ಪ್ರಗತಿವಾಹಿನಿ ಸುದ್ದಿ; ಮುಂಬೈ: ಬಾಲಿವುಡ್ ಹಿರಿಯ ನೃತ್ಯ ಸಂಯೋಜಕಿ ಸರೋಜ್ ಖಾನ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು.
ಸರೋಜ್ ಖಾನ್ ಅವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಮುಂಬೈನ ಬಾಂದ್ರಾದಲ್ಲಿರುವ ಗುರು ನಾನಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇದೀಗ ಹೃದಯಾಘಾತವಾಗಿ ಚಿಕಿತ್ಸೆ ಫಲಕಾರಿಯಾಗದೆ ಸರೋಜ್ ಖಾನ್ ನಿಧನರಾಗಿದ್ದಾರೆ.
ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆಯೇ ಅವರಿಗೆ ಕೊರೊನಾ ಪರೀಕ್ಷೆ ಮಾಡಿಸಲಾಗಿತ್ತು. ಈ ವರದಿಯಲ್ಲಿ ನೆಗೆಟಿವ್ ಬಂದಿತ್ತು. ಉಸಿರಾಟದ ತೊಂದರೆ ಮತ್ತು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸರೋಜ್ ಖಾನ್ ಇಂದು ನಸುಕಿನ ಜಾವ ಹೃದಯಾಘಾತದಿಂದ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಸರೋಜ್ ಖಾನ್ 1974 ರಲ್ಲಿ ಬಿಡುಗಡೆಯಾದ ಹಿಂದೆ ‘ನಾಮ್’ ಸಿನಿಮಾದ ಮೂಲಕ ನೃತ್ಯ ಸಂಯೋಜಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ನಂತರ ಸುಮಾರು ನಾಲ್ಕು ದಶಕಗಳ ಕಾಲ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. ಸುಮಾರು 2 ಸಾವಿರಕ್ಕೂ ಅಧಿಕ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ.
‘ಡೋಲಾ ರೆ ಡೋಲಾ’, ಏಕ್ ದೋ ತೀನ್’, ಚೋಲಿ ಕೆ ಪೀಚೆ ಕ್ಯಾಹೆ’, ಸೇರಿದಂತೆ ಇನ್ನೂ ಅನೇಕ ಸೂಪರ್ ಹಿಟ್ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಸರೋಜ್ ಖಾನ್ ಅವರಿಗೆ ಮೂರು ಬಾರಿ ರಾಷ್ಟ್ರ ಪ್ರಶಸ್ತಿ ದೊರಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ