
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಂಗಳೂರಿನ ಡಿ.ಜೆ ಹಳ್ಳಿ, ಕೆ.ಜೆ ಹಳ್ಳಿಯಲ್ಲಿ ನಡೆದ ಘಟನೆ ಖಂಡನೀಯವಾಗಿದ್ದು, ಇದೊಂದು ಧಾರ್ಮಿಕ ಮತಾಂಧತೆಯಾಗಿದೆ ಎಂದು ನಟ ಪ್ರಕಾಶ್ ರಾಜ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಬೆಂಗಳೂರಿನಲ್ಲಿ ನಡೆದ ಗಲಭೆ ಅನಾಗರಿಕವಾದದ್ದು, ಈ ಧಾರ್ಮಿಕ ಮತಾಂಧತೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಕಾನೂನನ್ನು ಕೈಗೆ ತೆಗದುಕೊಂಡ ಪ್ರಚೋದಕರು ಹಾಗೂ ಗೂಂಡಾಗಳಿಗೆ ಕಠಿಣ ಶಿಕ್ಷೆಯಾಗಬೇಕು. ಈ ಸಮಾಜ ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.
ಸಾಮಾಜಿಕ ಜಾಲತಾಣಗಲಲ್ಲಿ ಕಾಂಗ್ರೆಸ್ ಶಾಸಕ ಅಖಂಡಶ್ರೀನಿವಾಸ್ ಅಕ್ಕನ ಮಗ ನವೀನ್ ಎಂಬಾತ ಸಮುದಾಯದ ವಿರುದ್ಧ ಪೋಸ್ಟ್ ಹಾಕಿದ್ದಬೆನ್ನಲ್ಲೇ ಡಿ.ಜೆ ಹಳ್ಳಿ ಹಾಗೂ ಕೆ.ಜಿ ಹಳ್ಳಿಯಲ್ಲಿ ಸಿಟ್ಟಿಗೆದ್ದ ಉದ್ರಿಕ್ತರ ಗುಂಪು ಶಾಸಕರ ಮನೆ ಹಾಗೂ ಎರಡು ಪೊಲೀಸ್ ಠಾಣೆಗಳನ್ನು ಬೆಂಕಿ ಹಚ್ಚಿ ಧ್ವಂಸಗೊಳಿಸಿದ್ದವು.
ಉದ್ರಿಕ್ತರು ಶಾಸಕರ ಮನೆ, ಕಚೇರಿ ಹಾಹೂ ಡಿಜೆ ಹಳ್ಳಿ ಠಾಣೆ, ಕೆಜಿ ಹಳ್ಳಿ ಠಾಣೆಗಳಿಗೆ ಬೆಂಕಿ ಹಚ್ಚಿದ್ದು, ಹತ್ತಕ್ಕೂ ಹೆಚ್ಚು ಅಂಗಡಿಗಳು ಬೆಂಕಿಗಾಹುತಿಯಾಗಿವೆ. ಘಟನೆಯಲ್ಲಿ ಒಟ್ಟು 52 ವಾಹನಗಳಿಗೆ ಹಾನಿಯಾಗಿದೆ. 2 ಇನ್ನೋವಾ, 2 ಕೆಎಸ್‍ಆರ್‍ಪಿ ವ್ಯಾನ್, 1 ಸಿಎಆರ್ ವ್ಯಾನ್, 6 ಪೊಲೀಸ್ ಜೀಪ್, ಒಂದು ಚೀತಾ ಬೈಕ್, ಸ್ಟೇಷನ್ ಮುಂದೆ ಜಪ್ತಿ ಮಾಡಿ ನಿಲ್ಲಿಸಿದ್ದ 30 ಇತರೆ ಬೈಕ್, ಒಂದು ಆಟೋ, 2 ಕಾರು, 1 ಬೈಕ್ ಗಳು ಬೆಂಕಿಗಾಹುತಿಯಾಗಿವೆ.