Kannada NewsKarnataka News
ಬಹಿರಂಗ ಸಭೆಯಲ್ಲೇ ಸಚಿವ ರಮೇಶ್ ಜಾರಕಿಹೊಳಿಗೆ ಎಚ್ಚರಿಕೆ ಕೊಟ್ಟ ಸಚಿವೆ ಶಶಿಕಲಾ ಜೊಲ್ಲೆ
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ : ನಿಪ್ಪಾಣಿ ನನ್ನ ಕ್ಷೇತ್ರ. ನನ್ನ ಕ್ಷೇತ್ರದ ಸಮಸ್ಯೆ ನಾನು ಬಗೆಹರಿಸುತ್ತೇನೆ. ನನ್ನತ್ರ ಆಗದಿದ್ದಲ್ಲಿ ನಾನೇ ನಿಮ್ಮತ್ರ ಬರುತ್ತೇನೆ. ಸುಮ್ಮನೆ ತಪ್ಪು ಮಾಹಿತಿ ಕೊಡಲು ಹೋಗಬೇಡಿ ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿಗೆ ಬಹಿರಂಗ ಸಭೆಯಲ್ಲೇ ಎಚ್ಚರಿಕೆ ನೀಡಿದ್ದಾರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ.
ಸಮಸ್ಯೆ ಹೇಳಿಕೊಂಡು ಬಂದ ನಿಪ್ಪಾಣಿ ಕ್ಷೇತ್ರದ ಕಾರದಗಾ ಗ್ರಾಮದ ವ್ಯಕ್ತಿಗೆ ನನ್ನ ಬಳಿ ವೈಯಕ್ತಿಕವಾಗಿ ಬಂದು ಭೇಟಿ ಆಗಿ ಎಂದು ರಮೇಶ ಜಾರಕಿಹೊಳಿ ಹೇಳಿದರು. ಇದರಿಂದ ಕೆರಳಿದ ಶಶಿಕಲಾ ಜೊಲ್ಲೆ, ನಿಮ್ಮ ಹತ್ತಿರ ಏಕೆ ಬರಬೇಕು? ನನ್ನ ಕ್ಷೇತ್ರದ ಸಮಸ್ಯೆ ಪರಿಹರಿಸಲು ನಾನಿದ್ದೇನೆ ಎಂದು ನೇರವಾಗಿ ಎಚ್ಚರಿಕೆ ನೀಡಿದರು.
ಚಿಕ್ಕೋಡಿ ಲೋಕೋಪಯೋಗಿ ಇಲಾಖೆ ಸಭಾ ಭವನದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಘಟನೆ ನಡೆಯಿತು. ರಮೇಶ್ ಜಾರಕಿಹೊಳಿ ಮಾತಿಗೆ ಕೆಂಡಾಮಂಡಲರಾದ ಶಶಿಕಲಾ ಜೊಲ್ಲೆ, ಕಾರದಗಾ ಗ್ರಾಮಕ್ಕೆ ಸ್ವತಃ ನಾನು ಸಾಕಷ್ಟು ಬಾರಿ ಹೋಗಿದ್ದೇನೆ. ಅಲ್ಲಿಯ ಎಲ್ಲ ವಿಚಾರ ನನಗೆ ಗೊತ್ತು. ಈ ವ್ಯಕ್ತಿ ನನ್ನ ಬಳಿ ಒಮ್ಮೆಯೂ ಸಮಸ್ಯೆ ಹೇಳಿಲ್ಲ. ಏನಿದ್ದರೂ ನನ್ನ ಬಳಿ ಹೇಳಲಿ. ನಾನು ಬಗೆಹರಿಸುತ್ತೇನೆ. ನನ್ನ ಹತ್ತಿರ ಆಗದಿದ್ದಲ್ಲಿ ನಿಮ್ಮ ಬಳಿ ನಾನೇ ಕಳಿಸುತ್ತೇನೆ. ತಪುಪ ಮಾಹಿತಿ ನೀಡಬೇಡಿ ಎಂದು ಕಿಡಿಕಾರಿದರು.
ಕಾರದಗಾ ಗ್ರಾಮದಲ್ಲಿ ಕಳೆದ ವರ್ಷ ಪ್ರವಾಹದಲ್ಲಿ ಬಿದ್ದ ಮನೆಗಳ ಮರುನಿರ್ಮಾಣ ವಿಚಾರವಾಗಿ ಚರ್ಚೆ ನಡೆಯಿತು. ನಿಪ್ಪಾಣಿ ಮತಕ್ಷೇತ್ರದ ಕಾರದಗಾ ಗ್ರಾಮದ ವ್ಯಕ್ತಿಗೆ ಸಚಿವ ರಮೇಶ್ ನನ್ನ ಬಳಿ ಬನ್ನಿ ಎಂದು ಹೇಳಿದ ಮಾತಿಗೆ ಶಶಿಕಲಾ ಜೊಲ್ಲೆ ಗರಂ ಆದರು.
ರಮೇಶ ಜಾರಕಿಹೊಳಿ ಅವರಿಂದ ಮೈಕ್ ಪಡೆದು ಮಾತನಾಡಿದ ಜೊಲ್ಲೆ, ಮೊದಲು ನೀವು ನನ್ನ ಬಳಿ ಬನ್ನಿ, ನನ್ನ ಕೈಯಿಂದ ಸಮಸ್ಯೆ ಬಗೆಹರಿಸಲಾಗದಿದ್ದರೆ ರಮೇಶ ಜಾರಕಿಹೊಳಿ ಬಳಿ ನಾನೇ ಕರೆದುಕೊಂಡು ಬರ್ತಿನಿ ಎಂದರು.
ಸಚಿವೆಯ ಈ ಕಡಕ್ ಮಾರುತ್ತರಕ್ಕೆ ಇಡೀ ಸಭೆ ಆವಾಕ್ಕಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ