ಪೂರ್ಣಿಮಾ ಹೆಗಡೆ
ಎಲ್ಲೋ ದೂರದ ಚೀನಾ ಎಂಬ ದೇಶದಲ್ಲಿ ಮನುಷ್ಯ ನಿರ್ಮಿತ ವೈರಾಣುವೊಂದು ಮನುಷ್ಯನ ಜೀವವನ್ನೇ ಹಿಂಡಿ ಪೂರ್ತಿಯಾಗಿ ಹೀರಿಬಿಡುತ್ತದಂತೆ ! ಎಂಬ ಸುದ್ದಿ, ಪತ್ರಿಕೆಗಳಲ್ಲಿ ಮತ್ತು ವಾಹಿನಿಗಳಲ್ಲಿ ಆಗಾಗ ಕೇಳುತ್ತಾ ಕೇಳುತ್ತಾ ಅದು ಹೆಚ್ಚಾಗಿ ಕೇಳಿಬರತೊಡಗಿತು. ಬರಬರುತ್ತ ಅದೇ ಆಯಿತು, ಅದು ಮಾತ್ರ ಕೇಳಿಬರತೊಡಗಿತು. ಈ ರೀತಿ ಎಲ್ಲೋ ಹುಟ್ಟಿದ ವೈರಸ್ ನೋಡ ನೋಡುತ್ತ ತನ್ನ ಕಬಂದ ಬಾಹುಗಳನ್ನು ಇಡೀ ವಿಶ್ವದತ್ತ ಚಾಚಿಯೇ ಬಿಟ್ಟಿತು. ಕೆಲವೇ ದಿನಗಳಲ್ಲಿ ಇಡೀ ಪ್ರಪಂಚವೇ ಈ ಕೋವಿಡ್ 19 ಎಂಬ ವಿಷಜಂತುವಿನ ತೆಕ್ಕೆಗೆ ಸಿಲುಕಿ ಉಸಿರಾಡಿಸಲು ಹೆಣಗಾಡುವಂತಾಯಿತು. ಪೂಜೆ, ಪ್ರಾರ್ಥನೆ, ಗಂಟೆ, ಶಂಕಿತ, ಸೋಂಕಿತ, ಗುಣಮುಖ, ಪ್ರೈಮರಿ ಕಾಂಟಾಕ್ಟ, ಸೆಕೆಂಡರಿ ಕಾಂಟಾಕ್ಟ, ಕೋವಿಡ್ ವಾರಿಯರ್ಸ, ಲಾಕ್ಡೌನ್, ಸೀಲ್ಡೌನ್, ಕ್ವಾರಂಟೈನ್ ಹೀಗೆ ಕೆಲವು ಶಬ್ಧಗಳಿಗೆ ಪ್ರಾಯೋಗಿಕವಾಗಿ ಅರ್ಥಬರತೊಡಗಿತು. ದಿನ ಬೆಳಗಾದರೆ ಸುದ್ದಿವಾಹಿನಿಗಳು ಸ್ಪರ್ಧಾತ್ಮಕವಾಗಿ ವೀಕ್ಷಕರನ್ನು ಹೆದರಿಸುವ ಕಾರ್ಯದಲ್ಲಿ ತೊಡಗಿಕೊಂಡರೆ, ಜನ ಕೂಡ ಅದನ್ನೇ ಮತ್ತು ಅದನ್ನು ಮಾತ್ರ ನಂಬುವಂತಾದರು. ಶಾಲೆ ಕಾಲೇಜುಗಳಿಗೆ ಅನಿರ್ಧಿಷ್ಟ ಕಾಲದವರೆಗೆ ರಜೆ ಘೋಷಣೆಯಾಯಿತು. ನಡೆದ, ಅರ್ಧ ನಡೆದ, ಇನ್ನೂ ಶುರುವಾಗದ ಪರೀಕ್ಷೆಗಳ ಗೊಂದಲದಲ್ಲಿ ಮಂತ್ರಿಗಳು, ಅಧಿಕಾರಿಗಳು, ಶಿಕ್ಷಕರು ಮತ್ತು ಪಾಲಕರು ತಲೆಕೆಡಿಸಿಕೊಂಡು ಪರದಾಡುತ್ತಿದ್ದರೆ. ಮಕ್ಕಳು ಮಾತ್ರ ತಾವು ಇನ್ನೂ ಶಿಕ್ಷಣ ಕಲಿಯಲು ಪ್ರಾರಂಭವೇ ಮಾಡದಿರುವವರಂತೆ ಮುಗ್ಧತೆಯ ಅಮಲಿನಲ್ಲಿ ತೇಲಾಡಿ ಕೊಂಡು ಆಟವಾಡಿಕೊಂಡಿರ ತೊಡಗಿದರು.
ಇವೆಲ್ಲವದರ ಪರಿಣಾಮ ಪ್ರಪಂಚದ ಆರ್ಥಿಕ ಪರಿಸ್ಥಿತಿಯ ಮೇಲೆ ಯಾವ ರೀತಿಯ ಪರಿಣಾಮವಾಗಿದೆ ಎನ್ನುವುದು ಆರ್ಥಿಕ ತಜ್ಞರ ಊಹೆಗೂ ಕೂಡ ಮೀರಿದಂತಹ ಸನ್ನಿವೇಶ ಸ್ರಷ್ಟಿಯಾಯಿತು. ಹಸಿದು ಮಲಗಿದವರ ಗೋಳು ಮುಗಿಲು ಮುಟ್ಟುತ್ತಿದ್ದರೂ ತಮ್ಮದೇ ಶೈಲಿಯಲ್ಲಿ ತಮ್ಮನ್ನು ತಾವು ಮೆರವಣಿಗೆ ಮಾಡಿಕೊಳ್ಳುವ ಪ್ರವೃತ್ತಿ ಸ್ವಲ್ಪವೂ ಕಡಿಮೆಯಾಗದಂತಿದ್ದಾಗ ಈ ಮನುಷ್ಯನಿಗೆ ಕೆಟ್ಟಮೇಲಲ್ಲ ಸತ್ತಮೇಲೂ ಬುದ್ದಿ ಬರುವುದಿಲ್ಲ ಎನ್ನುವುದು ಸಾಬೀತಾಗಿತ್ತು.
ಸದ್ಯದಲ್ಲಂತೂ ಕರೋನಾ ಬೆನ್ನುಬಿಡದೆ ಎಲ್ಲರನ್ನೂ ಕಾಡುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಜೀವನ ನಡೆಸುವಲ್ಲಿ ಮನುಷ್ಯ ಹೆಣಗಾಡುತ್ತಿದ್ದಾನೆ. ಇಷ್ಟು ವರ್ಷಗಳ ಕಾಲ ಏಡ್ಸ ಒಂದು ಸಾಂಕ್ರಾಮಿಕ ರೋಗವಲ್ಲ ರೋಗಿಯ ಜೊತೆ ಮಾಮೂಲಾಗಿ ವ್ಯವಹರಿಸಿ ಎನ್ನುವ ಪಾಠವನ್ನು ಕಲಿಯದ ಮನುಷ್ಯ, ಈ ಕೋವಿಡ್- 19 ಒಂದು ಸಾಂಕ್ರಾಮಿಕ ರೋಗ, ಸಾಮಾಜಿಕ ಅಂತರವನ್ನುಇಟ್ಟುಕೊಂಡು ಬದುಕಿ ಎನ್ನುವ ಪಾಠ ಯಾವಾಗ ಕಲಿಯುತ್ತಾನೋ ತಿಳಿಯದು!!. ಮುಂದಿನ ಸ್ಥಿತಿಗತಿ ಯಾರ ಊಹೆಗೂ ನಿಲುಕಲಾರದ್ದಾಗಿದೆ. ಆತ್ಮವಿಶ್ವಾಸ ಕುಂದುತ್ತಿದೆ. ಮನುಷ್ಯ ಮನುಷ್ಯರ ನಡುವಿನ ಸಂಬಂಧದ ಬುನಾದಿ ಸಡಿಲಗೊಳ್ಳುತ್ತಿದೆ. ಸಂಘಜೀವಿಯಾದ ಮನುಷ್ಯ ಒಂಟಿಯಾಗಿ ಬದುಕುವ ಅನಿವಾರ್ಯತೆಗೆ ಹೊಂದಿಕೊಳ್ಳುತ್ತಿದ್ದಾನೆ. ಆತ್ಮ ನಿರ್ಭರ ಬದುಕು ಸಾಗಿಸಲು ಸಜ್ಜಾಗುತ್ತಿದ್ದಾನೆ. ಯಾವುದೋ ಅನಿವಾರ್ಯತೆಗೋ, ಅಸಹಾಯಕತೆಗೋ, ಮಹತ್ವಾಕಾಂಕ್ಷೆಗೋ ಊರುತೊರೆದು ಪಟ್ಟಣ ಸೇರಿದವರು ಮತ್ತೆ ತಿರುಗಿ ಊರು ಸೇರುತ್ತಿದ್ದಾರೆ.
ಆದರೂ ಜೀವನದಲ್ಲಿ ಆಶಾವಾದ ಎನ್ನುವದೊಂದಿದೆಯಲ್ಲ!!! ಬದುಕಲು ಪ್ರೇರೇಪಣೆ. ನಾಳಿನ ಕನಸನ್ನು ಹೊತ್ತಮನ ಅಷ್ಟು ಸುಲಭದಲ್ಲಿ ಸೋಲೊಪ್ಪಿ ಕೊಳ್ಳಲಾರದು. ಬದುಕುಳಿಯಲು ಬೇರೆದಾರಿ ಕಾಣದೆ ಮತ್ತೆ ಊರು ಸೇರಿದವರು ತಮ್ಮ ಕುಲ ಕಸುಬಿನತ್ತ ಒಲವು ತೋರಿಸಲಿ. ಅಲ್ಲಿ ಆತ್ಮ ನಿರ್ಭರತೆಯನ್ನ ಸಾಧಿಸಲಿ. ಅದರಲ್ಲಿಯೇ ಆಧುನಿಕತೆಯ ಸೊಗಡನ್ನು ಚೆಲ್ಲಿ ಲೋಕಕ್ಕೆ ಬೆಳಕು ನೀಡಲಿ. ವಿದ್ಯಾವಂತರಾಗಿ ದೊಡ್ಡ ದೊಡ್ಹ ಶಹರಗಳಲ್ಲಿ ವ್ಯಾಪಾರ ವ್ಯವಹಾರ ಮಾಡಿ ಅನುಭವ ಪಡೆದವರು ಮೂಲೆಗುಂಪಾಗಿರುವ ಎಷ್ಟೋ ಜೀವನಾಧಾರ ಕಸುಬುಗಳಿಗೆ ನೀರೆರೆದು ಜೀವ ತುಂಬಲಿ. ಅಲ್ಲಿಯೇ ಜೀವನ ಮಾಡುತ್ತಿರುವವರ ಹಳೆಯ ಅನುಭವ ಮತ್ತು ಶಹರ ಪಟ್ಟಣಗಳಿಂದ ಹೋದವರ ಹೊಸ ರೀತಿಯ ತಾಂತ್ರಿಕ ಅನುಭವಗಳು ಒಂದಕ್ಕೊಂದು ಜೋಡಿ ಎತ್ತಿನಂತೆ ನೊಗವೆಳೆದುಕೊಂಡು ಹೋದರೆ, ಹಳ್ಳಿಯಲ್ಲಿರುವವರನ್ನು ಕೀಳಾಗಿ ನಡೆಸಿಕೊಳ್ಳದೇ ಅವರಲ್ಲಿ ತಾವೂ ಒಬ್ಬರಾದರೆ, ಹಳ್ಳಿಗಳಲ್ಲಿ ಉಳಿದವರೂ ಇವರನ್ನು ಸೌಹಾರ್ದಯುತವಾಗಿ ನಡೆದುಕೊಂಡು ಮುಂದಿನ ಭವಿಷ್ಯದ ಯೋಜನೆಯನ್ನು ರೂಪಿಸಿಕೊಂಡರೆ ನಿಜವಾಗಿಯೂ ಆತ್ಮನಿರ್ಭರ ಭಾರತ ಪ್ರಕಾಶಿಸುವದರಲ್ಲಿ ಯಾವದೇ ಸಂಶಯವಿಲ್ಲ.
ಸರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ