ಪ್ರಗತಿವಾಹಿನಿ ಸುದ್ದಿ, ಗೋಕಾಕ: ಸಮೀಪದ ಪ್ರಸಿದ್ಧ ಶ್ರೀ ಉದಗಟ್ಟಿ ಉದ್ದಮ್ಮ ದೇವಸ್ಥಾನ ಮಂಗಳವಾರ ಘಟಪ್ರಭಾ ನದಿ ಪ್ರವಾಹದಿಂದಾಗಿ ಜಲಾವೃತವಾಗಿದೆ.
ಕಳೆದ ವಾರದಿಂದ ಮಹಾರಾಷ್ಟ್ರ ಮತ್ತು ಬೆಳಗಾವಿ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಘಟಪ್ರಭಾ ನದಿ ತುಂಬಿ ಹರಿಯುತ್ತಿದ್ದು, ಗೋಕಾಕ ತಾಲೂಕಿನ ಹಲವಾರು ಗ್ರಾಮಗಳು ಮುಳುಗಡೆಯ ಆತಂಕವನ್ನು ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಉದಗಟ್ಟಿ ಉದ್ದಮ್ಮನ ದೇವಸ್ಥಾನ ಸಂಪೂರ್ಣವಾಗಿ ಮುಳುಗಡೆಯಾಗುವ ಆತಂಕವಿದೆ. ದೇವಸ್ಥಾನ ಜಲಾವೃತಗೊಂಡಿದ್ದರೂ ಮಂಗಳವಾರದಂದು ಗ್ರಾಮದ ಭಕ್ತರು ದೇವಿಯ ದರ್ಶನಕ್ಕೆ ನೀರಿನಲ್ಲಿ ಮಿಂದು -ಎದ್ದು ಆಗಮಿಸುತ್ತಿರುವುದು ಕಂಡುಬಂದಿತು.
ತಿಗಡಿ ಮುಖ್ಯ ಸೇತುವೆಗೆ ಮುಳುಗಡೆಯ ಭೀತಿ
ಗೋಕಾಕ ತಾಲೂಕಿನ ಸಮೀಪದ ಯಾದವಾಡ-ಅರಭಾವಿ ರಾಜ್ಯ ಹೆದ್ದಾರಿಯಲ್ಲಿರುವ ತಿಗಡಿ-ಮಸಗುಪ್ಪಿ ಮುಖ್ಯ ಸೇತುವೆ ಈಗ ಮುಳುಗಡೆ ಭೀತಿ ಎದುರಿಸುತ್ತಿದೆ.
ಬೆಳಗಾವಿ ಮತ್ತು ಮಹಾರಾಷ್ಟ್ರದಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಿಡಕಲ್‌ನ ರಾಜಾ ಲಖಮನಗೌಡಾ ಆಣೆಕಟ್ಟು ಭರ್ತಿಯಾಗುತ್ತಿರುವುದರಿಂದ ಆನೆಕಟ್ಟಿನ ಹತ್ತೂ ಬಾಗಿಲುಗಳ ಮೂಲಕ ನೀರು ಹರಿಬಿಟ್ಟ ಪರಿಣಾಮ ಘಟಪ್ರಭಾ ನದಿ ತೀರದ ಜನಜೀವನ ಅಸ್ತವ್ಯಸ್ಥವಾಗಿದೆ.
ಅಡಿಬಟ್ಟಿ ಗ್ರಾಮ ಸೇರಿದಂತೆ ತಿಗಡಿ-ಮಸಗುಪ್ಪಿ ಮುಂತಾದ ಗ್ರಾಮಗಳು ಈಗ ಜಲಾವೃತವಾಗಿವೆ. ಇನ್ನೂ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬಂದರೆ ತಿಗಡಿ-ಮಸಗುಪ್ಪಿ ಮುಖ್ಯ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಲಿದೆ. ಸೇತುವೆಯ ಮೇಲೆ ನೀರು ಹರಿಯಲು ಕೆಲವೇ ಅಡಿಗಳಷ್ಟು ನೀರು ಕೆಳಗಿದೆ. ಇದರಿಂದ ನದಿತೀರದ ಜನ ತುಂಬಾ ತೊಂದರೆಗೆ ಸಿಲುಕುವ ಸಾಧ್ಯತೆಗಳಿವೆ. ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ದೃಷ್ಟಿಯಿಂದ ಅರಭಾವಿ ಶಾಸಕರ ಕಾರ್ಯಾಲಯದ ನಿಂಗಪ್ಪ ಕುರಬೇಟ, ಕೌಜಲಗಿ ಜಿಲ್ಲಾ ಪಂಚಾಯತ ಸದಸ್ಯರ ಆಪ್ತ ಸಹಾಯಕ ರವಿ ಪರುಶೆಟ್ಟಿಯೊಂದಿಗೆ ಕುಲಗೋಡ ಪೋಲಿಸ್ ಠಾಣೆಯ ಪಿ.ಎಸ್.ಐ. ಎಚ್.ಕೆ.ನೇರಳೆ ಹಾಗೂ ಸಿಬ್ಬಂದಿ ವರ್ಗ ಸೋಮವಾರ ತಿಗಡಿ ಸೇತುವೆ ವೀಕ್ಷಿಸಿ ಸಮಾಲೋಚಿಸಿದರು. ಮುನ್ನೆಚ್ಚರಿಕೆಯಾಗಿ ಜನರು ಮತ್ತು ವಾಹನಗಳ ಸಂಚಾರವನ್ನು ರದ್ದುಪಡಿಸಿದ್ದಾರೆಂದು ತಿಳಿದು ಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ