ಆರ್ ಸಿಯುದಲ್ಲಿ 10ಕ್ಕೂ ಹೆಚ್ಚು ಜನರಿಗೆ ಕೊರೋನಾ ಸೋಂಕು: ಆದರೂ ಸೀಲ್ ಡೌನ್ ಇಲ್ಲ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ 10ಕ್ಕೂ ಹೆಚ್ಚು ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಆದರೆ ಈವರೆಗೂ ವಿವಿಯನ್ನು ಸೀಲ್ ಡೌನ್ ಮಾಡಲಾಗಿಲ್ಲ.
ವಿಶ್ವವಿದ್ಯಾಲಯದ ಆವರಣದಲ್ಲಿರುವ ಬ್ಯಾಂಕ್ ಸಿಬ್ಬಂದಿಯೊಬ್ಬರಿಗೆ ಮೊದಲು ಕೊರೋನಾ ಕಾಣಿಸಿದೆ. ನಂತರ ವಿವಿಯ ಸಿಬ್ಬಂದಿಗೂ ಹರಡಿದೆ. ಇಲ್ಲಿಯ ಉಪನ್ಯಾಸಕರು, ಆಡಳಿತ ಸಿಬ್ಬಂದಿಗೆ ಕೂಡ ಕೊರೋನಾ ಬಂದಿದೆ. ಪ್ರತಿ ನಿತ್ಯ ಥರ್ಮಲ್ ಸ್ಕ್ರೀನ್ ಮಾಡಿಯೇ ಎಲ್ಲರನ್ನೂ ಒಳಗೆ ಬಿಡಲಾಗುತ್ತಿದೆ. ಆದರೂ ಕೆಲವರಿಗೆ ಲಕ್ಷಣಗಳೇ ಇಲ್ಲದೆ ಕೊರೋನಾ ಕಾಣಿಸಿದೆ.
ಪ್ರತಿ ನಿತ್ಯ ಕೊರೋನಾ ಇಲ್ಲಿನ ಸಿಬ್ಬಂದಿಗೆ ಹರಡುತ್ತಲೇ ಇದೆ. ಆದರೆ ಆರೋಗ್ಯ ಇಲಾಖೆ ಗಂಭೀರ ಕ್ರಮವನ್ನೇ ತೆಗೆದುಕೊಂಡಿಲ್ಲ. ಬೇರೆ ಬೇರೆ ಕಡೆ ಸೋಕಿತರು ಕಂಡಬಂದಲ್ಲಿ ತಕ್ಷಣ ಸೀಲ್ ಡೌನ್ ಮಾಡಲಾಗುತ್ತದೆ. ಆದರೆ ಇಲ್ಲಿ ತಿಂಗಳ ಹಿಂದೆಯೇ ಮೊದಲ ಪ್ರಕರಣ ಕಾಣಿಸಿದ್ದು, ಆ ನಂತರ ಪದೇ ಪದೆ ಸೋಂಕು ಕಾಣಿಸಿಕೊಂಡಿದೆ.
ಆದಾಗ್ಯೂ ಎಲ್ಲ ಸಿಬ್ಬಂದಿ ಕ್ವಾರಂಟೈನ್ ಕೂಡ ಮಾಡಿಲ್ಲ, ಸೀಲ್ ಡೌನ್ ಕೂಡ ಮಾಡಿಲ್ಲ. ಇದರಿಂದಾಗಿ ಇಲ್ಲಿನ ಸಿಬ್ಬಂದಿಗೆ ಆತಂಕ ಶುರುವಾಗಿದೆ.
ವಿವಿಯ ಮೆಡಿಕಲ್ ಆಫೀಸರ್ ಡಾ.ಯೋಗಿತಾ ಕರೋಶಿ ಅವರನ್ನು ಪ್ರಗತಿವಾಹಿನಿ ಸಂಪರ್ಕಿಸಿದಾಗ, ವಿವಿಯಲ್ಲಿ ಪರೀಕ್ಷೆ ನಡೆಸಿದಾಗ 10ಕ್ಕೂ ಹೆಚ್ಚು ಜನರಿಗೆ ಸೋಂಕು ಪತ್ತೆಯಾಗಿದೆ. ವಿವಿಗೆ ಬರದೇ ಪರೀಕ್ಷೆ ಮಾಡಿಸಿಕೊಂಡವರೆಷ್ಟು, ಎಷ್ಟು ಜನರಿಗೆ ಸೋಂಕು ತಗುಲಿದೆ ಎನ್ನುವ ಮಾಹಿತಿ ಇಲ್ಲ ಎಂದರು.
ವಿವಿಯಲ್ಲಿ ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆ ಬಗ್ಗೆ ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಎಲ್ಲ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಸೀಲ್ ಡೌನ್ ನಿರ್ಧಾರ ಜಿಲ್ಲಾಡಳಿತ ತೆಗೆದುಕೊಳ್ಳಬೇಕು. ನಾವು ಮಾಡಲು ಬರುವುದಿಲ್ಲ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ