ನವಜಾತ ಶಿಶು ಪತ್ತೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -: ರಾಯಬಾಗ ತಾಲೂಕಿನ ಇಟ್ನಾಳ ಗ್ರಾಮದ ಹಾಳಹಳ್ಳಿ ತೊಟದ ದೇವಸ್ಥಾನದಲ್ಲಿ ನವಜಾತ ಶಿಶುವೊಂದನ್ನು ಪತ್ತೆಯಾಗಿದ್ದು, ಸ್ಥಳಿಯರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗೆ ಮತ್ತು ಆಶಾ ಕಾರ್ಯಕರ್ತೆಯರಿಗೆ ಮಾಹಿತಿ ನೀಡಿ, ಮಗುವನ್ನು ರಕ್ಷಣೆ ಮಾಡಲಾಗಿದೆ.
ಶಿಶುವನ್ನು ರಾಯಬಾಗ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿ ತಾಲೂಕಾ ವೈದ್ಯಾಧಿಕಾರಿಗಳು ತಾತ್ಕಾಲಿಕ ಚಿಕಿತ್ಸೆ ನೀಡಿ ಮಗುವಿನ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ಮಗುವಿನ ಆರೋಗ್ಯ ಸುಧಾರಣೆಯಾಗಿದ್ದು ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರಪಡಿಸಿದ್ದು, ಸದರಿ ಮಗುವನ್ನು ಮಕ್ಕಳ ರಕ್ಷಣಾ ಸಮಿತಿ ಇವರು ತಾತ್ಕಾಲಿಕವಾಗಿ ರಕ್ಷಣೆ ಮತ್ತು ಪೋಷಣೆಗಾಗಿ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನ ದತ್ತು ಸ್ವೀಕಾರ ಕೇಂದ್ರಲ್ಲಿ ಅಭಿರಕ್ಷಣೆಗಾಗಿ ಇಡಲಾಗಿದೆ.
ಮಗುವಿನ ಜೈವಿಕ ಪಾಲಕರು ಇದ್ದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸ್ಟೇಟ್ ಬ್ಯಾಂಕ ಆಫ್ ಇಂಡಿಯಾ ಹಿಂದುಗಡೆ ಶಿವಂ ರೆಸಿಡೆನ್ಸಿ ಎದುರುಗಡೆ ಶಾರದಾ ಎನ್ಕ್ಲೇವ್ ಪ್ಲಾಟ ನಂ.೨೫೫ ಸಿ.ಟಿ.ಎಸ್.ನಂ.೯೨೧೬ ೧ ನೇ ಮಹಡಿ ಶಿವಬಸವ ನಗರ ಬೆಳಗಾವಿ ದೂರವಾಣಿ ಸಂಖ್ಯೆ ೦೮೩೧-೨೪೭೪೧೧೧ ಗೆ ಸಂಪರ್ಕಿಸಬೇಕೆಂದು ಬೆಳಗಾವಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಪ್ಪಾಣಿ ನಗರಸಭೆ: ಅರ್ಜಿ ಅಹ್ವಾನ
ನಿಪ್ಪಾಣಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ದೀನದಯಾಳು ಆಂತೋದಯ ಯೋಜನೆಯಡಿ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದು ನಿಪ್ಪಾಣಿ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.
ಸ್ವಯಂ ಉದೋಗ ಕಾರ್ಯಕ್ರಮ, ಸ್ವ ಸಹಾಯ ಗುಂಪುಗಳು, ಎಸ್.ಎಚ್.ಜಿ. ಕ್ರೇಟಿಟ್ ಲಿಂಕೆಜ ಗುಂಪುಗಳಿಗೆ ಪ್ರತಿಶತ ೭ರ ಮೇಲ್ಪಟ್ಟ ಬಡ್ಡಿ ಸಹಾಯಧನದೊಂದಿಗೆ ರಾಷ್ಟ್ರಕೃತ ಬಾಂಕಾಗಳಲ್ಲಿ ಸಾಲ ನೀಡುಲಾಗುವುದು.
ಹೊಸ ೭ ಸಹಾಯ ಗುಂಪುಗಳ ರಚನೆ ಮಾಡುವುದು . ತರಬೇತಿ ಮೂಲಕ ಉದ್ಯೋಗ ಮತ್ತು ಸ್ಥಳ ನಿಯುಕ್ತ ಘಟಕದಡಿ ಯುವಕ ಯುವತಿಯರಿಗೆ ತರಬೇತಿ ನೀಡುವುದು ಹಾಗೂ ನಗರದ ಬೀದಿ ಬದಿ ವ್ಯಾಪಾರಸ್ಥರಿಗಾಗಿ ಅರ್ಜಿಗಳನ್ನು ಅಹ್ವಾನಿಸಲಾಗಿದೆ .
ಆಸಕ್ತರು ಜುಲೈ ೧೫ ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕಾರ್ಯಾಲಯದ ವಿಷಯ ನಿರ್ವಾಹಕರನ್ನು ಭೇಟಿಯಾಗಿ ಮಾಹಿತಿ ಪಡೆಯಬೇಕು. ಅವಧಿ ಮೀರಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ನಿಪ್ಪಾಣಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಕಲಚೇತನರಿಂದ ಅರ್ಜಿ ಅಹ್ವಾನ
ಜಿಲ್ಲೆಯಲ್ಲಿ ವಿಕಲಚೇತನರಿಗಾಗಿ ಸೇವೆ ಸಲ್ಲಿಸುತ್ತಿರುವ ಸ್ವಯಂ-ಸೇವಾ ಸಂಸ್ಥೆಗಳು ಮತ್ತು ೨೦೧೬ರ ಅಧಿನಿಯಮದಡಿ ಗುರುತಿಸಲಾಗಿರುವ ವಿವಿಧ ಬಗೆಯ ವಿಕಲಚೇತನ ವ್ಯಕ್ತಿಗಳಿಂದ ನಾಮನಿರ್ದೇಶಿತ ಸದಸ್ಯತ್ವಕ್ಕಾಗಿ ಈಗಾಗಲೇ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ ನಿಗದಿತ ವಿಕಲಚೇತನರಿಂದ ಅರ್ಜಿಗಳು ಸಲ್ಲಿಕೆಯಾಗದಿರುವ ಕಾರಣ ಜಿಲ್ಲೆಯ ಆಸಕ್ತಿಯುಳ್ಳ ಅರ್ಹ ಸಂಸ್ಥೆ ಹಾಗೂ ವಿವಿಧ ಬಗೆಯ ವಿಕಲಚೇತನ ವ್ಯಕ್ತಿಗಳು ಜುಲೈ ೩೦ ರಒಳಗಾಗಿ ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕಛೇರಿಗೆ ಸಲ್ಲಿಸಬೇಕು ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ ೨೦೧೬ ಅನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಜಿಲ್ಲಾ ಮಟ್ಟದ ಸಮಿತಿಯನ್ನು ಜಿಲ್ಲಾಧಿಕಾರಿಗಳವರ ಅಧ್ಯಕ್ಷತೆಯಲ್ಲಿ ರಚಿಸಲಾಗುತ್ತಿದ್ದು, ಸಮಿತಿಯಲ್ಲಿ ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಬ್ಬರು ಸ್ವಯಂ-ಸೇವಾ ಪ್ರತಿನಿಧಿಗಳನ್ನು ಹಾಗೂ ವಿವಿಧ ಬಗೆಯ ಅಂಗವಿಕಲತೆ ಹೊಂದಿರುವ ಐವರು (೫ಜನ) ವಿಕಲಚೇತನರನ್ನು ಜಿಲ್ಲಾಧಿಕಾರಿಗಳು ನಾಮನಿರ್ದೇಶನ ಮಾಡಬೇಕಾಗಿರುತ್ತದೆ.
ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಛೇರಿ ದೂರವಾಣಿ ಸಂಖ್ಯೆ ೦೮೩೧-೨೪೭೬೦೯೬/೭ ಅಥವಾ ಆಯಾ ತಾಲೂಕಿನ ಎಂ.ಆರ್.ಡಬ್ಲ್ಯೂಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಕಾಶವಾಣಿಯಲ್ಲಿ ಓದಿನ ಕಾರ್ಯಕ್ರಮ
ಧಾರವಾಡ ಕೇಂದ್ರದಲ್ಲಿ ನಿರ್ಮಿಸಿದ್ದ ಬಸವರಾಜ ಕಟ್ಟೀಮನಿಯವರ ಮಾಡಿ ಮಡಿದವರು ಕಾದಂಬರಿಯ ಸರಣಿ ಓದಿನ ಕಾರ್ಯಕ್ರಮವನ್ನು ಆಕಾಶವಾಣಿ ಧಾರವಾಡ ಕೇಂದ್ರವು ಪ್ರತಿ ಶುಕ್ರವಾರ ಮಧ್ಯಾಹ್ನ ೨.೪೦ ಕ್ಕೆ ಮರು ಪ್ರಸಾರ ಮಾಡಲಿದೆ.
ಜುಲೈ ೩ ರಿಂದ ಈ ಸರಣಿ ಆರಂಭವಾಗಲಿದ್ದು, ಐವತ್ತು ವಾರಗಳವರೆಗೆ ನಿರಂತರ ಪ್ರಸಾರವಾಗಲಿದೆ ಎಂದು ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಒಂದು ವರ್ಷದ ರಂಗಶಿಕ್ಷಣ ತರಬೇತಿಗೆ ಅರ್ಜಿ ಆಹ್ವಾನ
ಮೈಸೂರಿನಲ್ಲಿ ಸ್ಥಾಪಿತವಾಗಿರುವ ರಂಗಾಯಣವು ಒಂದು ಪೂರ್ಣ ಪ್ರಮಾಣದ ರಂಗ ರೆಪರ್ಟರಿಯಾಗಿರುತ್ತದೆ. ಇದರ ಜೊತೆಗೆ ಕಳೆದ ೧೧ ವರ್ಷಗಳ ಹಿಂದೆ ಸ್ಥಾಪಿಸಿದ ಭಾರತೀಯ ರಂಗಶಿಕ್ಷಣ ಕೇಂದ್ರವು ರಂಗ ತರಬೇತಿ ಶಾಲೆಯಾಗಿದ್ದು, ಪ್ರತಿವರ್ಷ ಹತ್ತು ತಿಂಗಳ ರಂಗಶಿಕ್ಷಣದಲ್ಲಿ ಡಿಪ್ಲೊಮೊ ಕೋರ್ಸ್ನ್ನು ನಡೆಸುತ್ತಾ ಬಂದಿದ್ದು,. ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ರಂಗತರಬೇತಿ ಕೋರ್ಸ್ಗೆ ಸೇರಬಯಸುವ ವಿದ್ಯಾರ್ಥಿಗಳು ಕನಿಷ್ಠ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆ ತೇರ್ಗಡೆ ಹೊಂದಿರಬೇಕು. ವಯೋಮಿತಿ ಅರ್ಜಿ ಸಲ್ಲಿಸಲು ನಿಗಧಿಗೊಳಿಸಿದ ಕಡೆಯ ದಿನಾಂಕಕ್ಕೆ ೧೮ ವರ್ಷಗಳು ತುಂಬಿದ ಆದರೆ ೨೮ ವರ್ಷಗಳು ತುಂಬಿರದೆ ಅಭ್ಯರ್ಥಿಗಳಾಗಿರಬೇಕು .
ಆಯ್ಕೆಯಾದ ವಿದ್ಯಾರ್ಥಿಗಳಿಗೆ ನಿಯಮಾನುಸಾರ ರಂಗಾಯಣದಿಂದಲೇ ವಸತಿ ವ್ಯವಸ್ಥೆ ಕಲಿಸಲಾಗುವುದು ಮತ್ತು ಮಾಹೆಯಾನ ರೂ ೩,೦೦೦ ವಿದ್ಯಾರ್ಥಿ ವೇತನ ಹಾಗೂ ಮಾಸಿಕ ರೂ ೨,೦೦೦ ಊಟೋಪಚಾರದ ಭತ್ಯೆ ಪಾವತಿಸಲಾಗುವುದು.
ರಂಗಶಾಲೆಗೆ ಸೇರಬಯಸುವ ವಿದ್ಯಾರ್ಥಿಗಳು ರಂಗಾಯಣದ ವೆಬ್ ಸೈಟ್ ನಲ್ಲಿ ಅರ್ಜಿಯನ್ನು ಡೌನ್ ಲೋಡ್ ಮಾಡಿಕೊಂಡು ಅಥವಾ ರಂಗಾಯಣದ ಕಚೇರಿಯಲ್ಲಿ ಶುದ್ದಾಗಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಶುಲ್ಕ ರಂಗಕೈಪಿಡಿ ಸೇರಿ ( ಸಾಮಾನ್ಯ ವರ್ಗ ರೂ ೨೦೦, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗ ಮತ್ತು ಪ್ರವರ್ಗ-೧ ಅಭ್ಯರ್ಥಿಗಳಿಗೆ ರೂ ೧೫೦) ಡಿ.ಡಿ.ಯನ್ನು ಜಂಟಿ ನಿರ್ದೇಶಕರು, ರಂಗಾಯಣ, ಕಲಾಮಂದಿರ ಆವರಣ, ವಿನೋಬಾ ರಸ್ತೆ, ಮೈಸೂರು ಇವರ ಹೆಸರಿನಲ್ಲಿ ಪಡೆದು ರಂಗಾಯಣದ ವಿಳಾಸಕ್ಕೆ ಜುಲೈ ೧೦ ರೊಳಗೆ ಅಂಚೆಯ ಮೂಲಕ ಕಳುಹಿಸಬಹುದು. ಅಥವಾ ಖುದ್ದಾಗಿ ರಂಗಾಯಣದ ಕಛೇರಿಗೆ ಜುಲೈ ೧೦ ರ ಸಂಜೆ ೫.೩೦ ಗಂಟೆಯೊಳಗೆ ತಲುಪಿಸುವುದು.
ಅಂಚೆ ಮೂಲಕ ಅರ್ಜಿ ಕಳುಹಿಸುವವರು ನಿಮಗೆ ಕಛೇರಿಯಿಂದ ಕಳುಹಿಸಬೇಕಾಗಿರುವ ರಂಗಕೈಪಿಡಿ ಅಂಚೆ ವೆಚ್ಚ ರೂ .೩೦ ಒಳಗೊಂಡ ಮೊತ್ತದ ಡಿ.ಡಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ನಿಗಧಿಪಡಿಸಿರುವ ಕಡೆಯ ದಿನಾಂಕದಿಂದ ೧೦ ದಿನದೊಳಗೆ ಸಂದರ್ಶನದ ದಿನಾಂಕವನ್ನು ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು ಹಾಗೂ ಅಭ್ಯರ್ಥಿಗಳಿಗೆ ಪತ್ರ ಮುಖೇನ ತಿಳಿಸಲಾಗುವುದು. ರಂಗಾಯಣದ ಆವರಣದಲ್ಲಿ ನಡೆಯುವ ಈ ಸಂದರ್ಶನಕ್ಕೆ ವಿದ್ಯಾರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲೇ ಹಾಜರಾಗಬೇಕು. ಪ್ರತಿ ವರ್ಷದಂತೆ ಗರಿಷ್ಠ ೨೦ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾವಕಾಶವಿರುತ್ತದೆ. ಸಂದರ್ಶನದ ದಿನ ಮಧ್ಯಾಹ್ನ ಲಘು ಉಪಹಾರದ ವ್ಯವಸ್ಥೆಯನ್ನು ಮಾತ್ರ ರಂಗಾಯಣದಿಂದ ಮಾಡಲಾಗುವುದು. ಯಾವುದೇ ವಸತಿ ವ್ಯವಸ್ಥೆ ಇರುವುದಿಲ್ಲ.
ಕೋವಿಡ್ ನಿರ್ಬಂಧಗಳ ಹಿನ್ನಲೆಯಲ್ಲಿ ಸರ್ಕಾರವು ಹೊರಡಿಸುವ ಮಾರ್ಗಸೂಚಿಗಳನ್ನು ಅನುಸರಿಸಿ ಈ ಕೋರ್ಸ್ ಆರಂಭವಾಗುವ ದಿನಾಂಕ ಮತ್ತು ಮುಕ್ತಾಯಗೊಳ್ಳುವ ದಿನಾಂಕವನ್ನು ನಿಗದಿಗೊಳಿಸಲಾಗುವುದು.. ಹೆಚ್ಚಿನ ವಿವರಕ್ಕಾಗಿ ದೂರವಾಣಿ ಸಂಖ್ಯೆ ೦೮೨೧-೨೫೧೨೬೩೯, ೯೪೪೮೯೩೮೬೬೧, ೯೯೧೬೬೦೦೦೨೭ ಹಾಗೂ ೯೪೪೮೪೨೨೩೪೩ ಗೆ ಸಂಪರ್ಕಿಸುವುದು ಎಂದು ರಂಗಾಯಣದ ಜಂಟಿ ನಿರ್ದೆಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆತ್ಮ ನಿರ್ಭರ ಯೋಜನೆಯಡಿ ಕಿರು ಸಾಲಕ್ಕಾಗಿ ಅರ್ಜಿ ಆಹ್ವಾನ
ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ ನಿಧಿಯ ವಿಶೇಷ ಕಿರು ಸಾಲ ಸೌಲಭ್ಯ ಯೋಜನೆ ಅಭಿಯಾನದ ರೀತಿಯಲ್ಲಿ ಅನುಷ್ಠಾನಗೊಳ್ಳುತ್ತಿದ್ದು, ಈಗಾಗಲೇ ಕೈಗೊಂಡ ಬೀದಿ ವ್ಯಪಾರಿಗಳು ಸಮಿಕ್ಷೆಯಲ್ಲಿ ಬಿಟ್ಟುಹೊಗಿರುವ ಮತ್ತು ಹೊಸದಾಗಿ ಬೀದಿ ವ್ಯಪಾರದಲ್ಲಿ ತೋಡಗಿಕೊಂಡಿರುವ ವ್ಯಾಪಾರಿಗಳಿಗೆ ಅರ್ಜಿ ಅಹ್ವಾನಿಸಲಾಗಿದೆ.
ಬೀದಿ, ಬದಿ ವ್ಯಪಾರಸ್ಥರು ಸಂಬಂಧಿಸಿದ ದಾಖಲೆಗಳನ್ನು ಜುಲೈ ೧೫ ರೊಳಗೆ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಯೋಜನೆಯು ಜುಲೈ-೧, ೨೦೨೦ ರಿಂದ ಆರಂಭಗೊಂಡು ಮಾರ್ಚ ೩೦, ೨೦೨೨ ವರೆಗೆ ಯೋಜನೆಯ ಅಭಿಯಾನ ನಡೆಯಲಿದೆ.
ಬೀದಿ ವ್ಯಾಪಾರಸ್ಥರಿಗೆ ಕೈಗೆಟುಕುವ ದರದಲ್ಲಿ ಬ್ಯಾಂಕುಗಳ ಮೂಲಕ ೧೦ ಸಾವಿರ ರೂ ಗಳವರೆಗೆ ಕಿರು ಸಾಲ ಸೌಲಭ್ಯ ನೀಡುವದು. ನಿಯಮಿತ ಸಾಲ ಸೌಲಭ್ಯ ನೀಡುವದು. ನಿಯಮಿತ ಸಾಲ ಮರುಪಾವತಿಗೆ ಉತ್ತೇಜಿಸುವುದು. ೭% ರಷ್ಟು ಬಡ್ಡಿ ಸಹಾಯಧನ ನೀಡುವುದು.
ಡಿಜಿಟಲ್ ವಹಿವಾಟಿಗೆ ಉತ್ತೇಜನ ಹಾಗೂ ಬಹುಮಾನ ನೀಡುವ ಉದ್ದೇಶಗಳನ್ನು ಹೊಂದಿದೆ. ಸಮೀಕ್ಷೆಯಲ್ಲಿ ಗುರುತಿಸಲ್ಪಟ್ಟ ಬೀದಿ ವ್ಯಾಪಾರಸ್ಥರು ಅರ್ಹ ಫಲಾನುಭವಿಗಳಾಗಿರುತ್ತಾರೆ. ಬೀದಿ ವ್ಯಪಾರಸ್ಥರ ಮಾರಾಟ ಪ್ರಮಾಣ ಪತ್ರ ಮತ್ತು ಬೀದಿ ವ್ಯಪಾರಸ್ಥರ ಗುರುತಿನ ಚೀಟಿ, ರೇಶನ ಕಾರ್ಡ್, ಆಧಾರ್ ಕಾರ್ಡ, ಚುನಾವಣಾ ಗುರುತಿನ ಚೀಟಿ, ವೈಯಕ್ತಿಕ ಉಳಿತಾಯದ ಬ್ಯಾಂಕ್ ಪಾಸ್ಬುಕ್ ಝುರಾಕ್ಸ್, ಜಾತಿ ಮತ್ತು ಆದಾಯ ಮತ್ತು ವಿಕಲಚೇತನ ಪ್ರಮಾಣಪತ್ರ ಹಾಗೂ ಇತರ ಅಗತ್ಯ ದಾಖಲೆಗಳೊಂದಿಗೆ ನಿಗದಿತ ಅರ್ಜಿ ನಮೂನೆಯಲ್ಲಿ ಸಲ್ಲಿಸಬಹುದು.
ತಮ್ಮ ದೈನಂದಿನ ಹಣಕಾಸಿನ ವ್ಯವಹಾರವನ್ನು ಹೊಂದಿರುವ ರಾಷ್ಟ್ರೀಕೃತ ಬ್ಯಾಂಕ ಅಥವಾ ಕೊ-ಆಫ್ರೇಟಿವ ಬ್ಯಾಂಕಿನಲ್ಲಿ ಕಿರು ಸಾಲ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಸಮುದಾಯ ಸಂಘಟನಾಧಿಕಾರಿ ಎಸ್.ವೈ.ಹಾದಿಮನಿ ಅವರನ್ನು ಕಛೇರಿ ಸಮಯದಲ್ಲಿ ಭೇಟಿಯಾಗಿ ಮಾಹಿತಿ ಪಡೆದುಕೊಳ್ಳಲು ಮುಖ್ಯಾಧಿಕಾರಿ ಪಿ. ಎಂ. ಚನ್ನಪ್ಪನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡೆಂಗಿ ಅಥವಾ ಚಿಕುನ್ ಗುನ್ಯಾ ತಡೆಯಲು ಕ್ರಮಕೈಗೊಳ್ಳಿ
ಡೆಂಗೀ ನಿಯಂತ್ರಣದಲ್ಲಿ ಸಮುದಾಯದ ಪಾತ್ರ ಪ್ರಮುಖವಾಗಿದೆ ಡೆಂಗಿ ಅಥವಾ ಚಿಕುಂಗುನ್ಯಾ ಜ್ವರಗಳ ಬಗ್ಗೆ ಸಮುದಾಯವು ಮುಜಾಗೃತ ಕ್ರಮಕೈಗೊಂಡಾಗ ಮಾತ್ರ ಡೆಂಗಿ ಅಥವಾ ಚಿಕುಂಗುನ್ಯಾ ರೋಗ ಹರಡುವುದನ್ನು ತಡೆಯಲು ಸಾದ್ಯ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
ರೋಗ ನಿಯಂತ್ರಣದ ಕ್ರಮಗಳು
ಡೆಂಗಿ/ಚಿಕುಂಗುನ್ಯಾ ವೈರಸ್ ನಿಂದ ಉಂಟಾಗುವ ಜ್ವರಗಳು., ರಕ್ತ ಪರೀಕ್ಷೆಯಿಂದ ಮಾತ್ರ ಈ ಜ್ವರಗಳನ್ನು ಪತ್ತೆ ಹಚ್ಚಬಹುದು. ಹಗಲಿನಲ್ಲಿ ಕಚ್ಚುವ ಸೋಂಕಿತ ಈಡೀಸ್ ಸೊಳ್ಳೆಗಳಿಂದ ಜ್ವರ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ.
ಈಡೀಸ್ ಸೊಳ್ಳೆಗಳು ಮನೆಯಲ್ಲಿನ ಸ್ವಚ್ಚ ನೀರಿನ ಸಂಗ್ರಹಗಳಲ್ಲಿ ಉತ್ಪತ್ತಿಯಾಗುತ್ತವೆ. ಆದ್ದರಿಂದ, ನಿಮ್ಮ ಮನೆಯಲ್ಲಿನ ತೊಟ್ಟಿ, ಬ್ಯಾರಲ್, ಡ್ರಮ್ಗಳಲ್ಲಿನ ನೀರನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಸ್ವಚ್ಚಗೊಳಿಸಿ ಪುನ: ನೀರು ತುಂಬಿ ಮತ್ತು ಎಲ್ಲಾ ನೀರಿನ ಶೇಖರಣೆಗಳನ್ನು ಮುಚ್ಚಿಡಿ.
ಮನೆ ಸುತ್ತ ಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಿ, ಘನ ತ್ಯಾಜ್ಯಗಳನ್ನು ವಿಲೇವಾರಿ ಮಾಡಿ ಪರಿಸರವನ್ನು ಸ್ವಚ್ಚವಾಗಿಡಿ. ಸೊಳ್ಳೆಗಳು ಕಚ್ಚದಂತೆ ಮೈತುಂಬಾ ಬಟ್ಟೆಧರಿಸಿ, ಸೊಳ್ಳೆ ಪರದೆ, ಸೊಳ್ಳೆ ಬತ್ತಿ, ಮುಲಾಮು ದ್ರಾವಣ ಇವುಗಳನ್ನು ಉಪಯೋಗಿಸಿ.
ಡೆಂಗಿ/ಚಿಕುಂಗುನ್ಯಾ ರೋಗಿಗಳು ತಪ್ಪದೇ ಸೊಳ್ಳೆಯ ಪರದೆಯನ್ನು ಉಪಯೋಗಿಸಬೇಕು. ರಕ್ತ ಪರೀಕ್ಷೆ ಮತ್ತು ಚಿಕಿತ್ಸೆ ಎಲ್ಲಾ ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಭ್ಯವಿರುತ್ತದೆ. ಈಡೀಸ್ ಲಾರ್ವಾ ಸಮೀಕ್ಷೆಗಾಗಿ ನಿಮ್ಮ ಮನೆಗೆ ಭೇಟಿ ನೀಡುವ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಸ್ವಯಂ ಸೇವಕರಿಗೆ ಸಹಕಾರ ನೀಡಿ ಅವರ ಸಲಹೆಗಳನ್ನು ಪಾಲಿಸಿ.
ಯಾವುದೇ ಜ್ವರವಿರಲಿ ನಿರ್ಲಕ್ಷಿಸದೆ ತಕ್ಷಣ ವೈದ್ಯರ ಸಲಹೆ ಪಡೆಯಬೇಕು. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಶುಲ್ಕ ರಹಿತ ಸಹಾಯವಾಣಿ ಸಂಖ್ಯೆ ೧೦೪ ಕ್ಕೆ ಸಂಪರ್ಕಿಸಬಹುದು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ