ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಭಾರತ-ಚೀನಾ ಸಂಘರ್ಷ ಹಾಗೂ 20 ಭಾರತೀಯ ಯೋಧರು ಸಂಘರ್ಷದಲ್ಲಿ ಹುತಾತ್ಮರಾದ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಭಾರತದ ಭೂಮಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಚೀನಾ ದೇಶಕ್ಕೆ ಒಪ್ಪಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ರಾಹುಲ್ ಗಾಂಧಿ, ಅದು ನಿಜಕ್ಕೂ ಚೀನಾ ದೇಶದ ಭೂಮಿಯೇ ಆಗಿದ್ದರೆ ಅಲ್ಲಿಗೆ ನಮ್ಮ ಸೈನಿಕರನ್ನು ಕಳಿಸಿ ಅವರು ಹುತಾತ್ಮರಾಗುವಂತೆ ಮಾಡಿದ್ದೇಕೆ? ನಿಜವಾಗಿಯೂ ಭಾರತದ ಸೈನಿಕರು ಹುತಾತ್ಮರಾದದ್ದು ಎಲ್ಲಿ? ಎಂಬ ಪ್ರಶ್ನೆಗಳನ್ನು ಕೇಳಿದ್ದಾರೆ.
ನಮ್ಮ ನಿಶಸ್ತ್ರ ಸೈನಿಕರನ್ನು ಕೊಲ್ಲಲು ಚೀನಾಗೆ ಎಷ್ಟು ಧೈರ್ಯ? ಮತ್ತು ಸೈನಿಕರನ್ನು ನಿಶಸ್ತ್ರವಾಗಿ ಹುತಾತ್ಮರಾಗಲು ಕಳುಹಿಸಿದ್ದೇಕೆ? ಭಾರತ -ಚೀನಾ ಗಡಿಯಲ್ಲಿ ಇಷ್ಟೆಲ್ಲಾ ಆಗುತ್ತಿದ್ದರೂ ಪ್ರಧಾನಿ ಮೋದಿ ಮೌನವಾಗಿರುವುದು ಏಕೆ? ಮೋದಿ ವಾಸ್ತವವನ್ನು ಏಕೆ ಮುಚ್ಚಿಡುತ್ತಿದ್ದಾರೆ? ಎಂದು ನಿನ್ನೆ ರಾಹುಲ್ ಗಾಂಧಿ ಕಿಡಿಕಾರಿದ್ದರು.
ಸರ್ವ ಪಕ್ಷಗಳ ಸಭೆಯಲ್ಲಿ ಕೂಡ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಭಾರತ ಮತ್ತು ಚೀನಾ ಗಡಿಯಲ್ಲಿ ಏನಾಗುತ್ತಿದೆ ಎಂಬ ವಸ್ತುಸ್ಥಿತಿಯನ್ನು ವಿವರಿಸುವಂತೆ ಆಗ್ರಹಿಸಿದ್ದರು. ಗಡಿಬಿಕ್ಕಟ್ಟನ್ನು ಬಗೆಹರಿಸಲು ಕೇಂದ್ರ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂಬ ಬಗ್ಗೆ ಜನರಿಗೆ ಮಾಹಿತಿ ನೀಡಬೇಕೆಂದು ಒತ್ತಾಯಿಸಿದ್ದರು. ಒಂದೂವರೆ ತಿಂಗಳಿನಿಂದ ಚೀನಾ ಲಡಾಖ್ನಲ್ಲಿ ನಮ್ಮ ಭೂಭಾಗವನ್ನು ಅತಿಕ್ರಮಿಸಿರುವುದು ಎಲ್ಲರಿಗೂ ಗೊತ್ತು. ಚೀನಾ ನಮ್ಮ ಗಡಿಯನ್ನು ಆಕ್ರಮಿಸಿ, 20 ಸೈನಿಕರನ್ನು ಹತ್ಯೆಗೈಯ್ಯಲು ಹೇಗೆ ಸಾಧ್ಯವಾಯಿತು ಎಂಬುದನ್ನು ಪ್ರಧಾನಿ ದೇಶದ ಜನತೆ ವಿವರಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ