ಬಹುವರ್ಷಗಳ ವಸತಿ ಯೋಜನೆಯ ಕನಸು ಪೂರ್ಣಗೊಳ್ಳಲಿದೆ
ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ’ಸನ್ ೨೦೦೦ರಿಂದ ವಸತಿರಹಿತರ ಕನಸು ನನಸಾಗುವ ದಿನ ಬಂದಿದೆ. ಈ ಮೂಲಕ ಹಲವಾರು ದಿನಗಳಿಂದ ನಾನು ಮತ್ತು ಸಂಸದ ಅಣ್ಣಾಸಾಹೇಬ ಜೊಲ್ಲೆ ಕಂಡಿದ್ದ ವಸತಿ ರಹಿತರಿಗೆ ವಸತಿ ಕಲ್ಪಿಸುವ ನಮ್ಮ ಕನಸೂ ಸಹ ನನಸಾಗುತ್ತಿದೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹರ್ಷ ವ್ಯಕ್ತಪಡಿಸಿದರು.
ವಸತಿರಹಿತರಿಗೆ ವಸತಿ ಯೋಜನೆಯ ಭಾಗ್ಯ ಕಲ್ಪಿಸುವ ನಿಟ್ಟಿನಲ್ಲಿ ಇಲ್ಲಿನ ಬಸವಜ್ಯೋತಿ ಗಾರ್ಮೆಂಟ್ಸ್‌ನಲ್ಲಿ ಬುಧವಾರ ಜರುಗಿದ ಸಭೆಯಲ್ಲಿ ಅವರು ಮಾತನಾಡಿದರು.
’ಸುಮಾರು ೨೫ ವರ್ಷಗಳ ಹಿಂದೆ ವಸತಿರಹಿತರಿಗೆ ಕಲ್ಪಿಸಿದ ಮನೆಗಳು ದುಸ್ಥಿತಿಯಲ್ಲಿವೆ. ಅಂದಿನ ಕಟ್ಟಡಗಳು ಮತ್ತು ಈಗ ನಾವು ನಿರ್ಮಿಸಿ ಕೊಡುತ್ತಿರುವ ಕಟ್ಟಡಗಳಿಗೆ ಅಜಗಜಾಂತರವಿದೆ. ವಸತಿರಹಿತರು ವಸತಿ ಯೋಜನೆಗೆ ಮಾಡುವ ಸಾಲಕ್ಕೂ ಬ್ಯಾಂಕ್ ನಿಗದಿಪಡಿಸಿ ಆ ಸಾಲವನ್ನು ತೀರಿಸಲು ಅದೆ ಸ್ಥಳದಲ್ಲಿ ಮಹಿಳೆಯರಿಗಾಗಿ ಉದ್ಯೋಗವಕಾಶ ಮಾಡಿ ಕೊಡುವ ಯೋಜನೆ ರೂಪಿಸಲಾಗುವುದು. ಈ ಯೋಜನೆಯನ್ನು ಇಡಿ ದೇಶಕ್ಕೆ ಒಂದು ಮಾದರಿಯಾಗಿ ಪರಿವರ್ತಿಸಲಾಗುವುದು’ ಎಂದರು.
ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ ’ನಗರದಲ್ಲಿಯ ವಸತಿರಹಿತರಿಗೆ ೨೦೪೦ ಆರ್‌ಸಿಸಿ ಮನೆಗಳನ್ನು ಶೀಘ್ರದಲ್ಲೆ ಕಲ್ಪಿಸಲಾಗುವುದು. ಈ ನಿಟ್ಟಿನಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಶೀಘ್ರದಲ್ಲೆ ನಿರ್ಮಾಣದ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಶಿಂಧೆನಗರ, ದನಗಳ ಪೇಟೆ ಹತ್ತಿರ ಮತ್ತು ಹಾಲಶುಗರ್ ಕಾರ್ಖಾನೆ ಬಳಿ ಸ್ಥಳಾವಕಾಶವನ್ನು ಕಲ್ಪಿಸಲಾಗಿದ್ದು ಅಲ್ಲಿ ೩೯೪ ಚ.ಅಡಿ ಕ್ಷೇತ್ರದಲ್ಲಿಯ ಒಂದು ಬಿಎಚ್‌ಕೆ ಮನೆ ನಿರ್ಮಿಸಲು ರೂ.೬.೮೧ ಲಕ್ಷ ಮತ್ತು ೨ ಬಿಎಚ್‌ಕೆ ನಿರ್ಮಿಸಲು ರೂ.೯.೨೨ ಲಕ್ಷ ವೆಚ್ಚ ಬರಲಿದೆ. ಎರಡೂ ಮನೆಗಳಿಗೆ ರೂ.೨.೭೦ ಲಕ್ಷ ರಾಜ್ಯ ಮತ್ತು ಕೇಂದ್ರ ಸರಕಾರಗಳಿಂದ ಅನುದಾನ, ರೂ.೨ ಲಕ್ಷ ಕಾರ್ಮಿಕ ಇಲಾಖೆಯಿಂದ ಅನುದಾನ ದೊರೆಯಲಿದ.
ಆರಂಭದಲ್ಲಿ ಒಂದು ಬಿಎಚ್‌ಕೆಗಾಗಿ ಅರ್ಜಿ ಸಲ್ಲಿಸಲಿರುವರು ರೂ.೧೬ ಸಾವಿರ, ನಂತರ ಪ್ರತಿ ಮೂರು ತಿಂಗಳಿಗೊಮ್ಮೆ ೧೫ ಸಾವಿರದಂತೆ ಒಟ್ಟು ರೂ.೬೧ ಸಾವಿರ(ಪರಿಶಿಷ್ಠ ಜಾತಿ ಮತ್ತು ಪಂಗಡದವರಿಗೆ ರೂ.೫೧ ಸಾವಿರ) ತುಂಬಬೇಕು ಹಾಗೂ ೨ ಬಿಎಚ್‌ಕೆ ಬಯಸುವವರು ಆರಂಭದಲ್ಲಿ ರೂ.೫೦ ಸಾವಿರ, ನಂತರ ಪ್ರತಿ ಮೂರು ತಿಂಗಳ ನಂತರ ರೂ.೫೦ ಸಾವಿರ, ರೂ. ೫೦ ಸಾವಿರ ಮತ್ತು ರೂ.೪೦ ಸಾವಿರ ಹೀಗೆ ಒಟ್ಟು ರೂ.೧.೯೦ ಲಕ್ಷ (ಪರಿಶಿಷ್ಠ ಜಾತಿ ಮತ್ತು ಪಂಗಡದವರಿಗೆ ರೂ.೧.೩೦ ಲಕ್ಷ) ತುಂಬಬೇಕು. ಇಚ್ಛೆಯುಳ್ಳವರು ಮೊದಲ ಕಂತನ್ನು ನಗರಸಭೆಯಿಂದ ಗೊತ್ತುಪಡಿಸಿದ ಬ್ಯಾಂಕ್‌ನಲ್ಲಿ ಶೀಘ್ರದಲ್ಲೆ ತುಂಬಿ ನೋಂದಣಿ ಮಾಡಿಕೊಳ್ಳಬೇಕು. ನಗರದಲ್ಲಿ ಎಲ್ಲರಿಗೂ ವಸತಿ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು’ ಎಂದರು.
ಪೌರಾಯುಕ್ತ ಮಹಾವೀರ ಬೋರನ್ನವರ, ರಾಜ ಪಠಾಣ, ಗೋಪಾಳರಾವ ನಾಯಿಕ, ಮಾತನಾಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಚೇರಮನ್ ಚಂದ್ರಕಾಂತ ಕೋಠಿವಾಲೆ, ಎಪಿಎಂಸಿ ಚೇರಮನ್ ಅಮಿತ ಸಾಳವೆ, ಪ್ರವೀನ ಶಹಾ, ಅಭಯ ಮಾನವಿ, ಪ್ರೊ. ವಿಭಾವರಿ ಖಾಂಡಕೆ, ಬಂಡಾ ಘೋರ್ಪಡೆ ವೇದಿಕೆಯಲ್ಲಿದ್ದರು. ನಗರಸಭೆ ಸದಸ್ಯರು, ಫಲಾನುಭವಿಗಳು, ಬಿಜೆಪಿ ಪಕ್ಷದ ಕಾರ್ಯಕರ್ತರು, ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ