Kannada NewsKarnataka News

ಬಡ್ತಿ ಮೀಸಲಾತಿ ಆದೇಶವನ್ನು ಶೀಘ್ರ ಜಾರಿಗೊಳಿಸಿ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿಕಲಚೇತನ ನೌಕರರಿಗೆ ಅವರ ಸೇವಾ ಜೇಷ್ಠತೆಯನ್ನು ಅನುಸರಿಸಿ ಶೇಕಡಾ ೩ ರಷ್ಟು ಬಡ್ತಿ ಮೀಸಲಾತಿಯ ಬಗ್ಗೆ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿ ಬಡ್ತಿ ಮೀಸಲಾತಿ ಆದೇಶ ಜಾರಿಗೊಳಿಸುವಂತೆ ವಿಕಲಚೇತನ ನೌಕರರ ಸಂಘದ ವತಿಯಿಂದ ಜಲಸಂಪನ್ಮೂಲ ಸಚಿವರಾದ ರಮೇಶ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಮಯದಲ್ಲಿ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಭೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ, ವಿಕಲಚೇತನ ನೌಕರರಿಗೆ ಅವರ ಸೇವಾ ಜೇಷ್ಠತೆಯನ್ನು ಅನುಸರಿಸಿ ಶೇಕಡಾ ೩ ರಷ್ಟು ಬಡ್ತಿ ಮೀಸಲಾತಿ ನೀಡುವಂತೆ ಸುಪ್ರೀಂಕೋರ್ಟ ಆದೇಶ ಮಾಡಿ ೬ ವರ್ಷ ಕಳೆದರೂ ಕೂಡಾ ಸರಕಾರವು ಜಾರಿಗೆ ಮಾಡಿಲ್ಲ. ಇದನ್ನು ಪ್ರಶ್ನಿಸಿ ವಿಕಲಚೇತನ ಅಧಿಕಾರಿ ಸಿದ್ದರಾಜು ಅವರು ದಾವೆಯನ್ನು ಹೂಡಿದ ಅನ್ವಯ ಮತ್ತೊಮ್ಮೆ ಸುಪ್ರೀಂಕೋರ್ಟ ವಿಕಲಚೇತನ ನೌಕರರ ಪರವಾಗಿ ತೀರ್ಪು ನೀಡಿ ೬ ತಿಂಗಳು ಕಳೆದರೂ ಆದೇಶ ಜಾರಿಗೆ ಮಾಡಿಲ್ಲ. ಅಲ್ಲದೇ ಈಗಾಗಲೇ ಅನೇಕ ಇಲಾಖೆಯಲ್ಲಿ ಬಡ್ತಿಯನ್ನು ನೀಡಿದ್ದಾರೆ ಹಾಗೂ ಇನ್ನೂ ಅನೇಕ ಇಲಾಖೆಯಲ್ಲಿ ಬಡ್ತಿ ನೀಡುವ ಕಾರ್ಯದ ಸಿದ್ದತೆಯಲ್ಲಿ ಇದ್ದಾರೆ. ಬಡ್ತಿ ಸೌಲಭ್ಯದಿಂದ ವಿಕಲಚೇತನ ನೌಕರರು ವಂಚಿತರಾಗುತ್ತಿದ್ದಾರೆ. ಈ ವಿಷಯದ ಬಗ್ಗೆ ಈಗಾಗಲೇ ಅನೇಕ ಸಚಿವರಿಗೆ ಮನವಿ ಕೊಡುವುದರೊಂದಿಗೆ ವಿಷಯದ ಬಗ್ಗೆ ತಿಳಿಸಲಾಗಿದ್ದರೂ ಕೂಡಾ ಜೂ.೨೫ ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಇದರ ಬಗ್ಗೆ ಯಾವುದೇ ಚರ್ಚೆ ನಡೆದಿರುವುದು ಬೇಸರದ ಸಂಗತಿಯಾಗಿದೆ. ರಾಜ್ಯದಲ್ಲಿ ಸುಮಾರು ೨೫ ಸಾವಿರ ವಿಕಲಚೇತನ ನೌಕರರು ಕಾರ್ಯನಿರ್ವಹಿಸುತ್ತಿದ್ದು ಅವರಿಗೆ ಅನ್ಯಾಯವಾಗದಂತೆ ಮುಂದೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಬಡ್ತಿ ಮೀಸಲಾತಿಯ ಬಗ್ಗೆ ವಿಷಯವನ್ನು ಪ್ರಸ್ತಾಪಿಸಿ ಆದೇಶ ಜಾರಿಗೊಳಿಸಿ ವಿಕಲಚೇತನ ನೌಕರರಿಗೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಬಳಿಕ ಸಚಿವರಾದ ರಮೇಶ ಜಾಕಿರಹೊಳಿ ಮಾತನಾಡುತ್ತಾ, ಈ ವಿಷಯದ ಬಗ್ಗೆ ಅಧಿಕಾರಿಗಳ ಜೊತೆಯಲ್ಲಿ ಚರ್ಚೆ ಮಾಡುವುದರೊಂದಿಗೆ ಸಚಿವ ಸಂಪುಟದಲ್ಲಿ ಪ್ರಸ್ತಾಪಿಸಿ ಬಡ್ತಿ ಮೀಸಲಾತಿ ಆದೇಶ ಜಾರಿಗೆ ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಈ ಸಮಯದಲ್ಲಿ ವಿಕಲಚೇತನ ನೌಕರರ ಸಂಘದ ರಾಜ್ಯ ಖಜಾಂಚಿ ಮಂಜುನಾಥ ಹಿಂಡಿಹುಳಿ, ಜಿಲ್ಲಾ ಖಜಾಂಚಿ ಕಾಶಿನಾಥ, ಕೊಪ್ಪಳ ತಾಲೂಕ ಅಧ್ಯಕ್ಷರಾದ ಅಂದಪ್ಪ ಇದ್ಲಿ,ಯಲಬುರ್ಗಾ ತಾಲೂಕ ಅಧ್ಯಕ್ಷರಾದ ಮಹೇಶ ಆರೇರ, ನಾಗರಾಜ ಸೊನ್ನದ, ಶ್ರೀಕಾಂತ ಮಟ್ಟಿ ಮುಂತಾದವರು ಹಾಜರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button