ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ
ಶಾಲಾ ಕಟ್ಟಡ, ಗುಣಮಟ್ಟದ ರಸ್ತೆ ಹಾಗೂ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಮತಕ್ಷೇತ್ರದಲ್ಲಿ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆಂದು ಶಾಸಕ ಉಮೇಶ ಕತ್ತಿ ಹೇಳಿದರು.
ತಾಲೂಕಿನ ಯರಗಟ್ಟಿ, ಯರನಾಳ, ಇಂಗಳಿ, ಲೇಬರಕ್ಯಾಂಪ್ ಗ್ರಾಮಗಳ ಲೋಕೋಪಯೋಗಿ ಇಲಾಖೆಯಡಿ ವಿವಿಧ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕ್ಷೇತ್ರ ವ್ಯಾಪ್ತಿಯ ಕೆಟ್ಟು ಹೋದ ರಸ್ತೆಗಳನ್ನು ಮರು ನಿರ್ಮಿಸಲಾಗುತ್ತಿದೆ. ರಸ್ತೆ ನಿರ್ಮಾಣಕ್ಕೆ ಮುನ್ನ ರೈತರು ತಮ್ಮ ಹೊಲಗದ್ದೆಗಳಿಗೆ ಸಂಪರ್ಕ ಸಾಧಿಸುವ ನೀರಿನ ಪೈಪ್ಲೈನ್ ಅಳವಡಿಸಬೇಕು. ಜತೆಗೆ ರಸ್ತೆ ನಿರ್ಮಾಣ ವ್ಯಾಪ್ತಿಯ ಗ್ರಾಪಂನವರು ಕುಡಿಯುವ ನೀರಿನ ಪೈಪ್ಲೈನ್ ಅಳವಡಿಸಬೇಕು. ರಸ್ತೆ ನಿರ್ಮಾಣದ ಬಳಿಕ ರಸ್ತೆಗಳನ್ನು ಅಗೆಯಬಾರದು. ವಾಹನ ಹಾಗೂ ಜನ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಹಾಗೂ ಕ್ಷೇತ್ರದ ಎಲ್ಲ ಸಮುದಾಯವರಿಗೆ ಅನೂಕೂಲವಾಗುವ ನಿಟ್ಟಿನಲ್ಲಿ ಗುಣಮಟ್ಟದ ರಸ್ತೆಗಳ ಸುಧಾರಣೆ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಯರಗಟ್ಟಿ ಗ್ರಾಮದಲ್ಲಿ ೧೬ ಲಕ್ಷ ರೂ ವೆಚ್ಚದಲ್ಲಿ ಸರಕಾರಿ ಪ್ರೌಢಶಾಲೆ ಕಟ್ಟಡ , ಯರನಾಳ ಗ್ರಾಮದಲ್ಲಿ ಎಸ್ ಎಸ್ ಸಿಪಿಯಡಿ ೩೦ ಲಕ್ಷ ರೂ. ಇಂಗಳಿ ಕಾಲನಿಯಲ್ಲಿ ೨೧ ಲಕ್ಷ ರೂ ವೆಚ್ಚದಲ್ಲಿ ರಸ್ತೆ ಸುಧಾರಣೆ ಗೆ ಚಾಲನೆ ನೀಡಿದರು.
ಮುಖಂಡರಾದ ಕೆಂಪಣ್ಣ ದೇಸಾಯಿ, ಪರಗೌಡ ಪಾಟೀಲ, ಸತ್ಯಪ್ಪಾ ನಾಯಿಕ, ಕರಣಾಕರ ಶೆಟ್ಟಿ, ಬಾಬು ಮಗದುಮ್ಮ, ಬಸವರಾಜ ಮರಡಿ, ಅಶೋಕ ಪಟ್ಟಣಶೆಟ್ಟಿ, ಗುರು ಕುಲಕರ್ಣಿ, ಮುಕುಂದ ಮಠದ, ರಾಜು ಮುನ್ನೋಳಿ, ರಾಜಶೇಖರ ಹಿರೇಮಠ, ಸಹಾಯಕ ಅಭಿಯಂತರರು, ತಾ.ಪಂ ಹಾಗೂ ಜಿಪಂ ಸದಸ್ಯರು, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ