ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಅವರೊಳ್ಳಿ ಗ್ರಾಮದಲ್ಲಿ ಪ್ರತಿವರ್ಷ ಶ್ರಾವಣ ಮಾಸದ ಕೊನೆ ಸೋಮವಾರ ನಡೆಯುತ್ತಿದ್ದ ಜಾತ್ರೆಯನ್ನು ಈ ಸಲ ಕೊರೊನಾ ಕಾರಣದಿಂದಾಗಿ ರದ್ದು ಮಾಡಲಾಗಿದೆ.
ಈ ಸಲ ಜಾತ್ರೆಯು ಸಂಪ್ರದಾಯಕ್ಕೆ ಅನುಗುಣವಾಗಿ ಆಗಸ್ಟ್ 17ರಂದು ನಡೆಯಬೇಕಿತ್ತು. ಆದರೆ ಕೊರೊನಾ ಮಹಾಮಾರಿ ಹರಡುವುದನ್ನು ತಡೆಯಲು ಯಾವುದೇ ಜಾತ್ರೆ ಹಾಗೂ ಜನ ಸೇರುವ ಸಮಾರಂಭ ಮಾಡಕೂಡದು ಎಂಬ ನಿಯಮ ಇರುವ ಹಿನ್ನೆಲೆಯಲ್ಲಿ ಜಾತ್ರೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲು ಜಾತ್ರಾ ಉತ್ಸವ ಸಮಿತಿಯವರು ನಿರ್ಧರಿಸಿದ್ದಾರೆ.
ಪ್ರತಿ ವರ್ಷ ಮಳೆಗಾಲದಲ್ಲಿಯೇ ಈ ಜಾತ್ರೆ ನಡೆಯುವುದು ವಿಶೇಷ. ಮುಖ್ಯವಾಗಿ ಗ್ರಾಮದ ಹೊರವಲಯದ ಬೆಟ್ಟದ ತುದಿಯಲ್ಲಿ ರುದ್ರಸ್ವಾಮಿ ದೇವಸ್ಥಾನವಿದ್ದು, ಎಷ್ಟೇ ಮಳೆಯಿದ್ದರೂ ಸಹ ಸಹಸ್ರಾರು ಭಕ್ತರು ಆಗಮಿಸುವ ಹಿನ್ನೆಲೆಯುಳ್ಳ ಜಾತ್ರೆ ಇದಾಗಿದೆ. ಆದರೆ ಈ ಸಲ ಜಾತ್ರೆ ಇರುವುದಿಲ್ಲವಾದ್ದರಿಂದ ಪ್ರತಿ ಸಲ ಜಾತ್ರೆಗೆ ಅಂಗಡಿ-ಮುಂಗಟ್ಟು ಹಾಕಲು ಬರುವವರು ಹಾಗೂ ಭಕ್ತರು ಯಾರೂ ಸಹ ಆಗಮಿಸಬಾರದು. ತಮ್ಮ ತಮ್ಮ ಮನೆಗಳಲ್ಲಿಯೇ ರುದ್ರಸ್ವಾಮಿ ದೇವರ ಪೂಜೆ ಮಾಡಿ ಮನೆಯಲ್ಲೇ ದೇವರ ಆರಾಧನೆಯನ್ನು ಮಾಡುವಂತೆ ಜಾತ್ರಾ ಉತ್ಸವ ಸಮಿತಿ ಪರವಾಗಿ ಶ್ರೀ ಚನ್ನಬಸವ ದೇವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ