ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಶನಿವಾರ ಶಿಕ್ಷಕರಿಗೆ ರಜೆ ವಿಷಯದಲ್ಲಿ ಉಂಟಾಗಿದ್ದ ಗೊಂದಲಗಳಿಗೆ ಕೊನೆಗೂ ತೆರೆ ಬಿದ್ದಿದೆ. ಎಲ್ಲ ಸರಕಾರಿ ನೌಕರರಂತೆ ಶಿಕ್ಷಕರಿಗೂ ಶನಿವಾರ ರಜೆ ಎಂದು ಶಿಕ್ಷಣ ಇಲಾಖೆ ಸ್ಪಷ್ಟನೆ ನೀಡಿದೆ.
ಶುಕ್ರವಾರ ಸಂಜೆಯವರೆಗೂ ಈ ಬಗ್ಗೆ ಸ್ಪಷ್ಟನೆ ಇಲ್ಲದೆ ಶಿಕ್ಷಕರಲ್ಲಿ ಮತ್ತು ಶಿಕ್ಷಣ ಇಲಾಖೆಯಲ್ಲಿ ತೀವ್ರ ಗೊಂದಲ ಉಂಟಾಗಿತ್ತು. ಶಿಕ್ಷಣ ಇಲಾಖೆಯ ಅನೇಕ ಕಚೇರಿಗಳಿಂದ ಎರಡೆರಡು ಆದೇಶಗಳು ಹೊರಬಿದ್ದಿದ್ದವು. ಮೊದಲು ಶನಿವಾರ ಶಿಕ್ಷಕರಿಗೂ ರಜೆ ಎಂದು ಆದೇಶ ಹೊರಡಿಸಿದ್ದರೆ ಶುಕ್ರವಾರ ಸಂಜೆಯ ಹೊತ್ತಿಗೆ ಇಲಾಖೆಯಿಂದ ಸ್ಪಷ್ಟ ಆದೇಶ ಇಲ್ಲದಿರುವುದರಿಂದ ಶಿಕ್ಷಕರು ಶನಿವಾರ ಶಾಲೆಗೆ ಹಾಜರಾಗಬೇಕು ಎನ್ನುವ ಮತ್ತೊಂದು ಆದೇಶ ಹೊರಡಿಸಲಾಗಿತ್ತು.
ಇದೀಗ 3ನೇ ಆದೇಶ ಹೊರಡಿಸಲಾಗುತ್ತಿದ್ದು, ಅಂತಿಮವಾಗಿ ಶನಿವಾರ ಶಿಕ್ಷಕರಿಗೂ ರಜೆ ಎಂದು ಪ್ರಾಥಮಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಅದನ್ನು ಉಲ್ಲೇಖಿಸಿ ಎಲ್ಲ ಕಡೆ ರಜೆಯ ಆದೇಶ ಹೊರಡಿಸಲಾಗುತ್ತಿದೆ.
ಈ ಬಗ್ಗೆ ಬೆಳಗಾವಿ ಡಿಡಿಪಿಐ ಪುಂಡಲಿಕ್ ಅವರನ್ನು ಪ್ರಗತಿವಾಹಿನಿ ಪ್ರಶ್ನಿಸಿದಾಗ, ನಮಗೆ ಶುಕ್ರವಾರ ಸಂಜೆಯವರೆಗೂ ಈ ಬಗ್ಗೆ ಸ್ಪಷ್ಟ ನಿರ್ದೇಶನವಿರಲಿಲ್ಲ. ಹಾಗಾಗಿ ಶಿಕ್ಷಕರಿಗೆ ರಜೆ ನೀಡುವ ಕುರಿತು ಯಾವುದೇ ಆದೇಶ ಹೊರಡಿಸಿರಲಿಲ್ಲ. ಇದೀಗ ಆದೇಶ ಬಂದಿದ್ದು, ರಜೆ ನೀಡುವಂತೆ ಆದೇಶ ಹೊರಡಿಸಲಾಗುತ್ತಿದೆ ಎಂದು ತಿಳಿಸಿದರು.
ಕೆಲವೆಡೆ ಇಲಾಖೆಯ ಬಿಇಒಗಿಂತ ಕೆಳಹಂತದ ಸಿಬ್ಬಂದಿ ತಪ್ಪಿನಿಂದಾಗಿ ಎರಡೆರಡು ಆದೇಶ ಹೊರಬಿದ್ದಿದ್ದು ನಿಜ. ಇಲಾಖೆಯ ಸ್ಪಷ್ಟ ನಿರ್ದೇಶನವಿಲ್ಲದೆ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ. ಈಗ ಸ್ಪಷ್ಟ ನಿರ್ದೇಶನ ಬಂದಿದ್ದು, ಪ್ರತಿ ಶನಿವಾರ ಶಿಕ್ಷಕರಿಗೂ ರಜೆ ನೀಡಲಾಗುವುದು ಎಂದು ಅವರು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ