
ಡಾ. ನಿರ್ಮಲಾ ಬಟ್ಟಲ, ಬೆಳಗಾವಿ.
ರಾಜ್ಯಾದ್ಯಂತ ೩,೨೦೯ ಪರೀಕ್ಷಾ ಕೆಂದ್ರಗಳಲ್ಲಿ ೮,೪೮,೨೦೩ ಮಕ್ಕಳು ಶಾಲಾಶಿಕ್ಷಣದ ಅಂತಿಮ ಹಂತದ ಎಸ್.ಎಸ್.ಎಲ್.ಸಿ. ಪ್ರಮುಖ ಪರೀಕ್ಷೆಯನ್ನು ಎದುರಿಸಲು ಸಿದ್ದರಾಗಿದ್ದಾರೆ. ಆತಂಕದ ಪರಿಸ್ಥಿತಿಯಲ್ಲಿಯು ಇಲಾಖೆ ಎಲ್ಲ ಸಿದ್ದತೆಗಳೊಂದಿಗೆ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಿದೆ. ಶಿಕ್ಷಣ ಇಲಾಖೆಯ ತಯಾರಿ ಶ್ಲಾಘನೀಯ. ಆದರೂ ಕೊವಿಡ್ ೧೯ ರ ಭಯ ಪಾಲಕರು ಮತ್ತು ಮಕ್ಕಳನ್ನು ಕಾಡುತ್ತಿದೆ. ಈ ಆತಂಕದಿಂದ ಹೊರಬಂದು ಪರೀಕ್ಷೆ ಎದುರಿಸಲು, ಬದಲಾದ ಪರಿಸ್ಥಿತಿಗೆ ನಮ್ಮ ಮನಸನ್ನು ಹೊಂದಿಸಿಕೊಳ್ಳುವ ಅಗತ್ಯವಿದೆ.
ವಿದ್ಯಾರ್ಥಿಗಳೇ,
ಹೊರಗಿನ ಪರಿಸ್ಥಿತಿ ಹೇಗೇ ಇರಲಿ, ನಿಮ್ಮ ಒಳಗಿನಿಂದ ಪರಿಸ್ಥಿತಿಯನ್ನು ಎದುರಿಸಲು ಸಿದ್ದರಾಗಿ.
ಯಶಸ್ವಿಯಾಗಿ ಪರೀಕ್ಷೆ ಎದುರಿಸುತ್ತೇನೆ ಎನ್ನುವ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಿ.
ಬೆಳಿಗ್ಗೆ ಬೇಗ ಎದ್ದು ನಿತ್ಯಕರ್ಮಗಳನ್ನು ಮುಗಿಸಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ. ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಬೆಳೆಯುತ್ತದೆ.
ಐದು ನಿಮಿಷವಾದರೂ ಸಂಗೀತ ಕೇಳಿ, ಮನಸ್ಸು ಪ್ರಪುಲ್ಲವಾಗುತ್ತದೆ.
ನಿಗದಿತ ಸಮಯಕ್ಕೆ ಮುಂಚಿತವಾಗಿ ಕೇಂದ್ರ ತಲುಪಿ. ಒತ್ತಡ ಕಡಿಮೆಯಾಗುತ್ತದೆ.
ನಿಮಗಾಗಿ ನಿಗದಿಪಡಿಸಿದ ಸ್ಥಳದಲ್ಲಿ ಕುಳಿತುಕೊಳ್ಳಿ. ನಿಮ್ಮ ಉದ್ವೇಗಗಳು ಕಡಿಮೆಯಾಗುತ್ತವೆ.
ಓದಿರುವುದನ್ನು ಪುನರ್ ಮನನ ಮಾಡಿಕೊಳ್ಳಿ. ಆತ್ಮವಿಶ್ವಾಸ ಹೆಚ್ಚುತ್ತದೆ.
ಕೊರೊನಾದಿಂದಾಗಿ ಓದಿಕೊಳ್ಳಲು ಹೆಚ್ಚು ಸಮಯ ದೊರೆತಿರುವುದರಿಂದ ಚೆನ್ನಾಗಿ ಪರೀಕ್ಷೆ ಬರೆಯುತ್ತೇನೆ ಎಂದು ಧನಾತ್ಮಕವಾಗಿ ಚಿಂತಿಸಿ.
ಯಾವುದೆ ಊಹಾಪೋಹಗಳಿಗೆ ಗಮನ ಕೊಡದೇ ಚಿತ್ತ ಚಂಚಲವಾಗದಂತೆ ನೋಡಿಕೊಳ್ಳಿ.
ಈ ಪರೀಕ್ಷೆಯನ್ನು ನಿಮಗೋಸ್ಕರ ನೀವು ಎದುರಿಸಬೇಕಾಗಿದೆ ಎನ್ನವುದನ್ನು ಅರಿತುಕೊಳ್ಳಿ.
ನೀವು ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಿದರೆ, ನಿಮಗಷ್ಟೇ ಅಲ್ಲದೆ ನಿಮ್ಮ ಮೇಲೆ ಭರವಸೆಯಿಟ್ಟ ನಿಮ್ಮ ತಂದೆ ತಾಯಿಗಳಿಗೆ, ನಿಮ್ಮ ಗುರುಗಳಿಗೆ, ನಿಮ್ಮ ಶಾಲೆಗೆ ಯಸ್ಸು ತಂದಂತಾಗುತ್ತದೆ.
ಪರೀಕ್ಷೆ ಬರೆಯುತ್ತಿರುವ ನಿಮ್ಮ ಬಗ್ಗೆ ಸರಕಾರಕ್ಕೆ, ಶಾಲೆಗೆ, ಶಿಕ್ಷಕರಿಗೆ ಅತೀವ ಕಾಳಜಿ ಇದೆ. ಅದಕೋಸ್ಕರ ಸಾಕಷ್ಟು ಮುಂಜಾಗೃತೆ ಕ್ರಮಗಳನ್ನು ಅವರು ನಿಮಗಾಗಿ ತೆಗೆದುಕೊಂಡಿದ್ದಾರೆ ಹೆದರಬೇಡಿ.
ಪರೀಕ್ಷೆ ಬರೆಯುತ್ತಿರುವ ನೀವು ನಿಮ್ಮ ಮನೆಗೆ, ನೀವು ಓದಿದ ಶಾಲೆಗೆ, ನಿಮಗೆ ಕಲಿಸಿದ ಗುರುಗಳಿಗೆ ಮತ್ತು ಈ ಸಮಾಜಕ್ಕೆ ವಿಶೇಷ ವ್ಯಕ್ತಿಯಾಗಿದ್ದೀರಿ ಎನ್ನುವುದನ್ನು ಗಮನಿಸಿ.
ಇವು ನಿಮ್ಮೊಳಗೆ ಮಾಡಿಕೊಳ್ಳಬೇಕಾದ ಮಾನಸಿಕ ತಯಾರಿಯಾದರೆ, ಬಾಹ್ಯವಾಗಿ
ಮಾಸ್ಕನ್ನು ಕಡ್ಡಾಯವಾಗಿ ಧರಿಸಿ.
ಕುಡಿಯುವ ನೀರನ್ನು ಮರೆಯದೇ ತೆಗೆದುಕೊಂಡು ಹೋಗಿ.
ಸಾಮಾಜಿಕ ಅಂತರವನ್ನು ಸ್ವತಃ ಕಾಯ್ದುಕೊಳ್ಳಿ
ಸಹಪಾಠಿಗಳೊಂದಿಗೆ ಮಾತಿಗೆ ನಿಲ್ಲಬೇಡಿ
ಬೇರೆಯವರಿಗೆ ತೊಂದರೆಯಾಗುವಂತೆ ವರ್ತಿಸಬೇಡಿ.
ಪರೀಕ್ಷೆ ಮುಗಿದ ತಕ್ಷಣ ಗುಂಪುಕಟ್ಟಿಕೊಂಡು ಪರೀಕ್ಷಾ ಕೇಂದ್ರದ ಹೊರಗೆ ನಿಲ್ಲದೆ ಮನೆಯ ಹಾದಿ ಹಿಡಿಯಿರಿ.
ಮನೆಗೆ ಹೋದ ತಕ್ಷಣ ಬಿಸಿನೀರಿನಲ್ಲಿ ಸ್ನಾನ ಮಾಡಿ.
ಪರೀಕ್ಷೆ ಪ್ರಾರಂಭದಿಂದ ಮುಗಿಯುವವರೆಗೂ ನಿತ್ಯ ಈ ನಿಯಮಗಳನ್ನು ಪಾಲಿಸಿ.
ಪರೀಕ್ಷೆ ಇಲ್ಲದೆ ಪಾಸಾಗುವುದಕ್ಕಿಂತ ಇಂತಹ ಪರಿಸ್ಥಿತಿಯಲ್ಲಿಯೂ ಕೂಡ ನೀವು ಪರೀಕ್ಷೆ ಎದುರಿಸಿದ ಹೆಮ್ಮೆ ನಿಮಗಿರುತ್ತದೆ. ಯಾವುದೇ ಪರಿಸ್ಥಿತಿ ನಿಮ್ಮ ಶೈಕ್ಷಣಿಕ ಅಭಿವೃಧ್ದಿಯ ಮೇಲೆ ಪರಿಣಾಮ ಬೀರದಿರಲಿ. ನಿಮ್ಮ ಭವಿಷ್ಯದ ಕನಸುಗಳ ಏಣಿಯ ಮೊದಲ ಮೆಟ್ಟಿಲು ಯಶಸ್ವಿಯಾಗಿ ಏರಿ. ಯಶಸ್ಸಿಗೆ ಯಾವುದೇ ಅಡ್ಡ ದಾರಿಗಳಿಲ್ಲ, ಶುಭವಾಗಲಿ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ