Latest

ಕೆಎಲ್ಇ ವಿವಿ ಜೊತೆ ಒಡಂಬಡಿಕೆಗೆ ಅಮೇರಿಕಾ ವಿವಿ ಆಸಕ್ತಿ

 

     ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

 ನಗರದ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದೊಂದಿಗೆ ಅಮೇರಿಕಾದ ಉಟಾಹ ವಿಶ್ವವಿದ್ಯಾಲಯವು ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿಯ ಒಡಂಬಡಿಕೆ ಮಾಡಿಕೊಳ್ಳಲು ಉತ್ಸುಕತೆ ತೋರಿದೆ ಎಂದು ವಿಶ್ವವಿದ್ಯಾಲಯದ ಸಂಯೋಜಕ ಪೀಟರ ಟೈಲ್ಲಾಕ ತಿಳಿಸಿದರು.

ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ, ಅಮೇರಿಕದ ಜೀವ ರಕ್ಷಾ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಬುಧವಾರ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿದ್ದ ತುರ್ತು ಸೇವೆ ಮತ್ತು ಲೈಫ್ ಸಪೋರ್ಟ್ ಕುರಿತ ಕಾರ್‍ಯಾಗಾರದಲ್ಲಿ ಟೆಲಿ ಕಾನ್ಫರೆನ್ಸ ಮೂಲಕ ಅವರು ಮಾತನಾಡಿದರು.

ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯು ವೈದ್ಯಕೀಯ ಕ್ಷೇತ್ರದಲ್ಲಿ ಉನ್ನತ ಗುಣಮಟ್ಟದ ಸೇವೆಯೊಂದಿಗೆ ಅತ್ಯಾಧುನಿಕ ವೈದ್ಯಕೀಯ  ಸಲಕರಣೆಗಳನ್ನು ಹೊಂದಿ, ವೈದ್ಯಕೀಯ ಶಿಕ್ಷಣ, ಸಂಶೋಧನೆ ಹಾಗೂ ಚಿಕಿತ್ಸೆ ನೀಡುವಲ್ಲಿ ಅಗಾಧವಾದ ಸಾಧನೆ ತೋರುತ್ತಿದೆ. ಈ ಭಾಗದಲ್ಲಿ ತುರ್ತು ಸೇವೆಯನ್ನು ಇನ್ನಷ್ಟು ಬಲಪಡಿಸುವ ಸಲುವಾಗಿ ಒಪ್ಪಂದ ಮಾಡಿಕೊಳ್ಳಲು ಉತ್ಸುಕರಾಗಿದ್ದೇವೆ. ಇದರಿಂದ ಸಂಸ್ಥೆಯ ಕಾರ್‍ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರ ಇಚ್ಛೆಯಂತೆ  ಕರ್ನಾಟಕದಲ್ಲಿ ತುರ್ತು ಸೇವೆಯು ಎಲ್ಲರಿಗೂ ಲಭಿಸುವಲ್ಲಿ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.

ಭಾರತದಲ್ಲಿ ಅತ್ಯಾಧುನಿಕವಾದ ಅಪಘಾತ ಮತ್ತು ತುರ್ತು ಸೇವಾ ಘಟಕವನ್ನು ಹೊಂದಿರುವ ಆಸ್ಪತ್ರೆಯು ರೋಗಿಗಳ ಸೇವೆಯಲ್ಲಿ ನಿರತವಾಗಿದೆ. ಇದಕ್ಕಾಗಿ ಡಾ. ಪ್ರಭಾಕರ ಕೋರೆ ಅವರ ಶ್ರಮ ಅತ್ಯಂತ ಶ್ಲಾಘನೀಯ ಎಂದ ಅವರು, ಇನ್ನೂ ಹೆಚ್ಚಿನ ರೀತಿಯಲ್ಲಿ ಸೇವೆಯನ್ನು ಸಲ್ಲಿಸಲು ಅನುಕೂಲವಾಗುವಂತೆ ಆಸ್ಪತ್ರೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ಚಿಂತಿಸಲಾಗಿದೆ ಎಂದರು.

ಉಪನ್ಯಾಸ ನೀಡಿದ ಡಾ. ರಾಮಕೃಷ್ಣನ್ ನಾಯರ್, ಅಪಘಾತ ಹಾಗೂ ಪ್ರಕೃತಿ ವಿಕೋಪದಂತಹ ಸಂದರ್ಭಗಳಲ್ಲಿ ಸುವರ್ಣ ಘಳಿಗೆಯ ಸದುಪಯೋಗವನ್ನು ಪಡೆದು ಜನರ ಜೀವ ರಕ್ಷಿಸುವಲ್ಲಿ ಆಸ್ಪತ್ರೆಯ ಪಾತ್ರ ಅತ್ಯಂತ ಪ್ರಮುಖವಾಗಿದೆ. ತುರ್ತು ಸೇವೆಗೆ ಆಸ್ಪತ್ರೆಗಳು ಸದಾ ಸಿದ್ಧವಾಗಿರಬೇಕಾಗಿರುತ್ತದೆ. ಅದಕ್ಕೆ ತಕ್ಕಂತೆ ವೈದ್ಯಕೀಯ ಸಲಕರಣೆ, ಔಷಧಿ ಸೇರಿದಂತೆ ಎಲ್ಲವೂ ಕ್ಷಣಾರ್ಧದಲ್ಲಿ ಕೈಗೆ ಸಿಗುವಂತೆ ನೋಡಿಕೊಳ್ಳಬೇಕಾಗುತ್ತದೆ. ಅದಕ್ಕೆ ತಕ್ಕಂತೆ ಕೆಎಲ್‌ಇ ಸಂಸ್ಥೆ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಅಪಘಾತ ಹಾಗೂ ತುರ್ತು ಸೇವಾ ಘಟಕವು ಅತ್ಯಂತ ಸುಸಜ್ಜಿತವಾಗಿದೆ ಎಂದು ಶ್ಲಾಘಿಸಿದರು.

ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಂ.ವಿ. ಜಾಲಿ ಮಾತನಾಡಿ, ಆಸ್ಪತ್ರೆಯಲ್ಲಿ ತುರ್ತು ಸಂದರ್ಭದಲ್ಲಿ ಚಿಕಿತ್ಸೆಗಾಗಿ ದಾಖಲಾಗುವ ರೋಗಿಗಳ ಜೀವವನ್ನು ಕಾಪಾಡುವಲ್ಲಿ ಸದಾ ಕಾರ್‍ಯದಲ್ಲಿ ತೊಡಗಿಸಿಕೊಳ್ಳಲಾಗಿದ್ದು, ಉನ್ನತ ಶ್ರೇಣಿಯ ಉದ್ದೇಶದೊಂದಿಗೆ ಕಾರ್‍ಯಯೋಜನೆ ರೂಪಿಸಲಾಗುತ್ತಿದೆ ಎಂದರು. ಅಮೇರಿಕದ ಜೀವರಕ್ಷಾದ ಡಾ. ವಿಜಯ ಭಾಸ್ಕರ ರೆಡ್ಡಿ ಉಪನ್ಯಾಸ ನೀಡಿದರು.

ಡಾ. ಎಂ.ಬಿ. ಬೆಲ್ಲದ, ಡಾ. ಹೇಮಾ ಪಾಟೀಲ, ಡಾ. ಶಶಿ ಉಪ್ಪಿನ, ಡಾ. ಎಂ.ಸಿ. ಮೆಟಗುಡ್, ಡಾ. ರಾಜೇಂದ್ರ ಪವಾರ, ಡಾ. ಆರ್.ಎಸ್. ಮುಧೋಳ, ಡಾ. ಬೆಳಲದವರ, ಡಾ. ರಾಜಶೇಖರ ಸೋಮನಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button