ಎಸ್.ಜಯಕುಮಾರ
12 ಜನವರಿ 2019 ರಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿಗೆ ಭೇಟಿ ನೀಡಿದ್ದೆ. ಬೆಳಗಿನ ಕಾರ್ಯಕ್ರಮ ಇದ್ದುದರಿಂದ ಹಿಂದಿನ ರಾತ್ರಿ ಅಲ್ಲಿಯೇ ಉಳಿದಿದ್ದೆ. ರಾತ್ರಿ ಊಟಕ್ಕೆ ಹೋಗುತ್ತಿದ್ದಾಗ ಶಿಕ್ಷಕ ಮಿತ್ರರೋರ್ವರು ಗರಡಿ ಮನೆಯ ಚಟುವಟಿಕೆಗಳ ಕುರಿತು ವಿವರವಾಗಿ ಹೇಳಿ ಗರಡಿ ಮನೆ ಇರುವ ಸ್ಥಳಕ್ಕೆ ಕರೆದುಕೊಂಡು ಹೊರಟೇ ಬಿಟ್ಟರು. ನಾನು ಅವರನ್ನು ಹಿಂಬಾಲಿಸಿದೆ. ಅಲ್ಲಿಗೆ ಹೋದಾಗ ರಾತ್ರಿ 7.30 ಗಂಟೆ. ಗರಡಿ ಮನೆಯಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಹದಿಹರೆಯದ ಮಕ್ಕಳವರೆಗೆ ತಾಲೀಮು ನಡೆಯುತ್ತಿತ್ತು.
ಗರಡಿ ಮನೆಯಲ್ಲಿ ತರಬೇತಿ ನೀಡುತ್ತಿರುವ ತರಬೇತಿದಾರರನ್ನು ಇದರಿಂದ ಏನು ಪ್ರಯೋಜನ? ಎಂದು ಕೇಳಿದೆ. ಅವರ ಉತ್ತರ ಗಮನ ಸೆಳೆಯುವುದಾಗಿತ್ತು. ತರಬೇತಿದಾರರು ಯಾವುದೋ ರಾಷ್ಟ್ರದಲ್ಲಿ ಈ ಕುರಿತು ತರಬೇತಿ ಪಡೆದವರಾಗಿರಲಿಲ್ಲ. ಅದೇ ಊರಿನವರು, ಅತೀ ಸಾಮಾನ್ಯರು. ಅವರ ಭಕ್ತಿ, ಶ್ರಮ ಅಪಾರವಾದುದು.
ಹಿಂದೆ ಇವು ರಾಜ ಮಹಾರಾಜರ ಕಾಲದಲ್ಲಿ ಸೈನಿಕ ತರಬೇತಿ ಶಾಲೆಗಳು. ಇಲ್ಲಿಂದಲೇ ರಾಜರುಗಳಿಗೆ, ಸೇನಾಧಿಪತಿಗಳಿಗೆ, ಸೈನ್ಯಗಳ ಮುಖ್ಯಸ್ಥರುಗಳಿಗೆ ತರಬೇತಿ ನೀಡಲಾಗುತ್ತಿತ್ತು. ಒಂದು ಕಾಲದಲ್ಲಿ ದೇಶ ರಕ್ಷಣೆ ಮಾಡಲು ಅಪಾರ ಸಂಖ್ಯೆಯ ಉಕ್ಕಿನ ದೇಹದ, ಸೈನಿಕರನ್ನು ಸಿದ್ದಪಡಿಸಿದ ಶಾಲೆಗಳು ಇವೇ. ಇವೇ ಗರಡಿ ಮನೆಗಳು ರಾಣಿ ಚನ್ನಮ್ಮಳ ನಿಷ್ಠಾವಂತ ಸೈನಿಕ ಸಂಗೊಳ್ಳಿ ರಾಯಣ್ಣನಂತಹ ರಾಷ್ಟ್ರನಿಷ್ಟೆ, ರಾಷ್ಟ್ರ ಭಕ್ತಿಯ ವ್ಯಕ್ತಿಗಳನ್ನು ರೂಪಿಸಿದ ಕೀರ್ತಿ ಇವುಗಳಿಗಿದೆ. ಅಂದರೆ ಇವುಗಳ ಮಹತ್ವ ಏನು? ಎಂದು ತಿಳಿಯುತ್ತದೆ.
ಮನೆ ಒಳಗೆ ಹೋದರೆ ಒಂದು ಆಳು ಉದ್ದದ ಬಾವಿ. ಸುತ್ತಲೂ ಗರಡಿ ಮನೆಯಲ್ಲಿ ತರಬೇತಿ ನೀಡಲು ಬೇಕಾದ ಅವಶ್ಯಕವಾದ ಪರಿಕರಗಳನ್ನು ಇಟ್ಟಿದ್ದರು. ಬಾವಿಯ ಒಳಗೆ ಮಕ್ಕಳು ನೆಲಕ್ಕೆ ಹಾಕಿದ್ದ ಮಣ್ಣನ್ನು ಅಗೆಯುತ್ತಿದ್ದರು. ಆ ಕೆಂಪು ಮಣ್ಣನ್ನು ಬಹುಶಃ ಎಷ್ಟು ವರ್ಷಗಳ ಹಿಂದೆ ಹಾಕಿದ್ದರೋ ತಿಳಿಯದು. ಪೂರ್ಣ ನೆಲವೆಲ್ಲಾ ಎಣ್ಣೆ ಮಯವಾಗಿತ್ತು. ಸದ್ದು ಗದ್ದಲವಿಲ್ಲದ ಪ್ರಶಾಂತ ವಾತಾವರಣವಿತ್ತು. ನೆಲ ಅಗೆಯುವ ಬಗ್ಗೆ ಕೇಳಿದಾಗ ನೆಲವನ್ನು ಪ್ರತಿದಿನ ಅಗೆದು ಅದಕ್ಕೆ ವನಸ್ಪತಿ, ತುಪ್ಪ ಬೆರೆಸಿ ಮಣ್ಣನ್ನು ಸಂಸ್ಕಾರ ಮಾಡುವುದರಿಂದ ಮಣ್ಣಿಗೆ ಕುಷನ್ ಗುಣ ಬರುತ್ತೆ, ಮಣ್ಣಿನ ಮೇಲೆ ಬಿದ್ದರೂ ಮಕ್ಕಳ ದೇಹಕ್ಕೆ ಏಟಾಗುವುದಿಲ್ಲ ಎಂದರು. ಮಧ್ಯೆ ಹಗ್ಗ ಕಟ್ಟಿದ್ದು ಕಟ್ಟಿದ್ದ ಹಗ್ಗವನ್ನು ಮಕ್ಕಳು ಸಲೀಸಾಗಿ ಏರುವ ಸಾಹಸ ಮಾಡುತ್ತಿದ್ದರು. ಅವರಿಗೆ ಅದು ಒಂದು ಆಟವಾಗಿತ್ತು. ಇದರಿಂದ ಮುಂಗೈಗೆ ಶಕ್ತಿ ಬರುತ್ತದೆ ಎಂದರು. ಅದರಲ್ಲಿ ಓರ್ವ ಹದಿ ಹರೆಯದ ಹುಡುಗ ಗಮನ ಸೆಳೆದ. ಅವನಿಗೆ ಮಾತು ಬರುವುದಿಲ್ಲ.ಈ ಹುಡುಗ ಗರಡಿ ವರೆಸೆಯಲ್ಲಿ ಅನೇಕ ಸಾಹಸ ಮಾಡಿ ರಾಷ್ಟ್ರೀಯ ಸಾಧನೆ ಮಾಡಿದ್ದು, ಮಾತು ಬರದೇ ಇದ್ದರೂ ಮೊಬೈಲ್ನಲ್ಲಿ ಅವನ ಕುರಿತಾದ ವರದಿ, ಅವನು ಭಾಗವಹಿಸಿರುವ ರಾಜ್ಯ, ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಅವನಿರುವ ಫೋಟೋಗಳು, ಅದರಲ್ಲಿ ಅವನ ಜೊತೆ ಸೆಣೆಸಿದ ಎದುರಾಳಿಗಳು, ಇತ್ಯಾದಿಗಳನ್ನು ತೋರಿಸಿ ಸಂತೋಷದಿಂದ ತನ್ನ ಭಾಷೆಯಲ್ಲಿ ವಿವರಿಸಿದ ರೀತಿ ಮನಮುಟ್ಟುವಂತೆ ಇತ್ತು.
ಗರಡಿ ಮನೆ ಜಾಗ ಚಿಕ್ಕದಾಗಿತ್ತು. ಈ ಗರಡಿ ಮನೆಯಿಂದ ತರಬೇತಿ ಪಡೆದ ಹಲವಾರು ಯುವಕರು ಈಗಾಗಲೇ ಸೈನ್ಯದಲ್ಲಿನ ವಿವಿಧ ಹುದ್ದೆಯಲ್ಲಿದ್ದಾರೆ ಎಂದರು. ಕಾರಣ ಕೇಳಿದರೆ, ಸೈನ್ಯಕ್ಕೆ ಸೇರುವ ವೇಳೆ ಅವರು ಕೊಡುವ ಎಲ್ಲಾ ಅಭ್ಯಾಸಗಳ ಪರೀಕ್ಷೆಗಳನ್ನು ಅನಾಯಾಸವಾಗಿ ಎದುರಿಸಲು ಅನುಕೂಲವಾಗುತ್ತದೆ. ಇದರಿಂದಾಗಿ ಸೈನ್ಯ ಸೇರಲು ಅನುಕೂಲವಾಗಿದ್ದು ಅನೇಕರು ಈಗಾಗಲೇ ಸೇರಿರುತ್ತಾರೆ ಎಂದರು. ಅಬ್ಬಾ ಸಣ್ಣ ಊರಿನ, ಸಣ್ಣ ಕೋಣೆಯಲ್ಲಿ ತಾಯ್ನಾಡಿಗೆ ದೇಹ ಮುಡುಪಾಗಿಡುವ ದೇಶ ರಕ್ಷಣಾ ಕೆಲಸ, ಅದ್ಭುತವಾದ ಕೆಲಸ ನಡೆಯುತ್ತಿದೆ. ಈ ನೆಲದ ಗುಣ ಹಾಗೇ ಇದೆ. ಈ ನೆಲ ಬ್ರಿಟಿಷರ ವಿರುದ್ಧ ತೊಡೆ ತಟ್ಟಿ ನಿಂತಂತಹ ಕೆಚ್ಚೆದೆಯ ವೀರ ರಾಣಿ ಕಿತ್ತೂರು ಚನ್ನಮ್ಮನ ಊರು, ಅಂದ ಮೇಲೆ ಕೇಳಬೇಕೆ?
(ಲೇಖಕರು ರಾಜ್ಯ ಪ್ರಾಥಮಿಕ ಶಿಕ್ಷಣ ಇಲಾಖೆ ನಿರ್ದೇಶಕರು)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ