ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – 8 ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂತಾರಾಷ್ಟ್ರ ಗೂಂಡಾಗಳಿಬ್ಬರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದು, ಹಲವು ಪ್ರಕರಣಗಳನ್ನು ಬಯಲಿಗೆಳೆದಿದ್ದಾರೆ.
ಬೆಳಗಾವಿ ನಗರದ ಖಡೇಬಜಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಿನಾಂಕ: ೨೩/೦೧/೨೦೨೦ ರಂದು ಮುಖೇಶ ಜಗನ್ನಾಥ ಕಾಮಟೆ, (ಸಾ: ಸಿದ್ದಿ ವಿನಾಯಕ ಪ್ಲಾಜಾ, ಪ್ಲಾಟ ನಂ-೦೨, ಹುಲಬತ್ತಿ ಕಾಲೋನಿ, ಬೆಳಗಾವಿ) ಎನ್ನುವವರಿಗೆ ವಿಶಾಲ ಚವ್ಹಾಣ, (ಸಾ: ಶಾಸ್ತ್ರೀ ನಗರ, ಬೆಳಗಾವಿ) ಎನ್ನುವವನು ಒಂದು ಲಕ್ಷ ರೂಪಾಯಿ ಹಣವನ್ನು ಕೊಡು, ಹಣ ಕೊಡದಿದ್ದರೆ ಕೊಲೆ ಮಾಡುವುದಾಗಿ ದೂರವಾಣಿಯಲ್ಲಿ ಜೀವದ ಬೆದರಿಕೆಯನ್ನು ಹಾಕಿದ ಬಗ್ಗೆ ದೂರು ದಾಖಲಾಗಿತ್ತು.
ಖಡೇಬಜಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಎಸಿಪಿಗಳಾದ ಎನ್ ವ್ಹಿ ಭರಮನಿ ಹಾಗೂ ಮಹಾಂತೇಶ್ವರ ಜಿದ್ದಿ ಹಾಗೂ ಚಂದ್ರಪ್ಪ ನೇತೃತ್ವದಲ್ಲಿ ಖಡೇಬಜಾರ ಪೊಲೀಸ್ ಠಾಣೆಯ ಧೀರಜ ಬಿ ಶಿಂಧೆ, ಪಿಐ, ಆರ್ ಬಿ ಸೌದಾಗರ, ಪಿಎಸ್‌ಐ ಹಾಗೂ ಸಿಬ್ಬಂದಿಗಳಾದ ಎಸ್ ಎಮ್ ಶಿಂಧೆ, ವ್ಹಿ ಎನ್ ಕಂಟಿಕರ, ಡಿ ಜಿ ಹಟ್ಟಿಕರ, ಬಿ ಎ ನೌಕೂಡೆ, ಬಿ ಪಿ ಉಜ್ಜಿನಕೊಪ್ಪ, ಪ್ರಕಾಶ್ ಎಸ್ ಸಣಮನಿ ಹಾಗೂ ಆರ್ ಬಿ ಗಣಿ ರವರನ್ನೊಳಗೊಂಡ ತಂಡ ರಚಿಸಲಾಗಿತ್ತು.
ತಂಡ ದಿನಾಂಕ: ೨೦-೦೬-೨೦೨೦ ರಂದು ಈ ಪ್ರಕರಣದ ಆರೋಪಿ ವಿಶಾಲಸಿಂಗ್ ವಿಜಯಸಿಂಗ್ ಚವ್ಹಾಣ, (೨೧), (ಸಾ: ಚಿಕ್ಕನಂದಿಹಳ್ಳಿ, ತಾಲೂಕ-ಬೈಲಹೊಂಗಲ, ಜಿಲ್ಲಾ: ಬೆಳಗಾವಿ, ಹಾಲಿ: ಕೆ/ಓ ಕದಮ್ ರವರ ಮನೆ, ೨ನೇ ಕ್ರಾಸ್, ಶಾಸ್ತ್ರೀ ನಗರ, ಬೆಳಗಾವಿ) ಹಾಗೂ ಪ್ರಥಮೇಶ ನಾರಾಯಣ ಗಣಿಕೊಪ್ಪ, (೧೯), (ಗೌಂಡಿ ಕೆಲಸ, ಸಾ: ೫ನೇ ಕ್ರಾಸ್, ಶಾಸ್ತ್ರೀ ನಗರ, ಬೆಳಗಾವಿ) ಇವರನ್ನು ಬೆಳಗಾವಿಯಲ್ಲಿ ವಶಕ್ಕೆ ಪಡೆದುಕೊಂಡಿತು.
ಅವರನ್ನು ವಿಚಾರಣೆಗೊಳಪಡಿಸಿದಾಗ ಆರೋಪಿಗಳು ಈ ಹಿಂದೆ ಬೆಳಗಾವಿ ನಗರದ ಖಡೇಬಜಾರ -೨, ಟಿಳಕವಾಡಿ-೧, ಶಹಾಪೂರ-೧, ಕ್ಯಾಂಪ್-೨ ಪ್ರಕರಣಗಳಲ್ಲಿ ಹಾಗೂ ಮಹಾರಾಷ್ಟ್ರ ರಾಜ್ಯದ ಬಿವಂಡಿ ಗ್ರಾಮೀಣ ಮತ್ತು ಪೂನಾ ಶಹರದ ಡೆಕ್ಕನ ಪೊಲೀಸ್ ಠಾಣೆಗಳ ಕೊಲೆ ಪ್ರಯತ್ನದ ಪ್ರತ್ಯೇಕ ೦೨ ಪ್ರಕರಣಗಳು ಹೀಗೆ ಒಟ್ಟು ೦೮ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಬಗ್ಗೆ ಒಪ್ಪಿಕೊಂಡಿದ್ದಾರೆ.
ತಾವು ಕೃತ್ಯಕ್ಕೆ ಬಳಸಿದ ಒಂದು ಸ್ವೀಪ್ಟ್ ಡಿಜಾಯರ್ ಕಾರ್, ಒಂದು ಬಜಾಜ ಪಲ್ಸರ್ ಬೈಕ್, ಒಂದು ವಿವೋ, ಒಂದು ಆಪಲ್ ಕಂಪನಿಯ ಮೊಬೈಲ್‌ಗಳು ಮತ್ತು ಪ್ರಕರಣಗಳಿಗೆ ಸಂಬಂಧಿಸಿದ ಆಯುಧಗಳನ್ನು ತೋರಿಸಿದ್ದಾರೆ. ಅವುಗಳನ್ನು ಜಪ್ತ ಮಾಡಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ. ಈ ಪ್ರಕರಣಗಳಲ್ಲಿ ಇನ್ನುಳಿದ ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದೆ.
ಈ ಪ್ರಕರಣದ ಆರೋಪಿತರ ಪತ್ತೆ ಮಾಡಿದ ತಂಡವನ್ನು ಪೊಲೀಸ್ ಆಯುಕ್ತ ಲೋಕೇಶ ಕುಮಾರ ಬಿ. ಎಸ್. ಡಿಸಿಪಿಗಳಾದ ಸೀಮಾ ಲಾಟ್ಕರ್, ಹಾಗೂ ಯಶೋಧಾ ವಂಟಗುಡೆ ಶ್ಲಾಘಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ