Kannada NewsKarnataka NewsLatest

10 ದಿನಗಳ ಮುಖಾ ಮುಖಿ ತರಬೇತಿ ಸ್ಥಗಿತಗೊಳಿಸಲು ಶಿಕ್ಷಕರ ಸಂಘ ಆಗ್ರಹ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  10 ದಿನಗಳ ಮುಖಾ ಮುಖಿ ತರಬೇತಿಯನ್ನು ಸ್ಥಗಿತಗೊಳಿಸುವಂತೆ  ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೆಳಗಾವಿ ಜಿಲ್ಲಾ ಘಟಕ ಒತ್ತಾಯಿಸಿದೆ.
ಈ ಕುರಿತು ಡಯೆಟ್  ಪ್ರಾಚಾರ್ಯರಿಗೆ ಸಂಘವು ಮನವಿ ಸಲ್ಲಿಸಿದೆ. ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಶಿಕ್ಷಕರಿಗೆ ರಾಜ್ಯಾದ್ಯಂತ ಹೋಬಳಿ ಮಟ್ಟದಲ್ಲಿ 10 ದಿನಗಳ ತರಬೇತಿ ನಡೆಸಲು ನಿರ್ಧರಿಸಿದೆ. ಆದರೆ ಕೊರೋನಾ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಇದು ಅಪಾಯಕ್ಕೆ ಆಹ್ವಾನ ನೀಡಿದಂತಾಗುತ್ತದೆ. ಇದರಿಂದಾಗಿ ಶಿಕ್ಷಕರಲ್ಲಿ ಆತಂಕ ಉಂಟಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಸಾಮಾಜಿಕ ಅಂತರ ಕಾಪಾಡಿಕೊಂಡು ಗುಂಪು ಚಟುವಟಿಕೆ ನಡೆಸುವುದಾಗಲಿ, ಇಡೀ ದಿನ ಮಾಸ್ಕ್ ಧರಿಸಿ ಕುಳಿತುಕೊಳ್ಳುವುದಾಗಲಿ ಸಾಧ್ಯವಿಲ್ಲದ ಮಾತಾಗಿದೆ. ಅಲ್ಲದೆ ಶಿಕ್ಷಕರು ಬಸ್ ಗಳಲ್ಲಿ ಸಂಚರಿಸಿ ತರಬೇತಿ ಸ್ಥಳ ತಲುಪಬೇಕಿದ್ದು, ಇದು ಕೂಡ ಕಷ್ಟಕರ. ಎಷ್ಟೋ ಕಡೆ ಬಸ್ ಸೌಲಭ್ಯವೇ ಇಲ್ಲವಾಗಿದೆ. ಎಷ್ಟೋ ಜಿಲ್ಲೆಗಳಲ್ಲಿ ಆನ್ ಲೈನ್ ತರಬೇತಿಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಇಲ್ಲೂ ಅದನ್ನೇ ಅನುಸರಿಸಬೇಕೇ ವಿನಃ ಈ ರೀತಿ ಮುಖಾ ಮುಖಿ ತರಬೇತಿಯನ್ನು ಶಿಕ್ಷಕರ ಸಂಘವು ವಿರೋಧಿಸುತ್ತದೆ ಎಂದು ತಿಳಿಸಲಾಗಿದೆ.
ತಕ್ಷಣ ಇಂತರ ತರಬೇತಿ ಆಯೋಜನೆ ನಿರ್ಧಾರವನ್ನು ಕೈಬಿಡಬೇಕು. ಇದರಿಂದ ಶಿಕ್ಷಕರು ಮತ್ತು ಅವರ ಕುಟುಂಬಕ್ಕೆ ಆಗಬಹುದಾದ ಅಪಾಯವನ್ನು ತಡೆಗಟ್ಟಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
  ಜಿಲ್ಲಾ ಅಧ್ಯಕ್ಷ ಜಯಕುಮಾರ ಹೆಬಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ. ಎಫ್.ಸಿದ್ದನಗೌಡರ, ಜಿಲ್ಲಾ ಖಜಾಂಚಿ ಆರ್.ವ್ಹಿ.ಗೋಣಿ, ನೌಕರರ ಸಂಘದ ಕಾರ್ಯದರ್ಶಿ ಸಿ.ಎಸ್.ಕೋಲಕಾರ, ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಆರ್.ವ್ಹಿ.ಹೈಬತ್ತಿ, ನಗರ ಸಂಘದ ಅಧ್ಯಕ್ಷ ಕೆ.ಎಸ್.ರಾಚಣ್ಣವರ, ನಗರ ಪ್ರಧಾನ ಕಾರ್ಯದರ್ಶಿ ಬಿ.ಬಿ.ಸೊಗಲಣ್ಣವರ, ಮೊದಲಾದವರು ಇದ್ದರು.
ಈ ಕುರಿತು ಬೆಂಗಳೂರು ಕಚೇರಿ ಸಂಪರ್ಕಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಡಯೆಟ್ ಪ್ರಾಚಾರ್ಯರು ಭರವಸೆ ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button