ಪ್ರಗತಿವಾಹಿನಿ ಸುದ್ದಿ; ಹಾವೇರಿ: ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ದನಗಳನ್ನು ಕರೆತರಲು ಹೋಗಿ ಯುವಕನೊಬ್ಬ ನೀರಿನ ರಭಸಕ್ಕೆ ಕೊಚ್ಚಿ ಹೋದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಇನಾಂಲಕಮಾಪುರ ಗ್ರಾಮದಲ್ಲಿ ನಡೆದಿದೆ.
ನೀರು ಪಾಲಾದ ಯುವಕನನ್ನ ಚಂದ್ರು ದಳವಾಯಿ(25) ಎಂದು ಗುರುತಿಸಲಾಗಿದೆ. ಭಾರೀ ಮಳೆಯಿಂದಾಗಿ ಜಿಲ್ಲೆಯಲ್ಲಿ ವರದಾ ನದಿ ತುಂಬಿ ಹರಿಯುತ್ತಿದ್ದು, ಮೂರು ದಿನಗಳಿಂದ ಸ್ಥಳೀಯ ನಿವಾಸಿಗಳ ದನಕರುಗಳು ನದಿಯ ಮಧ್ಯೆ ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದವು. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದರಿಂದ ದಡಕ್ಕೆ ಬರಲಾಗದ ಸ್ಥಿತಿಯಲ್ಲಿದ್ದರು. ಈ ದನಗಳಲ್ಲಿ ಚಂದ್ರು ದಳವಾಯಿ ಅವರ ಮೂರು ಎಮ್ಮೆಗಳು ಇದ್ದವು.
ನದಿಯಲ್ಲಿ ಸಿಲುಕಿರುವ ಎಮ್ಮೆಗಳನ್ನ ಕರೆದುಕೊಂಡು ಬರುವುದಾಗಿ ಹೇಳಿ ವರದಾ ನದಿಗೆ ಹಾರಿದ ಚಂದ್ರು ದಳವಾಯಿ ಸ್ವಲ್ಪ ದೂರದವರೆಗೆ ನೀರಿನಲ್ಲಿ ಈಜಿಕೊಂಡು ಹೋಗಿದ್ದಾರೆ. ನೋಡ ನೋಡುತ್ತಿದ್ದಂತೆಯೇ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲಿಸರು ಸ್ಥಳೀಯರ ನೆರವಿನೊಂದಿಗೆ ಯುವಕನಿಗಾಗಿ ಹುಡುಕಾಟ ನಡೆಸಿದ್ದಾರೆ. ಆಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ