ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಕೆಎಲ್ಇ ಶಿಕ್ಷಣ ಸಂಸ್ಥೆಯು ಬರುವ ಜನೇವರಿ 26 ರಂದು ಜೆಎನ್ಎಂಸಿ ಆವರಣದಲ್ಲಿ ಸ್ಮಾರಕ ರಾಷ್ಟ್ರಧ್ವಜವನ್ನು ಹಾರಿಸಲಿದೆ. ನೂರು ಅಡಿ ಎತ್ತರದ ಧ್ವಜ ಸ್ತಂಭದ ಮೇಲೆ ಹತ್ತು ಕಿಲೋ ತೂಕದ, ಇಪ್ಪತ್ತು ಅಡಿ ಉದ್ದ ಮತ್ತು 30 ಅಡಿ ಅಗಲದ ಈ ಸ್ಮಾರಕ ಧ್ವಜಾರೋಹಣವನ್ನು ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆಯವ ರು ನೆರವೇರಿಸಲಿದ್ದಾರೆ.
ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿಯೇ ಮೊಟ್ಟ ಮೊದಲ ಸ್ಮಾರಕ ಧ್ವಜಾರೋಹಣ ಇದಾಗಲಿದೆ ಎಂದು ಜೆಎನ್ಎಂಸಿ ಾಡಳಿತಾಧಿಕಾರಿ ಎಸ್.ಜಿ.ಪಾಟೀಲ ತಿಳಿಸಿದ್ದಾರೆ.
2002 ರಲ್ಲಿ ಕೇಂದ್ರ ಸರಕಾರವು ಧ್ವಜ ನಿಯಮಾವಳಿಗೆ ತಂದ ತಿದ್ದುಪಡಿಯ ಪ್ರಕಾರ ರಾಷ್ಟ್ರಧ್ವಜವನ್ನು ಸೂರ್ಯೋದಯದ ಸಮಯದಲ್ಲಿ ಹಾರಿಸಿ ಸೂರ್ಯಾಸ್ತದ ಸಮಯದಲ್ಲಿ ಕೆಳಗಿಳಿಸುವುದು ಕಡ್ಡಾಯವಾಗಿದೆ. ಇದಕ್ಕೂ ಮೊದಲು ಧ್ವಜವನ್ನು ಹಗಲು ರಾತ್ರಿ ಹಾರಿಸಲಾಗುತ್ತಿತ್ತು. ಆದರೆ ಉದ್ಯಮಿ ನವೀನ್ ಜಿಂದಾಲ ಅವರ ಪ್ರಯತ್ನದ ಫಲವಾಗಿ ಧ್ವಜ ನಿಯಮಾವಳಿಗೆ ಕೇಂದ್ರ ಸರಕಾರ ತಿದ್ದುಪಡಿ ತಂದಿತು.
ಅತಿ ಎತ್ತರದಲ್ಲಿ ಹಾರಿಸಲಾಗುವ ರಾಷ್ಟ್ರಧ್ವಜಕ್ಕೆ ಸ್ಮಾರಕ ಧ್ವಜ ಎಂದು ಕರೆಯಲಾಗುತ್ತದೆ. ಈ ಧ್ವಜ ಮಾತ್ರ ವರ್ಷದ 365 ದಿನಗಳ ಕಾಲವೂ ಸ್ತಂಭದ ಮೇಲೆ ಹಗಲಿರುಳು ಹಾರಾಡುತ್ತಿರುತ್ತದೆ. ಈ ಧ್ವಜವನ್ನು ಪಾಲಿಸ್ಟರ್ ಬಟ್ಟೆಯಿಂದ ತಯಾರಿಸಲಾಗಿರುತ್ತದೆ. ವಾತಾವರಣದಲ್ಲಿ ಆಗುವ ಬದಲಾವಣೆಗಳು ಧ್ವಜದ ಮೇಲೆ ಪರಿಣಾಮ ಬೀರಬಾರದೆಂಬ ದೃಷ್ಟಿಯಿಂದ ಪಾಲಿಸ್ಟರ್ ಬಟ್ಟೆಯಿಂದ ಸಿದ್ಧಪಡಿಸಲಾಗುತ್ತದೆ. ಧ್ವಜದ ಮಧ್ಯೆ ಅಶೋಕ ಚಕ್ರವನ್ನು ವಿಶೇಷ ಮುದ್ರಣ ವ್ಯವಸ್ಥೆಯ ಮೂಲಕ ಮುದ್ರಿಸಲಾಗುತ್ತದೆ.
ಇಂಥ ಸ್ಮಾರಕ ಧ್ವಜಗಳು ಸದ್ಯ ಭಾರತ- ಪಾಕಿಸ್ತಾನ ನಡುವಿನ ವಾಘಾ ಗಡಿ, ಎಲ್ಲ ವಿಮಾನ ನಿಲ್ದಾಣಗಳು, ಲೈಟ್‌ಹೌಸ್ ಗಳು, ರಾಜಭವನಗಳು, ಮುಂಬಯಿ ಹುತಾತ್ಮಾ ಚೌಕ, ಜಿಂದಾಲ ವಿಶ್ವವಿದ್ಯಾಲಯಗಳಲ್ಲಿವೆ. ಬೆಳಗಾವಿ ಕೋಟೆ ಕೆರೆಯ ಆವರಣದಲ್ಲಿ ೧೧೦ ಮೀಟರ್ ಎತ್ತರದ ಸ್ಮಾರಕ ಧ್ವಜವನ್ನು ಮಹಾನಗರ ಪಾಲಿಕೆ ಸ್ಥಾಪಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ