ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಾಗಮಂಡಲ ಖ್ಯಾತಿಯ ನಟಿ ವಿಜಯಲಕ್ಷ್ಮಿ ಫೇಸ್ ಬುಕ್ ಲೈವ್ ನಲ್ಲಿ ವಿಡಿಯೋ ಒಂದನ್ನು ಅಪ್ ಲೋಡ್ ಮಾಡಿ ಆತ್ಮಹತ್ಯೆಗೆ ಮುಂದಾಗಿದ್ದಾಗಿ ತಿಳಿಸಿದ್ದಾರೆ. ಅಲ್ಲದೇ ನನ್ನ ಸಾವಿಗೆ ತಮಿಳು ನಟ ರಾಜಕಾರಣಿ ಸೀಮನ್ ಅವರೇ ಕಾರಣ. ನಾನು ಈಗಾಗಲೇ ಬಿಪಿ ಮಾತ್ರೆಗಳನ್ನು ತೆಗೆದುಕೊಂಡಿದ್ದೇನೆ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ವಿಡಿಯೋದಲ್ಲಿ ಮಾತನಾಡಿರುವ ವಿಜಯಲಕ್ಷ್ಮಿ ಕರ್ನಾಟಕದ ನನ್ನ ಅಭಿಮಾನಿಗಳಿಗೆ ಹೇಳುವುದೇನೆಂದರೆ, ನಾನು ಬಹಳ ಕಷ್ಟಪಟ್ಟಿದ್ದೇನೆ. ತಮಿಳಿನಲ್ಲಿ ಸೀಮನ್ ಅನ್ನುವ ಓರ್ವ ನಟ ನನಗೆ ಬಹಳ ಹಿಂಸೆ ನೀಡಿದ್ದಾರೆ. ನಾನು ಕರ್ನಾಟಕದಲ್ಲಿ ಹುಟ್ಟಿದ್ದೇನೆ ಎಂಬ ಒಂದೇ ಒಂದು ಕಾರಣಕ್ಕೆ ತುಂಬಾ ಕಾಟ ಕೊಟ್ಟಿದ್ದಾರೆ. ನಾನು ವೇಶ್ಯಾವೃತ್ತಿ ಮಾಡುತ್ತಿದ್ದೇನೆ ಎಂದೆಲ್ಲ ನನ್ನ ಬಗ್ಗೆ ಅಪಪ್ರಚಾರ ಮಾಡಿದ್ದಾರೆ. ಇವರು ಬದುಕುವುದಕ್ಕೆ ಬಿಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ನಾನೀಗ ಒಂದಷ್ಟು ಬಿಪಿ ಮಾತ್ರೆಗಳನ್ನು ನುಂಗಿದ್ದೇನೆ. ಇನ್ನು ಸ್ವಲ್ಪ ಹೊತ್ತಿಗೆ ನನ್ನ ಬಿಪಿ ಕಮ್ಮಿ ಆಗಲಿದೆ. ನನ್ನ ಸಾವಿಗೆ ಕಾರಣರಾದ ಈ ಸೀಮನ್ ಮತ್ತು ಹರಿ ನಾಡರ್ ಅವರನ್ನು ಯಾವುದೇ ಕಾರಣಕ್ಕೂ ಬಿಡಲೇಬೇಡಿ. ‘ನಾಮ್ ತಮಿಳರ್ ಕಚ್ಚಿ’ ಎಂಬ ಪಕ್ಷವನ್ನು ಸೀಮನ್ ಕಟ್ಟಿದ್ದಾನೆ. ಕನ್ನಡಿಗರಿಗೆ ಆತ ಬಹಳಷ್ಟು ಕಾಟ ಕೊಟ್ಟಿದ್ದಾನೆ. ನಾನು ಹುಟ್ಟಿದ್ದು ಕರ್ನಾಟಕದಲ್ಲಿ. ನನ್ನ ಮಾತೃಭಾಷೆ ತಮಿಳು ಅನ್ನೋದು ಎಲ್ಲರಿಗೂ ಗೊತ್ತಿದೆ. ನಾನು ಕರ್ನಾಟಕದಲ್ಲಿ ಹುಟ್ಟಿದ್ದೇನೆ ಎಂಬ ಒಂದೇ ಕಾರಣಕ್ಕೆ ನನಗೆ ತುಂಬಾ ತೊಂದರೆ ನೀಡಿದ್ದಾನೆ’ ಎಂದಿದ್ದಾರೆ ವಿಜಯಲಕ್ಷ್ಮಿ.
ಇದು ನನ್ನ ಕಡೆಯ ವಿಡಿಯೋ. ನಾನು ಇನ್ನೂ ನೆನಪಾಗಿ ಉಳಿಯಲಿದ್ದೇನೆ. ಸೀಮನ್ ತಪ್ಪಿಸಿಕೊಳ್ಳಲು ಯಾರೂ ಬಿಡಬೇಡಿ. ನಾನು ತುಂಬ ಸಮಯ ಬದುಕಬೇಕು ಎಂದು ಆಸೆ ಪಟ್ಟೆ, ಅದು ಸಾಧ್ಯವಾಗಲಿಲ್ಲ. ಸೀಮನ್ ಮತ್ತು ಹರಿ ನಾಡರ್ ನನಗೆ ತುಂಬಾ ತೊಂದರೆ ನೀಡಿದ್ದಾರೆ. ನಿಮಗೆ ಏನಾದರೂ ತೊಂದರೆ ನೀಡಿದ್ದರೆ ನನ್ನನ್ನು ಕ್ಷಮಿಸಿ. ನನ್ನ ಸಾವು ಎಲ್ಲರ ಕಣ್ಣು ತೆರೆಸಲಿ. ನಾನು ಯಾರಿಗೂ ಗುಲಾಮಳಾಗಿ ಇರುವುದಿಲ್ಲ ಎಂದು ಅವರು ವಿಡಿಯೋದ ಕೊನೆಯಲ್ಲಿ ಹೇಳಿದ್ದಾರೆ.
ಸದ್ಯ ಅಸ್ವಸ್ಥರಾಗಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ