Latest

ಗಾಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ ಯೋಧರಿಗೆ ಸಿಆರ್ ಪಿಎಫ್ ಮಾಜಿ ಮತ್ತು ಹಾಲಿ ಯೋಧರಿಂದ ಶ್ರದ್ಧಾಂಜಲಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಭಾರತ- ಚೀನಾ ಗಡಿಯ ಗಾಲ್ವಾನ್ ವ್ಯಾಲಿಯಲ್ಲಿ ನಡೆದ ಘರ್ಷಣೆಯಲ್ಲಿ ಇಪ್ಪತ್ತು ಮಂದಿ ಯೋಧರು ಹುತಾತ್ಮರಾದ ವೀರ ಯೋಧರಿಗೆ ಯಲಹಂಕದ ಅವಲಹಳ್ಳಿ ಗ್ರಾಮದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಿಆರ್ ಪಿಎಫ್ ಮಾಜಿ ಮತ್ತು ಹಾಲಿ ಯೋಧರಿಂದ ಪುಷ್ಪ ನಮನ ಹಾಗೂ ಕ್ಯಾಂಡಲ್ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.
ಸಿಆರ್ ಪಿಎಫ್ ಮಾಜಿ ಯೋಧ ದ್ಯಾವನಗೌಡ ಗೌಡರ ಮಾತನಾಡಿ, ದೇಶದ ಗಡಿಯನ್ನು ಕಾಯುತ್ತಿರುವ ಹಾಗೂ ದೇಶಕ್ಕಾಗಿ ಪ್ರಾಣ ತೆತ್ತ ಹುತಾತ್ಮರಿಗೆ ನಾವು ಗೌರವ ಸಲ್ಲಿಸುವುದನ್ನು ಬಯಸುತ್ತೇವೆ. ಈ ಯೋಧರ ಅಮೂಲ್ಯವಾದ ಸೇವೆಯನ್ನು ಪ್ರತಿಯೊಬ್ಬರೂ ಸ್ಮರಿಸಬೇಕಾಗಿದೆ. ದೇಶಕ್ಕಾಗಿ ತ್ಯಾಗ ಮಾಡಿದ ಯೋಧರು ಹಾಗೂ ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದರು.
ನಮ್ಮ ದೇಶವನ್ನು ರಕ್ಷಿಸುವ ಉದ್ದೇಶದಿಂದ ಪ್ರಜೆಗಳ ಯೋಗಕ್ಷೇಮದ ದೃಷ್ಟಿಯಿಂದ ಸೈನಿಕರು ತಮ್ಮ ಪ್ರಾಣವನ್ನೆ ತ್ಯಾಗ ಮಾಡಿದ್ದಾರೆ. ಭಾರತೀಯ ಸೇನಾ ಅಧಿಕಾರಿಗಳಿಗೆ ಹಾಗೂ ಸೈನಿಕರಿಗೆ ವಿಶೇಷ ಸೆಲ್ಯೂಟ್ ಅರ್ಪಿಸಬೇಕು. ಪ್ರತಿ ಬಾರಿ ದೇಶಕ್ಕೆ ಗಂಡಾಂತರ ಬಂದಗಾಲೆಲ್ಲ ನಮ್ಮ ಸೈನಿಕರು ಪ್ರಜೆಗಳ ರಕ್ಷಣೆಗೆ ಮುಂದಾಗುವ ಮೂಲಕ ದೇಶ ರಕ್ಷಣೆ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಚೀನಾ ದೇಶದ ಯಾವುದೇ ವ್ಯವಹಾರಗಳಾಗಲಿ ಅಥವಾ ಅ ದೇಶದ ವಸ್ತುಗಳಾಗಲಿ ನಮ್ಮ ಭಾರತ ದೇಶದಲ್ಲಿ ಅಮದು ಮತ್ತು ಮಾರಾಟ ಮಾಡಬಾರದು. ನಮ್ಮ ದೇಶದಲ್ಲಿ ಚೀನಾ ವಸ್ತುಗಳನ್ನು ಸಂಪೂರ್ಣವಾಗಿ ನಿಷೇಧಿಸಿ ಸ್ವದೇಶಿ ವಸ್ತುಗಳನ್ನು ಬಳಸುವ ಕಾರ್ಯ ಮಾಡಬೇಕಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಾಲಿ ಎಸ್ಐ ವೈಎಂ ಪರಮೇಶ್ವರಪ್ಪ, ಮಾಜಿ ಸಿಆರ್ ಪಿಎಫ್ ಯೋಧರಾದ ವೀರಭದ್ರಪ್ಪ, ಬಿ.ಕೆ.ಲೋಕೇಶ್, ಶಿವಾನಿ, ಶಾಂತವೀರಪ್ಪ, ರಮೇಶ್ ಕೆಎಂಎಫ್, ವಿನೋದ್ ಕಾಂಬಳೆ, ಡಿ.ಜಿ.ಗೌಡಜ್ಜ, ಬೈರೆಗೌಡ, ಗ್ರಾಮ ಪಂಚಾಯತ್ ಹಾಲಿ ಅಧ್ಯಕ್ಷರಾದ ರಮ್ಯ, ಮಾಜಿ ಅಧ್ಯಕ್ಷರಾದ ಚೆನ್ನಮ್ಮ, ಸದಸ್ಯರಾದ ಮಂಜುನಾಥ್, ನಂಜೇಗೌಡ್ರು, ಎಪಿಎಂಸಿ ಅದ್ಯಕ್ಷ ಕೃಷ್ಣಮೂರ್ತಿ, ಮುಖಂಡರಾದ ಅಶೋಕ ಗೌಡ, ಲೋಕೇಶ್, ಕೃಷ್ಣಮೂರ್ತಿ ಗ್ರಾಮಸ್ಥರು ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button