ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಉಂಟಾದ ದೃಷ್ಟಿದೋಷದ ಪರಿಣಾಮವಾಗಿ ಕಣ್ಣಿನ ರೆಟಿನಾದಲ್ಲಿ ಉಂಟಾದ ರಾಸಾಯನಿಕ ಬದಲಾವಣೆಗಳಿಂದ ರೋಗಿಯು ಸಂಪೂರ್ಣ ದೃಷ್ಟಿಹೀನನಾಗಿದ್ದ. ಆತ ಕೇವಲ ಕಣ್ಣಿನ ಮುಂದೆ ಕೈ ಆಡಿಸಿದಾಗ ಮಾತ್ರ ಕೈ ಎಂದು ಗುರುತು ಹಿಡಿಯಲು ಸಾಧ್ಯವಾಗಿತ್ತು. ಆದರೆ ಶಸ್ತ್ರಚಿಕಿತ್ಸೆಯ ನಂತರ ಆತನು ಸ್ಪಷ್ಟವಾಗಿ ನೋಡಲು ಸಾಧ್ಯವಾಗಿದೆ.
ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಖ್ಯಾತ ವಿಟರೋ ರೆಟಿನಲ್ ಶಸ್ತ್ರಚಿಕಿತ್ಸಜ್ಞ (ಕಣ್ಣಿನ ಹಿಂಭಾಗದ ಪರಿಧಿ) ವೈದ್ಯ ಡಾ. ವಿಶಾಲ ಖಾಕಂಡಕಿ ಇಂತಹ ಅಪರೂಪದ ಶಸ್ತ್ರ ಚಿಕಿತ್ಸೆ ನೆರವೇರಿಸಿದ್ದಾರೆ.
ಸುಮಾರು ಹತ್ತು ವರ್ಷಗಳಿಂದ ಮಧುಮೇಹ ಹಾಗೂ ಕೆಲವು ವರ್ಷಗಳಿಂದ ರಕ್ತದೊತ್ತಡಗಳಿಂದ ಬಳಲುತ್ತಿದ್ದ ರೋಗಿಗೆ ಸುಮಾರು ೨ ತಿಂಗಳಿನಿಂದ ಎಡಗಣ್ಣಿನ ದೃಷ್ಟಿಯು ಕ್ರಮೇಣ ಮಂದವಾಗಿತ್ತು. ಅಲ್ಲದೇ ರೋಗಿಗೆ ಪ್ರಾಥಮಿಕವಾಗಿ ಎಡಗಣ್ಣಿಗೆ ತೊಂದರೆಯಾಗಿತ್ತು.
ಅದು ಕ್ರಮೇಣ ಆತನ ಬಲಗಣ್ಣಿಗೂ ವ್ಯಾಪಿಸುವುದರಲ್ಲಿತ್ತು. ಅದನ್ನು ಬಿ ಸ್ಕ್ಯಾನ್ ಎಂಬ ಪರೀಕ್ಷೆಯ ಮೂಲಕ ಪರೀಕ್ಷಿಸಲಾಗಿ ಆತನು ಡೆನ್ಸ ವಿಟರಸ್ ಹೆಮರೇಜ ಎಂಬ ವಿರಳ ಖಾಯಿಲೆಯಿಂದ ಬಳಲುತ್ತಿದ್ದುದು ತಿಳಿದುಬಂದಿತು. ಅಂದರೆ ರೋಗಿಯ ರೋಗದ ಹಿನ್ನೆಲೆಯಿಂದ ಆತನ ಕಣ್ಣಿನ ರೆಟಿನಾದ ಹಿಂಬದಿಯಲ್ಲಿ ರಕ್ತ ಹೆಪ್ಪುಗಟ್ಟಿ ಆತನ ದೃಷ್ಟಿಯು ಮಂದವಾಗಿತ್ತು.
ನಂತರ ರೋಗಿಗೆ ವಿಟರೆಕ್ಟಮಿ ಹಾಗೂ ಎಂಡೋಸಲಾರ ಲೇಸರ ಮೂಲಕ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿ ಈಗ ಆತನ ದೃಷ್ಟಿದೋಷವು ನಿವಾರಣೆಯಾಗಿದೆ.
ಕಣ್ಣು ವಿಭಾಗದ ಮುಖ್ಯಸ್ಥೆ ಡಾ. ಪದ್ಮಜಾ ಹಂಜಿ ಹಾಗೂ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ. ಆರ್ ಆರ್ ವಾಳ್ವೇಕರ ಅವರು ವಿಟರೋ ರೆಟಿನಲ್ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ವಿಶಾಲ ಖಾಕಂಡಕಿ ಹಾಗೂ ಹೆಸರಾಂತ ವೈದ್ಯ ಡಾ. ಅಮರ ಪಾಟೀಲ ಅವರಿಗೆ ಅಭಿನಂದಿಸಿದ್ದಾರೆ ಹಾಗೂ ಇಂತಹ ವಿರಳ ಪ್ರಕರಣವನ್ನು ಸರಳವಾಗಿ ಚಿಕಿತ್ಸೆ ನೀಡಿ ಗುಣ ಪಡಿಸಿದ ಯುವ ವೈದ್ಯರಿಗೆ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕರಾದ ಡಾ. ಎಸ್ ಸಿ ಧಾರವಾಡ ಅಭಿನಂದಿಸಿ, ಇಂತಹ ಪ್ರಕರಣಗಳಿಗೆ ಆಸ್ಪತ್ರೆಯಲ್ಲಿ ಅತ್ಯಲ್ಪದರದಲ್ಲಿ ಚಿಕಿತ್ಸೆಯು ಲಭ್ಯವಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ಕೋರಿದ್ದಾರೆ.
ಇಂತಹ ಅಧ್ಭುತ ಸಾಧನೆ ಮಾಡಿದ ವೈದ್ಯರಾದ ಡಾ. ವಿಶಾಲ ಖಾಕಂಡಕಿ ಹಾಗೂ ಹೆಸರಾಂತ ವೈದ್ಯ ಡಾ. ಅಮರ ಪಾಟೀಲ ಅವರಿಗೆ ಕೆ ಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಬಾಕರ ಕೋರೆ ಅವರು ಹಾಗೂ ಯು ಎಸ್ ಎಮ್ ಕೆ ಎಲ್ ಇ ಯ ನಿರ್ದೇಶಕರಾದ ಡಾ. ಹೆಚ್ ಬಿ ರಾಜಶೇಖರ ಅವರು ಶುಭ ಹಾರೈಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ