳ ಮುಕ್ತ ಸಂಚಾರದ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣುತ್ತಿದ್ದೇವೆ.
‘ಜಲವಿದ್ದರೆ ಜೀವ’, ‘ಜಲವಿದ್ದರೆ ನಾಳೆ’ ಇರುತ್ತದೆ ಎಂಬ ವಾಕ್ಯವನ್ನು ಪದೇ ಪದೇ ಕೇಳುತ್ತಿದ್ದೇವೆ. ಆದರೆ ಜಲದೊಂದಿಗೆ ನಮಗೆ ಜವಾಬ್ದಾರಿಯು ಇದೆ. ಮಳೆ ನೀರನ್ನು ನಾವು ರಕ್ಷಿಸಬೇಕು. ಮಳೆ ನೀರಿನ ಪ್ರತಿಯೊಂದು ಬಿಂದುವನ್ನು ಸಂರಕ್ಷಿಸಬೇಕು. ಗ್ರಾಮದಲ್ಲಿ ಮಳೆ ನೀರನ್ನು ಹೇಗೆ ಸಂರಕ್ಷಿಸಬಹುದು ಎಂಬುದಕ್ಕೆ ಪಾರಂಪರಿಕ ಸರಳವಾದ ಮಾರ್ಗಗಳಿವೆ. ಅಂತಹ ಸರಳ ಮಾರ್ಗಗಳಿಂದ ನಾವು ನೀರನ್ನು ರಕ್ಷಿಸಬಹುದಾಗಿದೆ. ಐದು, ಏಳು ದಿನ ನೀರು ನಿಂತರೆ ಭೂ ತಾಯಿಯಲ್ಲಿ ಸೇರುತ್ತದೆ. ಅದೇ ನೀರು ಜೀವನದ ಶಕ್ತಿಯಾಗಿ ಪರಿವರ್ತನೆಯಾಗಲಿದೆ. ಹಾಗಾಗಿ ಈ ಮಳೆಗಾಲದಲ್ಲಿ ನಾವು ನೀರನ್ನು ರಕ್ಷಿಸುವ ಪಣತೊಡಬೇಕಾಗಿದೆ ಎಂದು ಕರೆ ನೀಡಿದ್ದಾರೆ.