ಪ್ರಗತಿವಾಹಿನಿ ಸುದ್ದಿ; ಬಳ್ಳಾರಿ: ರಾಜ್ಯದಲ್ಲಿ ಕೊರೊನಾ ಸೋಂಕು ಶರವೇಗದಲ್ಲಿ ಹೆಚ್ಚುತ್ತಿದ್ದು, ಈಗಾಗಲೇ ಸಚಿವ ಸಿ.ಟಿ ರವಿಯವರಿಗೆ ಕೊರೊನಾ ಸೋಂಕು ಬಂದಿತ್ತು. ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾಗಿರುವುದಾಗಿ ನಿನ್ನೆಯಷ್ಟೇ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಇದೀಗ ರಾಜ್ಯದ ಇನ್ನೋರ್ವ ಸಚಿವರಿಗೆ ಕೊರೊನಾ ಸೋಂಕು ಹರಡಿರುವುದು ದೃಢಪಟ್ಟಿದೆ. ಅರಣ್ಯ ಸಚಿವ ಹಾಗೂ ಬಳ್ಳಾರಿ ಉಸ್ತುವಾರಿ ಸಚಿವ ಆನಂದ್ ಸಿಂಗ್‍ಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ.
ಸಚಿವ ಆನಂದ್ ಸಿಂಗ್ ಶುಕ್ರವಾರ ಸ್ವಯಂ ಪ್ರೇರಿತರಾಗಿ ಕೋವಿಡ್ ಟೆಸ್ಟ್ ಮಾಡಿಸಿದ್ದರು. ಅದರ ವರದಿ ಇದೀಗ ಬಂದಿದ್ದು, ವರದಿಯಲ್ಲಿ ಆನಂದ್ ಸಿಂಗ್ ಅವರಿಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ. ಯಾವುದೇ ರೋಗ ಲಕ್ಷಣಗಳಿಲ್ಲದೇ ಆನಂದ್ ಸಿಂಗ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಎ ಸಿಂಪ್ಟಮ್ಯಾಟಿಕ್ ಕೇಸ್ ಆಗಿರುವುದರಿಂದ ಆನಂದ್ ಸಿಂಗ್ ಅವರಿಗೆ ಹೊಸಪೇಟೆ ನಿವಾಸದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಆನಂದ್ ಸಿಂಗ್ ಪ್ರಸ್ತುತ ಆರೋಗ್ಯವಾಗಿದ್ದಾರೆ, ಪಾಸಿಟಿವ್ ಬಂದಿರುವುದು ನಿಜ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಇತ್ತೀಚೆಗೆ ಆನಂದ್ ಸಿಂಗ್ ಕೊರೊನಾ ಸೋಂಕಿತರ ವಾರ್ಡ್ ಒಳಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಲ್ಲದೇ ಅವರ ಕಾರು ಚಾಲಕನಿಗೂ ಕೊರೊನಾ ದೃಢವಾಗಿತ್ತು. ಇದರಿಂದ ಆನಂದ್ ಸಿಂಗ್‍ಗೂ ಕೊರೊನಾ ಸೋಂಕು ಹರಡಿದೆ ಎಂದು ಹೇಳಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ