ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ತುಮಕೂರಿನ ಸಿದ್ದಗಂಗಾ ಶ್ರೀಗಳ ನಿಧನಕ್ಕೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಕರ್ನಾಟಕ ರತ್ನ, ತ್ರಿವಿಧ ದಾಸೋಹಿ, ಸಿದ್ದಗಂಗೆಯ ಪರಮಪೂಜ್ಯ ಶ್ರೀ ಡಾ.ಶಿವಕುಮಾರ ಮಹಾಸ್ವಾಮೀಜಿ ಅವರು ಲಿಂಗೈಕ್ಯರಾಗಿರುವುದು ಸಮಸ್ತ ದೇಶ ಹಾಗೂ ನಾಡಿಗೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಅವರು ತೀವ್ರ ಶೋಕವನ್ನು ವ್ಯಕ್ತಪಡಿಸಿದ್ದಾರೆ.
ಡಾ.ಶಿವಕುಮಾರ ಸ್ವಾಮೀಜಿಯವರು ಸಾಮಾಜಿಕ ಹಾಗೂ ಧಾರ್ಮಿಕ ಸೇವೆಗಳಿಂದ ನಡೆದಾಡುವ ದೇವರಾಗಿದ್ದರು. ೧೨ನೇ ಶತಮಾನದ ಬಸವಣ್ಣನವರ ಕಾಯಕ ದಾಸೋಹ ಸಿದ್ಧಾಂತಗಳನ್ನು ಅನುಕರಣೆಗೆ ತರುವ ಮೂಲಕ ನಾಡಿನ ಸಾವಿರಾರು ಬಡ ಮಕ್ಕಳಿಗೆ ಆಶ್ರಯದಾತರಾಗಿದ್ದರು. ಅಣ್ಣ ಬಸವಣ್ಣನವರ ಜೀವನಾದರ್ಶಗಳನ್ನು ನಾಡಿನುದ್ದಗಲಕ್ಕೂ ಪಸರಿಸಿದ್ದರು.
ಶ್ರೀ ಸಿದ್ದಗಂಗಾ ಶ್ರೀಗಳು ತಮ್ಮ ಸಾಮಾಜಿಕ ಹಾಗೂ ಧಾರ್ಮಿಕ ಸೇವೆ, ಅನುಕರಣೀಯ ಬದುಕಿನಿಂದ ಕನ್ನಡ ನಾಡಿನ ಕೀರ್ತಿಯನ್ನು ಜಾಗತಿಕವಾಗಿ ವಿಸ್ತರಿಸಿದ್ದರು. ಕೋಟ್ಯಾಂತರ ಭಕ್ತಾದಿಗಳ ಆರಾಧಾಕರಾಗಿದ್ದ ಪೂಜ್ಯರು ’ಕಾಯಕಯೋಗಿ’, ’ನಡೆದಾಡುವ ದೇವರು’ ಅಭಿದಾನಕ್ಕೆ ಪಾತ್ರರಾಗಿದ್ದರು. ಪೂಜ್ಯರು ಇಂದು ಬಯಲಿನಲ್ಲಿ ಬಯಲಾಗಿರುವುದು ನಾಡಿಗೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ಡಾ.ಪ್ರಭಾಕರ ಕೋರೆಯವರು ಶೋಕ ವ್ಯಕ್ತಪಡಿಸಿ, ಕೆಎಲ್ಇ ಸಂಸ್ಥೆಯ ಸಮಸ್ತ ಪರಿವಾರದ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಿದ್ದಾರೆ.
ಸಂಸದ ಸುರೇಶ ಅಂಗಡಿ, ಶೋಕ ವ್ಯಕ್ತಪಡಿಸಿ, ಸಿದ್ದಗಂಗಾ ಶ್ರೀಗಳಿಗೆ ಭಾರತರತ್ನ ನೀಡಬೇಕು ಎಂದು ಪ್ರಧಾನಿಯವರನ್ನು ಕೋರುವುದಾಗಿ ತಿಳಿಸಿದ್ದಾರೆ.
ನಾಡಿನ ಶತಾಯುಷಿ, ನಿತ್ಯ ದಾಸೋಹಿ ಸಿದ್ದಗಂಗಾ ಶ್ರೀಮಠದ ಶ್ರೀ ಡಾ.ಶಿವಕುಮಾರ ಮಹಾಸ್ವಾಮೀಜಿ ಅವರು ಲಿಂಗೈಕ್ಯರಾಗಿರುವುದು ಸಮಸ್ತ ದೇಶ ಹಾಗೂ ನಾಡಿಗೆ ತುಂಬಲಾಗದ ನಷ್ಟವನ್ನುಂಟು ಮಾಡಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ ಅವರು ತೀವ್ರ ಶೋಕವನ್ನು ವ್ಯಕ್ತಪಡಿಸಿದ್ದಾರೆ.
ಡಾ.ಶಿವಕುಮಾರ ಸ್ವಾಮೀಜಿಯವರು ಸಾಮಾಜಿಕ ಹಾಗೂ ಧಾರ್ಮಿಕ ಸೇವೆಗಳಿಂದ ನಡೆದಾಡುವ ದೇವರಾಗಿದ್ದರು. ಬಸವಣ್ಣನವರ ಕಾಯಕ ದಾಸೋಹ ತತ್ತ್ವಗಳನ್ನು ತಮ್ಮ ನಡೆ ನುಡಿಯಲ್ಲಿ ತರುವ ಮೂಲಕ ಇಂದಿನ ಸಮಾಜಕ್ಕೆ ಅನುಕರಣೀಯರಾಗಿದ್ದಾರೆ. ಲಕ್ಷಾಂತರ ವಿದ್ಯಾರ್ಥಿಗಳಿಗೆ ಉಚಿತವಾದ ವಸತಿ ಊಟ ಹಾಗೂ ಶಿಕ್ಷಣವನ್ನು ನೀಡುವ ಮೂಲಕ ಅವರ ಬದುಕಿಗೆ ಶ್ರೀರಕ್ಷೆಯನ್ನು ನೀಡಿದವರು. ಕರ್ನಾಟಕದ ಕೀರ್ತಿ ಪತಾಕೆಯನ್ನು ಬಾನೆತ್ತರಿಗೆ ಹಾರಿಸಿದರು. ಅಂತೆಯೆ ಕೋಟ್ಯಾಂತರ ಜನರು ಪೂಜ್ಯರಿಗೆ ತಲೆಬಾಗುತ್ತಿರುವುದು ಸೂರ್ಯನಷ್ಟೇ ಸತ್ಯ ಎಂದು ಮಹಾಂತೇಶ ಕವಟಗಿಮಠ ಅವರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಮಾಜಿ ಸಚಿವ ಬಸವರಾಜ ಹೊರಟ್ಟಿ ತೀವ್ರ ಸಂತಾಪ ವ್ಯಕ್ತಪಡಿಸಿ, ಶ್ರೀಗಳ ಸೇವೆಯನ್ನು ಸ್ಮರಿಸಿದ್ದಾರೆ.
ನಡೆದಾಡುವ ದೇವರು, ಶತಮಾನದ ವಿಶ್ವರತ್ನ, ಸಮಾಜಶಿಲ್ಪಿ ಸಿದ್ಧಗಂಗಾ ಡಾ. ಶಿವಕುಮಾರಸ್ವಾಮೀಜಿ ಅವರ ಶಿವೈಕ್ಯ ಸಂಗತಿ ದೇಶ ಮತ್ತು ರಾಜ್ಯಕ್ಕೆ ನಮ್ಮ ಧಾರ್ಮಿಕ ಕ್ಷೇತ್ರಕ್ಕೆ ತುಂಬಲಾಗದ ಅಪಾರ ಹಾನಿ ಉಂಟು ಮಾಡಿದೆ ಎಂದು ಶಾಸಕ ಅನಿಲ ಬೆನಕೆ ಕೂಡ ಸಿದ್ದಗಂಗಾ ಶ್ರೀಗಳ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ
ಶಿಕ್ಷಣ, ಧಾರ್ಮಿಕ ಶೃದ್ಧೆ, ಬಡತನ ನಿರ್ಮೂಲನೆ, ಮಾನವತ್ವ, ಸಹೋದರತ್ವ ಹಾಗೂ ಶಿವತತ್ವ ಪ್ರಚುರಪಡಿಸುವಲ್ಲಿ ಕಳೆದ 90ವರ್ಷಗಳಿಂದ ಅವರು ಮಾಡಿದ ನಿರಂತರ ಸೇವೆ ಬಣ್ಣಿಸಲಸಾಧ್ಯ. 112ವರ್ಷಗಳ ಸಂಪೂರ್ಣ ಅರ್ಥಗರ್ಭಿತ ಜೀವನ ಸಮಾಜ ಸುಧಾರಣೆಗಾಗಿ ನಡೆಸಿ ವಿಶ್ವರತ್ನರಾಗಿರುವ ದಿವಂಗತ ಶ್ರೀಗಳಿಗೆ ಭಾರತರತ್ನ ಸಿಗಬೇಕು ಎಂಬುವುದು ನನ್ನ ಒತ್ತಾಸೆ.
ಅಮಿತ ಶೋಕ ತಡೆದುಕೊಳ್ಳುವ ಶಕ್ತಿಯನ್ನು ಶಿವನು ಅವರ ಕೋಟ್ಯಾನು ಕೋಟಿಭಕ್ತವೃಂದಕ್ಕೆ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಸತತ ಎಂಟು ದಶಕಗಳ ಕಾಲ ಈ ನಾಡಿಗೆ ಸ್ಮರಣೀಯ ಸೇವೆ ಸಲ್ಲಿಸಿರುವ ತುಮಕೂರಿನ ಸಿದ್ಧಗಂಗಾ ಕ್ಷೇತ್ರದ ಡಾ. ಶಿವಕುಮಾರ ಮಹಾಸ್ವಾಮಿಗಳು ನಮ್ಮ ಮಧ್ಯದಲ್ಲಿ ಬದುಕಿ ಬಾಳಿದ ನಡೆದಾಡುವ ದೇವರಾಗಿದ್ದರು ಎಂದು ಮಾಜಿ ಸಚಿವ ಎ.ಬಿ.ಪಾಟೀಲ ಶೋಕ ವ್ಯಕ್ತಪಡಿಸಿದ್ದಾರೆ. ಶಾಲಾ-ಕಾಲೇಜುಗಳನ್ನು ಪ್ರಾರಂಭಿಸಿ ಬಡ ಮಕ್ಕಳಿಗೆ ಅನ್ನ-ಆಶ್ರಯ ನೀಡಿ ವಿದ್ಯಾದಾನ ಮಾಡುತ್ತ ಅವರ ಬಾಳನ್ನು ಬೆಳಗಿದವರು. ಅವರು ನಮ್ಮ ದಿನಮಾನದ ಸಂತಶ್ರೇಷ್ಠರು. ಬಸವಾದಿ ಶರಣರ ದಾಸೋಹ ತತ್ತ್ವವನ್ನು ಆಧುನಿಕ ದಿನಮಾನದಲ್ಲಿ ಸಾಕಾರಗೊಳಿಸಿದ ಪುಣ್ಯಪುರುಷರು. ಇಂದು ಅವರು ಬಯಲಿನಲ್ಲಿ ಬಯಲಾದುದು ಸಮಸ್ತ ಜನತೆಯನ್ನು ಶೋಕಸಾಗರದಲ್ಲಿ ಮುಳುಗಿಸಿದಂತಾಗಿದೆ ಎಂದು ಎ.ಬಿ.ಪಾಟೀಲ ಕಂಬನಿ ಮಿಡಿದಿದ್ದಾರೆ.
ತುಮಕೂರಿನ ಸಿದ್ದಗಂಗಾಮಠದ ಶತಾಯುಷಿ ಡಾ. ಶಿವಕುಮಾರ ಮಹಾಸ್ವಾಮಿಜಿಗಳ ನಿಧನಕ್ಕೆ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ಶೋಕ ವ್ಯಕ್ತಪಡಿಸಿದ್ದಾರೆ. ಸಮಾಜದ ಎಲ್ಲ ಬಡ ಮಕ್ಕಳಿಗೆ ಅನ್ನ-ಆಶ್ರಯ ನೀಡಿ ವಿದ್ಯಾದಾನ ಮಾಡುತ್ತ ಅವರ ಬಾಳನ್ನು ಬೆಳಗಿದವರು. ತ್ರಿವಿಧ ದಾಸೋಹಿಗಳಾದ ಶ್ರೀಗಳು ಈ ನಾಡಿಗೆ ತನ್ಮೂಲಕ ನಮ್ಮ ರಾಷ್ಟ್ರಕ್ಕೆ ಕೊಟ್ಟ ಕೊಡುಗೆ ಅಪೂರ್ವವಾದುದು ಎಂದು ಪ್ರಮೋದ ಮುತಾಲಿಕ ಕಂಬನಿ ಮಿಡಿದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ