ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -: ನೂತನ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಮಂಗಳವಾರ (ಜೂ.30) ಅಧಿಕಾರ ಸ್ವೀಕರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ
ಸೇವಾ ನಿವೃತ್ತಿ ಹೊಂದಿದ ನಿಕಟಪೂರ್ವ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಅಧಿಕಾರವನ್ನು ಹಸ್ತಾಂತರಿಸಿದರು.
ಬೆಳಗಾವಿ ದೊಡ್ಡ ಮತ್ತು ಸೂಕ್ಷ್ಮ ಜಿಲ್ಲೆಯಾಗಿದೆ. ಆದರೆ ನಾನು ಮೂಲತಃ ಬೆಳಗಾವಿ ಜಿಲ್ಲೆಯವನಾಗಿರುವುದರಿಂದ ಕೆಲಸ ಸುಲಭವಾಗಲಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದರು.
ಗದಗ ಜಿಲ್ಲೆಯಲ್ಲಿ ಪ್ರವಾಹ ನಿರ್ವಹಿಸಿದ ಅನುಭವವಿದೆ.
ಕೊರೊನಾ, ನೆರೆ, ಬರ ಸೇರಿದಂತೆ ಎಲ್ಲ ಪರಿಸ್ಥಿತಿಯನ್ನು ನಿಭಾಯಿಸಿದ ಅನುಭವವಿದೆ. ಅದು ಇಲ್ಲಿ ಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ನಿವೃತ್ತರಾದ ನಿಕಟಪೂರ್ವ ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಅವರಿಗೆ ನೂತನ ಜಿಲ್ಲಾಧಿಕಾರಿಗಳು ಹೂಗುಚ್ಛ ನೀಡಿ ಶುಭ ಕೋರಿದರು.
ಸೇವಾವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಡಾ.ಬೊಮ್ಮನಹಳ್ಳಿ ಅವರು ಕೃತಜ್ಞತೆಯನ್ನು ಸಲ್ಲಿಸಿದರು.
ನೂತನ ಜಿಲ್ಲಾಧಿಕಾರಿ ಮಹಾಂತೇಶ ಜಿ. ಹಿರೇಮಠ ಅವರು ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನ ಗೋಣಿಕೊಪ್ಪ ಗ್ರಾಮದವರು.
ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಎಂ.ಎಸ್ಸಿ(ಭೌತಶಾಸ್ತ್ರ) ಪದವೀಧರರಾಹಿರುವ ಅವರು, ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ಕೆಲಕಾಲ ಭೌತಶಾಸ್ತ್ರ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.
1991 ರಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರಾಗಿ ಸರ್ಕಾರಿ ಸೇವೆ ಆರಂಭಿಸಿದ ಅವರು, ಸೇವೆಯಲ್ಲಿ ಬಡ್ತಿ ಪಡೆದು ಜೂನ್ 2015 ರಲ್ಲಿ ಕರ್ನಾಟಕ ಆಡಳಿತ ಸೇವೆಯಿಂದ ಭಾರತೀಯ ಆಡಳಿತ ಸೇವೆಯ 2010 ರ ತಂಡಕ್ಕೆ ಸೇರ್ಪಡೆಯಾದರು.
ಬಾಗಲಕೋಟೆ ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾಗಿ, ಹುಬ್ಬಳ್ಳಿ-ಧಾರವಾಡದ ಬಿ.ಆರ್.ಟಿ.ಎಸ್. ಕಂಒನಿ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
ಇದಾದ ಬಳಿಕ ಆಗಸ್ಟ್ 2018 ರಿಂದ ಇಲ್ಲಿಯವರೆಗೆ ಗದಗ ಜಿಲ್ಲಾಧಿಕಾರಿಗಳಾಗಿ ಎಂ.ಜಿ.ಹಿರೇಮಠ ಅವರು ಕಾರ್ಯನಿರ್ವಹಿಸುತ್ತಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ