
ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ಡಿ ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಜನರ ಮುಂದೆ ಅಧಿಕಾರ ಸ್ವೀಕರಿಸದೇ ಕೇವಲ ಟಿವಿ ಮುಂದೆ ಅಧಿಕಾರ ಸ್ವೀಕರಿಸಿದ್ದಾರೆ. ಅದಕ್ಕೆಲ್ಲ ಮಹತ್ವ ಕೊಡಬೇಕಿಲ್ಲ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಕಿಡಿಕಾರಿದ್ದಾರೆ.
ಕಲಬುರ್ಗಿ ಜಿಲ್ಲೆ ಅಫಜಲಪುರ ತಾಲೂಕಿನ ಸೊನ್ನ ಬ್ಯಾರೇಜ್ ಗೆ ಭೇಟಿ ನೀಡಿ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್ ನನ್ನ ಮಿತ್ರನಲ್ಲ. ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಅಷ್ಟೇ. ಡಿಕೆ ಶಿವಕುಮಾರ್ ಶಕ್ತಿ ಏನಿದೆ ಎನ್ನುವುದು ನನಗೆ ಗೊತ್ತಿದೆ. ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಷ್ಟೆ. ನನಗೂ ಅವರಿಗೂ ಯಾವುದೇ ಸಂಬಂಧ ಇಲ್ಲ ಎಂದರು.
ಚಿಕ್ಕಮಗಳೂರಿನಲ್ಲಿ ಕೆಲ ಬಿಜೆಪಿ ನಾಯಕರ ಸಭೆ ನಡೆಸಿದ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಚಿವರು, ಆರ್.ಅಶೋಕ್ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಅಲ್ಲಿ ಕೆಲ ನಾಯಕರು ಸೇರಿದ್ದಾರೆ. ಅಷ್ಟಕ್ಕೆ ಭಿನ್ನಮತ ಅಂದರೆ ಹೇಗೆ. ನಮ್ಮ ನಾಯಕರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಯಡಿಯೂರಪ್ಪನವರು ಸಿಎಂ ಆಗಿ ಮೂರು ವರ್ಷ ಪೂರೈಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದ ನೀರಾವರಿ ಸಮಸ್ಯೆಗಳ ಬಗ್ಗೆ ಕಠಿಣ ನಿಲುವು ತಗೋತೀವಿ. ಈ ಹಿನ್ನೆಲೆಯಲ್ಲಿಯೇ ನಾನು ರಾಜ್ಯ ಪ್ರವಾಸ ಕೈಗೊಂಡಿದ್ದೇನೆ. ನೆರೆ ಹಾವಳಿಯ ಬಗ್ಗೆ ಮಹಾರಾಷ್ಟ್ರ ಜೊತೆ ಚರ್ಚಿಸಿ. ನೀರಾವರಿ ಯೋಜನೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಕೊರೊನಾ ಭೀತಿ ಹಿನ್ನಲೆಯಲ್ಲಿ ಗಾಣಗಾಪುರ ದತ್ತಾತ್ರೇಯ ದೇವಸ್ಥಾನ ಸಾರ್ವಜನಿಕರ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ. ಆದರೆ ನಿರ್ಬಂಧದ ನಡುವೆಯೂ ಸಚಿವ ರಮೇಶ್ ಜಾರಕಿಹೊಳಿ ದೇವರ ದರ್ಶನ ಪಡೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
 
					 
				 
					 
					 
					 
					
 
					 
					 
					


