ಪ್ರಗತಿವಾಹಿನಿ ಸುದ್ದಿ; ಮಂಡ್ಯ: ಸೆಪ್ಟೆಂಬರ್ನಿಂದ ಶಾಲೆಗಳನ್ನು ಆರಂಭಿಸಲಾಗುತ್ತದೆ ಎಂಬ ಸುದ್ದಿ ಸುಳ್ಳು. ಪೋಷಕರು ಹಾಗೂ ವಿದ್ಯಾರ್ಥಿಗಳು ಅನಗತ್ಯ ಗೊಂದಲಕ್ಕೀಡಾಗುವುದು ಬೇಡ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟ ಪಡಿಸಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸುರೇಶ್ ಕುಮಾರ್ ಶಾಲೆ ಪ್ರಾರಂಭ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ ಎಂಬ ಆರೋಪ ನನ್ನ ಮೇಲಿದೆ. ಯಾವುದೇ ಕಾರಣಕ್ಕೂ ಸೆಪ್ಟೆಂಬರ್ನಿಂದ ಶಾಲೆಗಳನ್ನು ಪ್ರಾರಂಭಿಸಲ್ಲ. ಕೊರೊನಾ ಸೋಂಕಿನಂತಹ ಈ ಸಂದಿಗ್ಧ ಸ್ಥಿತಿಯಲ್ಲಿ ನಮ್ಮ ಮುಂದೆ ದೊಡ್ಡ ಸವಾಲು ಇದೆ. ಮುಂದಿನ ಶೈಕ್ಷಣಿಕ ದಿನಗಳು ಹೇಗೆ ಎಂದು ಯೋಚನೆ ಮಾಡುವಂತಾಗಿದೆ ಎಂದರು.
ನನಗೆ ಮಕ್ಕಳ ಆರೋಗ್ಯ ಮುಖ್ಯ. ಅವರ ಸುರಕ್ಷತೆ ಮುಖ್ಯ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಯಾವರೀತಿ ಕಲಿಕೆ ವಿಧಾನ ಅಳವಡಿಸಿಕೊಳ್ಳಬೇಕು ಎಂಬ ಬಗ್ಗೆ ಚಿಂತನೆಯಲ್ಲಿದ್ದೇವೆ. ಈಗಾಗಲೇ ನಮ್ಮ ರಾಜ್ಯದಲ್ಲಿ ವಿದ್ಯಾಗಮನ ಎಂಬ ಯೋಜನೆಯನ್ನು ತರಲಾಗಿದೆ. ಈ ಯೋಜನೆ ರಾಷ್ಟ್ರಕ್ಕೆ ಮಾದರಿಯಾಗಲಿದೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗಾಗಿ ಶಿಕ್ಷಣ ಇಲಾಖೆಯಿಂದ ಎರಡು ಚಾನಲ್ಗಳನ್ನು ಪ್ರಾರಂಭಿಸಲಾಗುತ್ತಿದೆ. ಎಲ್ಲಾ ತರಗತಿಗಳಿಗೆ ಪಾಠ ಮಾಡಲು ಸಿದ್ದತೆ ನಡೆದಿದ್ದು, ಪಠ್ಯಕ್ರಮ ಕೂಡ ಸಿದ್ಧವಾಗಿದೆ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ