Latest

ರಾಮ ಮಂದಿರ ನಿರ್ಮಾಣ ಕಾಮಗಾರಿಗೆ ನಾಳೆ ಶಿಲಾನ್ಯಾಸ

ಪ್ರಗತಿವಾಹಿನಿ ಸುದ್ದಿ; ಅಯೋಧ್ಯೆ: ರಾಮ ಮಂದಿರ ನಿರ್ಮಾಣ ಕಾಮಗಾರಿಗೆ ನಾಳೆ ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಘೋಷಿಸಿದೆ.

ಜೂನ್ 10ರಂದು ಬೆಳಗ್ಗೆ 8ರಿಂದ 10 ಗಂಟೆವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಮೊದಲು ಉದ್ದೇಶಿತ ಮಂದಿರ ನಿರ್ಮಾಣದ ಸ್ಥಳದಲ್ಲಿರುವ ಕುಬೇರ ತಿಲ ಮಂದಿರದಲ್ಲಿ ಈಶ್ವರನಿಗೆ ರುದ್ರಾಭಿಷೇಕ ನೆರವೇರಿಸಲಾಗುವುದು. ಲಂಕೆಗೆ ಯುದ್ಧಕ್ಕೆ ಹೊರಡುವ ಮುನ್ನ ಶ್ರೀರಾಮ ಈಶ್ವರನನ್ನು ಪ್ರಾರ್ಥಿಸಿದ್ದರು. ಹೀಗಾಗಿ ರುದ್ರಾಭಿಷೇಕದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ಬಳಿಕ ವಿಧ್ಯುಕ್ತವಾಗಿ ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ಟ್ರಸ್ಟ್‌ ವಕ್ತಾರ ಮಹಾಂತ ಕಮಲನಯನ ದಾಸ್‌ ತಿಳಿಸಿದ್ದಾರೆ.

ರಾಮನವಮಿಯಂದೇ (ಏ.22) ಶಿಲಾನ್ಯಾಸ ನೆರವೇರಿಸಲು ನಿರ್ಧರಿಸಲಾಗಿತ್ತಾದರೂ, ಕೊರೊನಾ ಲಾಕ್‌ಡೌನ್‌ ಕಾರಣದಿಂದ ಮುಂದೂಡಲಾಗಿತ್ತು.

ಈಗಾಗಲೇ ರಾಮಲಲ್ಲಾ ವಿಗ್ರಹವನ್ನು ತಾತ್ಕಲಿಕ ಮಂದಿರಕ್ಕೆ ಸ್ಥಳಾಂತರಿಸಲಾಗಿದ್ದು, ಮೇ 11ರಂದು ಕಟ್ಟಡ ನಿರ್ಮಾಣ ಸ್ಥಳ ಸಮತಟ್ಟುಗೊಳಿಸುವ ಕಾಮಗಾರಿ ಆರಂಭಿಸಿದ್ದು, ಆ ವೇಳೆ ಹಲವು ಶಿವಲಿಂಗ ಹಾಗೂ ಹಲವು ವಿಗ್ರಹಗಳು ಪತ್ತೆಯಾಗಿದ್ದವು. ಟ್ರಸ್ಟ್‌ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲ ದಾಸ್‌ ಇತ್ತೀಚೆಗೆ ಅಯೋಧ್ಯೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ರಾಮ ಮಂದಿರ ನಿರ್ಮಾಣದ ಉದ್ದೇಶದಿಂದಲೇ 1985ರಲ್ಲಿ ಅಸ್ತಿತ್ವಕ್ಕೆ ಬಂದ ರಾಮ ಜನ್ಮಭೂಮಿ ನ್ಯಾಸ್‌ ಮಂದಿರದ ವಿನ್ಯಾಸ ಸಿದ್ಧಪಡಿಸಿತ್ತು. ಸಣ್ಣಪುಟ್ಟ ಬದಲಾವಣೆಗಳೊಂದಿಗೆ ವಿಶ್ವ ಹಿಂದೂ ಪರಿಷತ್‌ ಅಂಗಸಂಸ್ಥೆಯಾದ ನ್ಯಾಸ್‌ ರೂಪಿಸಿದ ವಿನ್ಯಾಸದಂತೆಯೇ ಎರಡು ಅಂತಸ್ತಿನ ಭವ್ಯ ಮಂದಿರ ನಿರ್ಮಿಸಲಾಗುವುದು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಈಗಾಗಲೇ ಘೋಷಿಸಿದೆ. ತಲಾ 16 ಅಡಿ ಎತ್ತರದ 424 ಕೆತ್ತನೆಯ ಕಂಬಗಳನ್ನು ನಿರ್ಮಾಣಕ್ಕೆ ಬಳಸಿಕೊಳ್ಳಲಾಗುತ್ತದೆ. ಮಂದಿರದ ಆವರಣದಲ್ಲಿ ಸೀತಾ ರಸೋಯಿ (ಪಾಕಶಾಲೆ), ಧರ್ಮಶಾಲೆ, ಭಜನಾ ಮಂದಿರ, ರಂಗಮಂಟಪಗಳು ಇರಲಿವೆ. ಗರ್ಭಗುಡಿ ಹಾಗೂ ಗೋಪುರವನ್ನು ವಿಶೇಷವಾಗಿ ರೂಪಿಸಲು ನಿರ್ಧರಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button