Kannada NewsKarnataka NewsLatest

ಸತತಧಾರೆಯಿಂದ ನಲುಗಿದ ಖಾನಾಪುರ: ರಸ್ತೆ, ಸೇತುವೆ ಜಲಾವೃತ

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಶನಿವಾರ ರಾತ್ರಿ ಮತ್ತು ಭಾನುವಾರ ಇಡೀ ದಿನ ತಾಲೂಕಿನಾದ್ಯಂತ ಸುರಿಯುತ್ತಿರುವ ಜಡಿಮಳೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.

ಕೃಷಿ ಇಲಾಖೆಯ ಮೂಲಗಳ ಪ್ರಕಾರ ತಾಲೂಕಿನ ಜಾಂಬೋಟಿ, ಗುಂಜಿ ಮತ್ತು ಖಾನಾಪುರ ಹೋಬಳಿಗಳಲ್ಲಿ ಅಂದಾಜಿ 8 ಸಾವಿರ ಹೆಕ್ಟರ್ ಕೃಷಿ ಭೂಮಿ ಜಲಾವೃತಗೊಂಡಿದೆ. ಈ ಕೃಷಿಭೂಮಿಗಳಲ್ಲಿ ರೈತರು ಬೆಳೆದಿರುವ ಭತ್ತ, ರಾಗಿ, ಶೇಂಗಾ, ಕಬ್ಬು ಮತ್ತಿತರ ಬೆಳೆಗಳು ನೀರಲ್ಲಿ ಮುಳುಗಿವೆ.

ಕಣಕುಂಬಿ ಮತ್ತು ಜಾಂಬೋಟಿ ಅರಣ್ಯದಲ್ಲಿ ಕಳೆದ 48 ಗಂಟೆಗಳಿಂದ ಜೋರಾಗಿ ಮಳೆ ಸುರಿಯುತ್ತಿರುವ ಕಾರಣ ಮಲಪ್ರಭಾ ನದಿ ಪ್ರವಾಹೋಪಾದಿಯಲ್ಲಿ ಹರಿಯುತ್ತಿದೆ.
ತಾಲೂಕಿನೆಲ್ಲೆಡೆ ಸುರಿಯುತ್ತಿರುವ ಸತತಧಾರೆಯ ಪರಿಣಾಮ ತಾಲೂಕಿನಲ್ಲಿ ಹರಿಯುವ ಎಲ್ಲ
ನದಿ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಭೀಮಗಡ ಮತ್ತು ಕಣಕುಂಬಿ ಅರಣ್ಯದ
50ಕ್ಕೂ ಹೆಚ್ಚು ಗ್ರಾಮಗಳು ಮುಖ್ಯ ವಾಹಿನಿಯಿಂದ ಸಂಪರ್ಕ ಕಡಿತಗೊಂಡಿವೆ.

ಜಡಿಮಳೆಗೆ ಇಡೀ ತಾಲೂಕು ಅಕ್ಷರಶಃ ನಲುಗಿಹೋಗಿದ್ದು, ತಾಲೂಕಿನ ನಲವತ್ತಕ್ಕೂ ಹೆಚ್ಚು
ಗ್ರಾಮಗಳಲ್ಲಿ ಕಳೆದ 2 ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ವಿದ್ಯುತ್
ಅಭಾವದ ಕಾರಣ ಈ ಗ್ರಾಮಗಳಲ್ಲಿ ಕುಡಿಯುವ ನೀರು ಸರಬರಾಜು ಮತ್ತು ಮೊಬೈಲ್ ಸೇವೆಯಲ್ಲಿ
ವ್ಯತ್ಯಯ ಉಂಟಾಗಿದೆ.
ಮಹದಾಯಿ, ಪಾಂಡರಿ ಮತ್ತು ಮಲಪ್ರಭಾ ನದಿಗಳಲ್ಲಿ ನೀರು ಉಕ್ಕಿ ಹರಿಯುತ್ತಿರುವ ಕಾರಣ
ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಸೇತುವೆಗಳು ಜಲಾವೃತಗೊಂಡಿವೆ.
ತಾಲೂಕಿನ ಕಣಕುಂಬಿ, ಜಾಂಬೋಟಿ, ಲೋಂಡಾ ಮತ್ತು ಭೀಮಗಡ ಅರಣ್ಯಗಳಲ್ಲಿ ಎಡೆಬಿಡದೇ ಮಳೆ
ಸುರಿಯುತ್ತಿರುವ ಕಾರಣ ತಾಲೂಕಿನ ನೀಲಾವಡೆ-ಮಳವ, ಪಾರಿಶ್ವಾಡ-ಇಟಗಿ,
ದಾರೋಳಿ-ಮೋದೆಕೊಪ್ಪ, ಕುಸಮಳಿ-ಜಾಂಬೋಟಿ, ಕರಂಬಳ-ಜಳಗಾ, ಅಸೋಗಾ-ಭೋಸಗಾಳಿ,
ತೋರಾಳಿ-ಹಬ್ಬನಹಟ್ಟಿ, ಅಮಟೆ-ಗೋಲ್ಯಾಳಿ, ಚಾಪಗಾಂವ-ಯಡೋಗಾ ಮತ್ತು
ಚಿಕ್ಕಮುನವಳ್ಳಿ-ಚಿಕ್ಕಹಟ್ಟಿಹೊಳಿ ನಡುವಿನ ಸೇತುವೆಗಳ ಮೇಲೆ ಅಪಾಯ ಮಟ್ಟದಲ್ಲಿ ನೀರು
ಹರಿಯುತ್ತಿದೆ.
ಖಾನಾಪುರ-ಹೆಮ್ಮಡಗಾ ಮಾರ್ಗದ ಅಲಾತ್ರಿ ಹಳ್ಳದ ಸೇತುವೆ, ಪಾರಿಶ್ವಾಡ-ಇಟಗಿ,
ಹಿರೇಮುನವಳ್ಳಿ-ಅವರೊಳ್ಳಿ, ಖಾನಾಪುರ-ಹತ್ತರಗುಂಜಿ, ದೇಗಾಂವ-ಹೆಮ್ಮಡಗಾ,
ಅಬನಾಳಿ-ಡೊಂಗರಗಾಂವ, ಶಿರೋಲಿ-ತಿವೋಲಿ, ಕುಪ್ಪಟಗಿರಿ-ಖಾನಾಪುರ, ರುಮೇವಾಡಿ-ಖಾನಾಪುರ,
ಲೋಂಡಾ-ಗುಂಜಿ, ಚಿಕ್ಕಹಟ್ಟಿಹೊಳಿ-ಚಿಕ್ಕಮುನವಳ್ಳಿ ಮಾರ್ಗಗಳಲ್ಲಿರುವ ನದಿ,
ಹಳ್ಳ-ಕೊಳ್ಳಗಳ ಸೇತುವೆಗಳ ಮೇಲೆ ನೀರು ಹರಿದು ರಸ್ತೆ ಸಂಚಾರದಲ್ಲಿ ವ್ಯತ್ಯಯ
ಉಂಟಾಗಿದೆ. ಕಾಪೋಲಿ-ಕಾಮತಗಾ ಭಾಗದ ಪಾಂಡರಿ ನದಿಯ ಸೇತುವೆಗಳ ಮೇಲೂ ನೀರು
ಹರಿಯುತ್ತಿದೆ. ತಾಲೂಕಿನ ಗುಂಜಿ-ಅಂಬೇವಾಡಿ ಮಾರ್ಗಮಧ್ಯದ ಸೇತುವೆಯ ಮೇಲೂ ನೀರು ಹರಿದು
ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. ಪಟ್ಟಣದ ನದಿತೀರದ ಮಹಾದೇವ ಮಂದಿರ ಮತ್ತು ರಾಮ
ಮಂದಿರಗಳ ಆವರಣದಲ್ಲಿ ಮಲಪ್ರಭಾ ನದಿಯ ನೀರು ನುಗ್ಗಿದೆ. ತಾಲೂಕಿನ ಹಬ್ಬನಹಟ್ಟಿಯ
ಆಂಜನೇಯ ಮಂದಿರ, ಅಸೋಗಾ ಶಿವಾಲಯ, ಇಟಗಿಯ ಮರುಳಶಂಕರ ಮತ್ತು ಪಟ್ಟಣದ ನದಿತೀರದ ಇಸ್ಕಾನ್ ಮಂದಿರಗಳು ಮಲಪ್ರಭಾ ನದಿಯಲ್ಲಿ ಮುಳುಗಡೆಗೊಂಡಿವೆ.
ಮಳೆಮಾಪನ ಕೇಂದ್ರಗಳಲ್ಲಿ ದಾಖಲಾದಂತೆ ಭಾನುವಾರ ಪಟ್ಟಣದಲ್ಲಿ 128 ಮಿ.ಮೀ, ನಾಗರಗಾಳಿ
58 ಮಿಮೀ, ಬೀಡಿ 80 ಮಿಮೀ, ಅಸೋಗಾ 158 ಮಿಮೀ, ಗುಂಜಿ 128 ಮಿಮೀ, ಜಾಂಬೋಟಿ 167
ಮಿಮೀ, ಲೋಂಡಾ 152 ಮಿಮೀ ಹಾಗೂ ಕಣಕುಂಬಿಯಲ್ಲಿ 236 ಮಿಮೀ ಮಳೆ ಸುರಿದ ವರದಿಯಾಗಿದೆ.
ತಾಲೂಕಿನ ದೇವಲತ್ತಿ ಗ್ರಾಮದಲ್ಲಿ ಭಾನುವಾರದ ಮಳೆ ಎರಡು ಮನೆಗಳಿಗೆ
ಹಾನಿಯನ್ನುಂಟುಮಾಡಿದೆ. ಗ್ರಾಮದ ರೈತರಾದ ಸುರೇಶ ಇಟಗಿ ಮತ್ತು ನರಸಿಂಹ ಟಕ್ಕೇಕರ ಅವರ
ಮನೆಗಳ ಗೋಡೆಗಳು ಮಳೆಯ ನೀರಿನಿಂದಾಗಿ ಕುಸಿದಿದ್ದರಿಂದ ಮನೆಯಲ್ಲಿದ್ದ ದಿನಬಳಕೆ
ವಸ್ತುಗಳು ಹಾಳಾಗಿ ಲಕ್ಷಾಂತರ ಮೌಲ್ಯದ ನಷ್ಟ ಉಂಟಾಗಿದೆ. ಕೂಡಲೇ ತಮ್ಮ ಆಸ್ತಿಯ
ಹಾನಿಯನ್ನು ಪರಿಶೀಲಿಸಿ ಪರಿಹಾರ ಒದಗಿಸುವಂತೆ ಉಭಯ ರೈತರು ತಾಲೂಕಾಡಳಿತವನ್ನು
ಆಗ್ರಹಿಸಿದ್ದಾರೆ.
ತಾಲೂಕಿನ ಲಿಂಗನಮಠ, ಕಕ್ಕೇರಿ, ಭುರಣಕಿ, ಗೋಧೋಳಿ ಹಾಗೂ ಸುತ್ತಲಿನ ಭಾಗದಲ್ಲಿ ಕಳೆದ
ಶನಿವಾರ ರಾತ್ರಿಯಿಂದ ಸುರಿಯಲಾರಂಭಿಸಿದ ಮಳೆ ಭಾನುವಾರವೂ ಮುಂದುವರೆದಿದೆ. ಸತತವಾಗಿ
ಸುರಿಯುತ್ತಿರುವ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆಹಾನಿ ಮತ್ತು ಆಸ್ತಿಪಾಸ್ತಿ
ಹಾನಿಯಾಗಿದೆ. ಬಿರುಗಾಳಿ ಸಹಿತ ಸುರಿದ ಮಳೆಗೆ ಹಲವು ರಸ್ತೆಗಳು ಜಲಾವೃತಗೊಂಡಿದ್ದರಿಂದ
ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ. ಕೃಷಿ ಜಮೀನುಗಳಿಗೆ ನೀರು ನುಗ್ಗಿದ್ದರಿಂದ
ಬೆಳೆಗಳಿಗೆ ಹಾನಿಯಾಗಿದೆ. ಮಳೆ-ಗಾಳಿಯಿಂದಾಗಿ ಅಲ್ಲಲ್ಲಿ ಮರಗಳು ಉರುಳಿಬಿದ್ದಿವೆ.
ಭಾರೀ ಮಳೆಗೆ ರಸ್ತೆಗಳಲ್ಲಿ ಮತ್ತು ತೆಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹಗೊಂಡು
ಸಂಚಾರಕ್ಕೆ ಅಡಚಣೆಯಾಗಿದೆ. ಸತತ ಮಳೆಯಿಂದ ಈ ಭಾಗದ 10ಕ್ಕೂ ಹೆಚ್ಚು ಮನೆಗಳ ಗೋಡೆಗಳು
ಧರೆಗುರುಳಿವೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button