Kannada NewsKarnataka NewsLatest

ಲಿಂಗರಾಜ ಕಾಲೇಜಿನಲ್ಲಿ ಅಂತರಾಷ್ಟ್ರೀಯ ವೆಬಿನಾರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಸಂಜೀವಿನಿಯಾಗಿದ್ದು, ಅದನ್ನು ಪ್ರಾಥಮಿಕ ಹಂತದಲ್ಲಿಯೇ ಕಡ್ಡಾಯಗೊಳಿಸುವುದು ಇಂದಿನ ಅಗತ್ಯವಾಗಿದೆ ಎಂದು ಭಾರತದ ಬ್ಯಾಡ್ಮಿಂಟನ್ ಮುಖ್ಯ ತರಬೇತುದಾರ, ರಾಜೀವಗಾಂಧಿ ಖೇಲರತ್ನ ಪುರಸ್ಕೃತ ಪದ್ಮಭೂಷಣ ಪಿ. ಗೋಪಿಚಂದ ಹೇಳಿದರು.
ಅವರು ಕೆಎಲ್‌ಇ ಸಂಸ್ಥೆಯ ಲಿಂಗರಾಜ ಸ್ವಾಯತ್ತ ಮಹಾವಿದ್ಯಾಲಯದ ಮನಃಶಾಸ್ತ್ರ ಹಾಗೂ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗ ಸಹಯೋಗದಲ್ಲಿ ’ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಶಿಸ್ತು, ನವಮನ್ವಂತರದ ಯೋಗಕ್ಷೇಮಕ್ಕೆ ಅಗತ್ಯವಾಗಿದೆ’ ಎಂಬ ವಿಷಯ ಕುರಿತು ಶನಿವಾರ  ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ವೆಬಿನಾರ್‌ದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಇಂದು ವಿಶ್ವವೇ ಕೋವಿಡ್ ಬಾಹುಬಂಧನದಲ್ಲಿ ಸಿಲುಕಿ ನಲುಗಿದೆ. ಯಾರು ದೈಹಿಕವಾಗಿ ಸದೃಢರಾಗಿದ್ದಾರೆ ಅವರು ಸೋಂಕನ್ನು ಎದುರಿಸುವಲ್ಲಿ ಸಬಲರಾಗುತ್ತಾರೆ, ಹಾಗಾಗಿ ಮಕ್ಕಳಲ್ಲಿ ಪ್ರಾಥಮಿಕ ಹಂತದಲ್ಲಿಯೇ ಕ್ರೀಡೆ ಉತ್ತೇಜಿಸುವ ನಿಟ್ಟಿನಲ್ಲಿ ಗಮನಹರಿಸುವುದು ಯೋಗ್ಯ. ದೇಶದ ಪ್ರತಿಯೊಂದು ಶಾಲೆಗಳಲ್ಲಿಯೂ ದೈಹಿಕ ಶಿಕ್ಷಕರನ್ನು ನೇಮಿಸುವ ಮೂಲಕ ಮಕ್ಕಳ ಆರೋಗ್ಯವನ್ನು ಸದೃಢಗೊಳಿಸಲು ಸಾಧ್ಯವಿದೆ. ಇಂದು ನಾವು ಅಂತರಾಷ್ಟ್ರೀಯ ಮಟ್ಟದಲ್ಲಿ ಎಷ್ಟು ಚಿನ್ನದ ಪದಕಗಳನ್ನು ಪಡೆದೆವು ಎಂಬುದು ಮುಖ್ಯವಲ್ಲ, ನಮ್ಮ ದೇಶದ ಯುವಶಕ್ತಿಯನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಎಷ್ಟು ಆರೋಗ್ಯಪೂರ್ಣಗೊಳಿಸಿದ್ದೇವೆ ಎಂಬುದು ತಾರ್ತಿಕ ಸತ್ಯ. ಭವಿಷ್ಯದಲ್ಲಿ ದೈಹಿಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವಲ್ಲಿ ದೇಶ ಹೆಜ್ಜೆ ಇಡಬೇಕು. ನಾವು ಗೆಲ್ಲುವುದು ಮುಖ್ಯವಲ್ಲ, ಇತರರ ಗೆಲುವಿಗೆ ಶ್ರಮಿಸುವುದನ್ನು ಕಲಿಯಬೇಕು. ಇತರರಿಗೂ ನಾವು ಮಾದರಿಯಾಗಿರಬೇಕೆಂದು ಹೇಳಿದರು.
ವೆಬಿನಾರ್‌ನ್ನು ಉದ್ಘಾಟಿಸಿ ಮಾತನಾಡಿದ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಇಂದು ವಿಶ್ವವನ್ನೇ ತಲ್ಲಣಗೊಳಿಸಿರುವ ಕೋವಿಡ್-೧೯ ನಮ್ಮ ಬದುಕಿನ ಕ್ರಮವನ್ನೇ ಬದಲಾಯಿಸಿದೆ. ಇದರಿಂದ ಹೊರಗೆ ಬರುವುದು ಹೇಗೆ ಹಾಗೂ ಬದಲಾಗುವುದು ಹೇಗೆ ಎಂಬ ಯಕ್ಷಪ್ರಶ್ನೆ ಮೂಡುತ್ತಿರುವ ಸಂದರ್ಭದಲ್ಲಿ ನಮ್ಮ ದೈಹಿಕ ಮಾನಸಿಕ ಹಾಗೂ ಆಧ್ಯಾತ್ಮಿಕ ಶಕ್ತಿಗಳ ಮೂಲಕ ಅದನ್ನು ಸಮರ್ಥವಾಗಿ ನಿಯಂತ್ರಿಸಲು ಸಾಧ್ಯವೆಂಬುದು ನನ್ನ ಮನದಾಳದ ನುಡಿ ಎಂದರು.

ನಮ್ಮ ಜೀವನ ಕ್ರಮದಲ್ಲಿ ಬದಲಾವಣೆಯಾಗಲೇಬೇಕು. ನಿಯಮಿತವಾದ ವ್ಯಾಯಾಮ ಹಾಗೂ ಯೋಗಗಳು ನಮ್ಮಲ್ಲಿ ರೋಗನಿರೋಧಕಶಕ್ತಿಯನ್ನು ಹೆಚ್ಚಿಸುವ ಮೂಲಕ ನಮ್ಮನ್ನು ಮಾನಸಿಕವಾಗಿಯೂ ಸದೃಢಗೊಳಿಸುವದರಲ್ಲಿ ಸಂದೇಹವಿಲ್ಲ. ನಮ್ಮ ಸಾಂಪ್ರದಾಯಿಕ ಆಯುರ್ವೇದ ಪದ್ಧತಿಯು ನಮ್ಮ ಉತ್ತಮವಾದ ಆರೋಗ್ಯಕ್ಕೆ ದಾರಿದೀಪವಾಗಿದೆ. ನಮ್ಮ ಜೀವನಕ್ಕೆ ಕೋವಿಡ್ ಒಡ್ಡಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಭರವಸೆಯ ಹೆಜ್ಜೆ ನಮ್ಮದಾಗಬೇಕಾಗಿದೆ ಎಂದು ಅವರು ಹೇಳಿದರು.

ಕೋವಿಡ್ ನಂತರವೂ ನಮ್ಮ ಜೀವನ ಶೈಲಿಯಲ್ಲಿ ಇನ್ನೂ ಹೆಚ್ಚಿನ ಮಾರ್ಪಾಡುಗಳು ಆಗುವುದರಲ್ಲಿ ಸಂದೇಹವಿಲ್ಲ. ಇಂದು ಇಡೀ ಜಗತ್ತು ಈ ಸೋಂಕಿಗೆ ಲಸಿಕೆಯನ್ನು ಕಂಡುಹಿಡಿಯಲು ಶತಾಯಗತಾಯ ಪ್ರಯತ್ನಿಸುತ್ತಿದೆ. ಸಂಶೋಧಕರು ಹಗಲಿರುಳು ಹೋರಾಡುತ್ತಿದ್ದಾರೆ. ಅದಕ್ಕೆ ಇನ್ನೂ ಹೆಚ್ಚಿನ ಸಮಯಾವಕಾಶಬೇಕು. ಅದು ದೊರೆಯುವವರೆಗೆ ನಾವೆಲ್ಲರೂ ಜಾಗೃತೆಯಿಂದ ಇರಬೇಕು. ಅದರೊಂದಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ, ಮುಖಗವಸುಗಳನ್ನು ಧರಿಸುವ ಅಗತ್ಯತೆ ಇದೆ. ಇದು ಎಲ್ಲರ ಜವಾಬ್ದಾರಿಯೂ ಹೌದು ಎಂದೂ ಹೇಳಿದರು.

ಎಲ್ಲರೂ ಸಾಂಘಿಕವಾಗಿ ಹೋರಾಡುವ ಮನೋಭಾವವನ್ನು ಹೊಂದಿದಾಗ ಮಾತ್ರ ಈ ಸೋಂಕನ್ನು ನಿರ್ಮೂಲನೆಗೊಳಿಸಲು ಸಾಧ್ಯ. ಇಂದು ಆಯೋಜಿಸಿರುವ ವೆಬಿನಾರ್ ನಮ್ಮ ದೈಹಿಕ ಹಾಗೂ ಮಾನಸಿಕ ಜೀವನಕ್ಕೆ ಬಹುಮೌಲಿಕ ಸಂದೇಶವನ್ನು ಕಲ್ಪಿಸಿದೆ ಎಂದು ಹೇಳಿದರು.
ಈ ವೆಬಿನಾರ್‌ದಲ್ಲಿ ಐಎಫ್‌ಪಿಇಎಸ್‌ಎಸ್‌ಎ ಅಧ್ಯಕ್ಷ ಪ್ರೊ.ರಾಜೇಶ ಕುಮಾರ್, ಜನರಲ್ ಸೆಕ್ರೆಟರಿ ಪ್ರೊ.ಎಲ್.ಬಿ.ಲಕ್ಷ್ಮೀಕಾಂತ ರಾಥೋಡ ಪಾಲ್ಗೊಳ್ಳಲಿದ್ದು, ಡಾ.ಅಮಿತ್ ಮಲೀಕ್, ಮಲೇಶಿಯಾದ ಡಾ.ಯುಎಂ ಬೂನ್ ಹೂಯಿ, ಲಂಡನ್‌ದ ಡಾ.ಮೀನಾ ಬೋಬಡೆ, ಸೌದಿ ಅರೆಬಿಯಾದ ಸೈಯದ್ ಇಬ್ರಾಹಿಂ, ಡಾ.ಕೌಖಬ್ ಅಝೀಮ್, ಫಿಲಿಫೆನ್ಸ್ ಪ್ರೊ.ರೂಸಿತಾ ಹೆರನಾನಿ ಸಂಪನ್ಮೂಲವ್ಯಕ್ತಿಗಳಾಗಿ ಮಾತನಾಡಿದರು.
ವಿಧಾನ ಪರಿಷತ್ ಆಡಳಿತಪಕ್ಷದ ಮುಖ್ಯಸಚೇತಕರಾದ ಮಹಾಂತೇಶ ಕವಟಗಿಮಠ, ಪ್ರಾಚಾರ್ಯರಾದ ಡಾ.ಆರ್.ಎಂ.ಪಾಟೀಲ, ಕೆಎಲ್‌ಇ ಆಜೀವ ಸದಸ್ಯರಾದ ಡಾ.ಪ್ರಕಾಶ ಕಡಕೋಳ, ಸಂಯೋಜಕರಾದ ಪ್ರೊ.ಎಂ.ಆರ್.ಬನಹಟ್ಟಿ, ದೈಹಿಕ ನಿರ್ದೇಶಕ ಡಾ. ಸಿ.ರಾಮರಾವ್,  ಗಿರಿಜಾ ಹಿರೇಮಠ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಸಾವಿರಕ್ಕೂ ಹೆಚ್ಚು ಸಂಶೋಧಕರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ವೆಬಿನಾರ್‌ಲ್ಲಿ ಪಾಲ್ಗೊಂಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button