Kannada NewsKarnataka NewsLatest

ವಿವಿಧ ಪ್ರಮುಖ ಸುದ್ದಿಗಳು

ಗ್ರಂಥಾಲಯ ಮೇಲ್ವಿಚಾರಕರ ಆಯ್ಕೆ: ಅರ್ಜಿ ಆಹ್ವಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಜಿಲ್ಲೆಯ ೧೧ ಗ್ರಾಮ ಪಂಚಾಯತ ಗ್ರಂಥಾಲಯಗಳಿಗೆ ಗ್ರಂಥಾಲಯ ಮೇಲ್ವಿಚಾರಕರ ಆಯ್ಕೆ ಮಾಡಲಾಗುತ್ತಿದ್ದು, ಗ್ರಂಥಾಲಯ ಮೇಲ್ವಿಚಾರಕರನ್ನು ಗೌರವ ಸಂಭಾವನೆಯ ಆಧಾರದ ಮೇಲೆ ನೇಮಕಾತಿ ಮಾಡಲಾಗುವುದುಎಂದು ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕರು ತಿಳಿಸಿದ್ದಾರೆ.
ಚಿಕ್ಕೋಡಿ ತಾಲೂಕಿನ ಬಂಬರವಾಡ (ಸಾಮಾನ್ಯ ಅಭ್ಯರ್ಥಿ, ಮಹಿಳಾ ಅಭ್ಯರ್ಥಿ), ಹಿರೇಕೋಡಿ (ಸಾಮಾನ್ಯ ಅಭ್ಯರ್ಥಿ), ಸವದತ್ತಿ ತಾಲೂಕಿನ ಚುಳಕಿ (ಪರಿಶಿಷ್ಟ ಅಭ್ಯರ್ಥಿ, ಗ್ರಾಮೀಣ ಅಭ್ಯರ್ಥಿ), ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ( ೨ ಎ, ಮಹಿಳಾ ಅಭ್ಯರ್ಥಿ) ಕಂಗ್ರಾಳಿ ಬಿ.ಕೆ. (ಸಾಮಾನ್ಯ ಅಭ್ಯರ್ಥಿ, ಗ್ರಾಮೀಣ ಅಭ್ಯರ್ಥಿ), ಖಾನಾಪೂರ ತಾಲೂಕಿನ ಕರಂಬ( ಪರಿಶಿಷ್ಟ ಅಭ್ಯರ್ಥಿ), ಗೋಕಾಕ ತಾಲೂಕಿನ ಕುಲಗೋಡ (ಸಾಮಾನ್ಯ ಅಭ್ಯರ್ಥಿ, ಮಹಿಳಾ ಅಭ್ಯರ್ಥಿ), ಸುಣಧೋಳಿ (ಸಾಮಾನ್ಯ ಅಭ್ಯರ್ಥಿ, ಮಹಿಳಾ ಅಭ್ಯರ್ಥಿ), ಬೈಲಹೊಂಗಲ ತಲೂಕಿನ ನೇಗಿನಹಾಳ ( ೨ ಎ, ಗ್ರಾಮೀಣ ಅಭ್ಯರ್ಥಿ), ಸಂಪಗಾಂವ (ಪ್ರವರ್ಗ-೧) ಹಾಗೂ ಹಕ್ಕೇರಿ ತಾಲೂಕಿನ ರುಸ್ತುಂಪುರ (ಸಾಮನ್ಯ ಅಭ್ಯರ್ಥಿ, ಮಾಜಿ ಸೈನಿಕ ಅಭ್ಯರ್ಥಿ) ಗ್ರಾಮಗಳಿಗೆ ಪಂಚಾಯತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಗ್ರಾಮ ಪಂಚಾಯತ ಗ್ರಂಥಾಲಯಗಳಿಗೆ ನಿಗದಿಪಡಿಸಿದ ಮೀಸಲಾತಿಗೆ ಅನುಗುಣವಾಗಿ ಮರು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈಗಾಗಲೇ ಅರ್ಜಿಗಳನ್ನು ಸಲ್ಲಿಸಿದವರು ಮರು ಅರ್ಜಿಗಳನ್ನು ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ
ಸೆಪ್ಟೆಂಬರ್ ೨೨ ರ ಒಳಗಾಗಿ ಉಪ ನಿರ್ದೇಶಕರ ಕಚೇರಿ, ಜಿಲ್ಲಾ ಕೇಂದ್ರ ಗ್ರಂಥಾಲಯ, ಜಿಲ್ಲಾಧಿಕಾರಿಗಳ ಕಚೇರಿ ಆವರಣ, ಬೆಳಗಾವಿ ಇವರಿಗೆ ಸಲ್ಲಿಸುವುದು. ನಿಗದಿತ ದಿನಾಂಕದ ನಂತರ ಬಂದ ಅರ್ಜಿಗಳನ್ನು ಮತ್ತು ಅಪೂರ್ಣ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಮೇಲ್ವಿಚಾರಕ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.೭,೦೦೦ ರಂತೆ ಗೌರವ ಸಂಭಾವನೆ ಇರುತ್ತದೆ.

ಅರ್ಜಿ ಸಲ್ಲಿಸಲು ಅರ್ಹತೆ:
ಅಭ್ಯರ್ಥಿಯು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು, ಅಭ್ಯರ್ಥಿಯು ಸ್ಥಳೀಯ ಗ್ರಾಮ ಪಂಚಾಯತ ವ್ಯಾಪ್ತಿಗೆ ಸೇರಿರಬೇಕು. ಕಡ್ಡಾಯವಾಗಿ ತಹಶೀಲ್ದಾರರವರಿಂದ ಪಡೆದ ರಹವಾಸಿ ಪ್ರಮಾಣ ಪತ್ರ ಲಗತ್ತಿಸಿರಬೇಕು, ನಿಗದಿಪಡಿಸಿದ ಮೀಸಲಾತಿಗೆ ಒಳಪಡುವ ಅಭ್ಯರ್ಥಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಬೇಕು.
ಮುಂದುವರಿಕೆ ಶಿಕ್ಷಣದಡಿಯಲ್ಲಿ ಪ್ರೇರಕ/ಉಪ ಪ್ರೇರಕರು ಮತ್ತು ಸಂಯೋಜಕರೆಂದು ಸೇವೆ ಸಲ್ಲಿಸಿದ್ದಲ್ಲಿ ಪ್ರಾಧಾನ್ಯತೆ ನೀಡಲಾಗುವುದು (ಪ್ರಮಾಣ ಪತ್ರ ಲಗತ್ತಿಸಬೇಕು), ಭರ್ತಿ ಮಾಡಿದ ಅರ್ಜಿಗಳನ್ನು ಸೂಕ್ತ ದಾಖಲಾತಿಗಳೊಂದಿಗೆ (ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಟಿ.ಸಿ,ಮೀಸಲಾತಿ ಪ್ರಮಾಣ ಪತ್ರ, ಸ್ಥಳೀಯ ರಹವಾಸಿ ಪ್ರಮಾಣ ಪತ್ರ, ಅಂಗವಿಕಲತೆ ಇದ್ದಲ್ಲಿ ದೃಢೀಕರಣ ಪತ್ರ) ಸಲ್ಲಿಸಬೇಕು.

ಗರಿಷ್ಠ ವಯೋಮಿತಿ :
ಸಾಮಾನ್ಯ ವರ್ಗ-೩೬ ವರ್ಷಗಳು, ೨ಎ,೨ಬಿ,೩ಎ,೩ಬಿ-೩೮ ವರ್ಷಗಳು, ಪ.ಜಾ/ಪ.ಪಂ.ಪ್ರ-೧- ೪೦ ವರ್ಷಗಳು ಆಗಿರುತ್ತದೆ.
ಅರ್ಜಿ ನಮೂನೆಯನ್ನು ಅಭ್ಯರ್ಥಿಯ ಪೂರ್ಣ ಹೆಸರು ಮತ್ತು ಖಾಯಂ ವಿಳಾಸ, ತಂದೆಯ ಹೆಸರು, ಹುಟ್ಟಿದ ದಿನಾಂಕ, ವಿದ್ಯಾರ್ಹತೆ ಹಾಗೂ ಪ್ರ ವರ್ಗ ಭರ್ತಿ ಮಾಡಬೇಕು.
ಈ ಮಾಹಿತಿಗಳೊಂದಿಗೆ ಸ್ವ ಲಿಖಿತ ಇಲ್ಲವೆ ಬೆರಳಚ್ಚು ಮಾಡಿದ ಅರ್ಜಿಯನ್ನು ಸಂಬಂಧಪಟ್ಟ ದೃಢೀಕರಣ ಪತ್ರಗಳೊಂದಿಗೆ “ ಉಪ ನಿರ್ದೇಶಕರು, ಜಿಲ್ಲಾ ಕೇಂದ್ರ ಗ್ರಂಥಾಲಯ, ಜಿಲ್ಲಾಧಿಕಾರಿಗಳ ಕಚೇರಿ ಆವರಣ, ಬೆಳಗಾವಿ” ಇಲ್ಲಿಗೆ ಸಲ್ಲಿಸಬೇಕು ಎಂದು ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕರು(ಪ್ರ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ

 

ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ

ಡಾ.ಬಿ.ಆರ್.ಅಂಬೇಡ್ಕರ್ ಅಭಿವೃಧ್ಧಿ ನಿಗಮ, ಆದಿ ಜಾಂಬವ ಅಭಿವೃದ್ದಿ ನಿಗಮ ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮ., ಪರಿಶಿಷ್ಟ ಜಾತಿ ಅಲೆಮಾರಿ ಕೋಶ , ಸಫಾಯಿ ಕರ್ಮಚಾರಿ ಅಭಿವೃದ್ದಿ ನಿಗಮ ವತಿಯಿಂದ ೨೦೨೦-೨೧ ನೇ ಸಾಲಿಗೆ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಒದಗಿಸಲು ಅರ್ಹ ಪರಿಶಿಷ್ಟ ಜಾತಿಯ ಫಲಾಪೇಕ್ಷಿಗಳಿಂದ ಆನ ಲೈನ ಮೂಲಕ ಅರ್ಜಿ ಆಹ್ವಾನಿಸಿದ್ದು, ಅರ್ಜಿಗಳನ್ನು ಸ್ವೀಕರಿಸುವ ದಿನಾಂಕವನ್ನು ಸೆಪ್ಟೆಂಬರ್ ೬ರ ವರೆಗೆ ವಿಸ್ತರಿಸಲಾಗಿದೆ ಎಂದು ಡಾ.ಬಿ. ಆರ್. ಅಂಬೇಡ್ಕರ್ ಅಭಿವೃಧ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೀವರಕ್ಷಕ ಜಿಮ್/ಫಿಟ್ನೆಸ್ ತರಬೇತಿಗಾಗಿ ಅರ್ಜಿ ಆಹ್ವಾನ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆ ಅಡಿಯಲ್ಲಿ ಜೀವರಕ್ಷಕ (ಲೈಫ್‌ಗಾರ್ಡ್), ಜಿಮ್/ಫಿಟ್ನೆಸ್ ತರಬೇತುದಾರರು ಮತ್ತು ಮಾರ್ಕರ್ ತರಬೇತಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಯುವಜನರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತರು ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ sಸೆಪ್ಟೆಂಬರ್ ೩೦ ಒಳಗಾಗಿ ಉಪ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ, ಬೆಳಗಾವಿ ಇವರ ಕಛೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ, ಬೆಳಗಾವಿ ಕಚೇರಿಯ ದೂರವಾಣಿ ಸಂಖ್ಯೆ ೦೮೩೧-೨೪೭೦೭೫೭ ನ್ನು ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂಗವಿಕಲ ಅಭ್ಯರ್ಥಿಗಳಿಗೆ ಡಿಪ್ಲೋಮಾ ಪ್ರವೇಶಕ್ಕೆ ಅವಕಾಶ

ಕೇಂದ್ರ ಸರ್ಕಾರದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಇಲಾಖೆ ವತಿಯಿಂದ ವಿಶೇಷವಾಗಿ ವಿಕಲಚೇತನ ವಿದ್ಯಾರ್ಥಿಗಳಿಗೆ ಮುಖ್ಯವಾಹಿನಿಯಲ್ಲಿ ಸೇರಿಸುವ ಉದ್ಧೇಶದಿಂದ ಮೂರು ವರ್ಷದ ಡಿಪ್ಲೋಮಾ ಕೋರ್ಸ್‌ಗಳಲ್ಲಿ ಸುಮಾರು ೫೦ ಪಾಲಿಟೆಕ್ನಿಕಗಳಲ್ಲಿs ೨೫ ವಿದ್ಯಾರ್ಥಿಗಳಿಗೆ ಪ್ರವೇಶ ಸೌಲಭ್ಯದೊರೆಯುತ್ತಿದ್ದು, ಕರ್ನಾಟಕದಲ್ಲಿ ಮಂಗಳೂರು, ಬೆಳಗಾವಿ ಮತ್ತು ಹಾಸನ ಪಾಲಿಟೆಕ್ನಿಕಗಳಲ್ಲಿ ಡಿಪ್ಲೋಮಾ ಕೊರ್ಸುಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಕೋರ್ಸುಗಳ ವಿವರ:
ಸಿವಿಲ್ ಇಂಜನೀಯರಿಂಗ್-೪ ಸೀಟು, ಎಲೇಕ್ಟ್ರಿಕಲ್ ಆಂಡ್ ಎಲೇಕ್ಟ್ರಾನಿಕ್ಸ್ ಇಂಜನೀಯರಿಂಗ್-೪, ಮೆಕ್ಯಾನಿಕಲ್ ಇಂಜನೀಯರಿಂಗ್-೩, ಅಟೋಮೋಬೈಲ್ ಇಂಜನೀಯರಿಂಗ್-೨, ಎಲೇಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ ಇಂಜನೀಯರಿಂಗ್-೫, ಕಮರ್ಶಿಯಲ್ ಪ್ರಾಕ್ಟಿಸ್ (ಇಂಗ್ಲೀಷ)-೩, ಹಾಗೂ ಕಮರ್ಶಿಯಲ್ ಪ್ರಾಕ್ಟಿಸ್ (ಕನ್ನಡ)-೪ ಸೀಟುಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಸಂದರ್ಶನಕ್ಕೆ ಬರುವಾಗ ಮೂಲ ಎಸ್.ಎಸ್.ಎಲ್.ಸಿ.ಅಂಕಪಟ್ಟಿ, ಸಂಬಂಧಿಸಿದ ವೈದ್ಯಾಧಿಕಾರಿಗಳಿಂದ ಪಡೆದ ಮೂಲ ವೈದ್ಯಕೀಯ ಪ್ರಮಾಣ ಪತ್ರಗಳನ್ನು ಹಾಗೂ SSಐಅ ಒಳಗೊಂಡಂತೆ ೫ ವರ್ಷದ ಅವಧಿಗೆ ಕರ್ನಾಟಕದಲ್ಲಿ ವ್ಯಾಸಂಗ ಮಾಡಿದ ಮೂಲ ಶಾಲೆಯ ಪ್ರಮಾಣ ಪತ್ರಗಳನ್ನು ತರಬೇಕು
ಈ ಕೋರ್ಸುಗಳಿಗೆ ಯಾವುದೇ ಶುಲ್ಕವು ಇರುವುದಿಲ್ಲ. ಪ್ರವೇಶ ಹೋಂದಿದ ವಿದ್ಯಾರ್ಥಿಗಳಿಗೆ ಸ್ಕಾಲರಶಿಪ್, ಹಾಗೂ ಲಭ್ಯವಿರುವ ಇತರೆ ಸೌಲಭ್ಯಗಳನ್ನು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಪ್ರಿನ್ಸಿಪಾಲರು, ಹಾಗೂ ಸರ್ಕಾರಿ ಪಾಲಿಟೆಕ್ನಿಕ್, ಬೆಳಗಾವಿ, ಇವರನ್ನು ಕಚೇರಿಯ ವೇಳೆಯಲ್ಲಿ ಭೇಟಿಯಾಗಬಹುದು ಎಂದು ಸರ್ಕಾರಿ ಪಾಲಿಟೆಕ್ನಿಕ ಕಾಲೇಜಿನ ಪ್ರಾನ್ಸಿಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಪೌರರಕ್ಷಣಾ ವಾಲೆಂಟರ‍್ಸ್‌ಗಳ ನೋಂದಣಿ ಪ್ರಾರಂಭ

ಜಿಲ್ಲೆಯಲ್ಲಿ ನೂತನವಾಗಿ ಪೌರರಕ್ಷಣೆಯು ಪ್ರಾರಂಭವಾಗಿದ್ದು, ಪೌರರಕ್ಷಣಾ ವಾಲೆಂಟರ‍್ಸ್‌ಗಳಾಗಿ ನೋಂದಣಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸೇವೆಯು ಎಲ್ಲ ಜೀವಿಗಳ ಅನುಕೂಲಕ್ಕಾಗಿ ಕೆಲಸ ಮಾಡುವುದಾಗಿದ್ದು ಯಾವುದೇ ರೀತಿಯ ಮಾಸಿಕ ಸಂಬಳ ಇರುವುದಿಲ್ಲ ಎಂದು ಗೃಹರಕ್ಷಕದಳ ಮತ್ತು ಮುಖ್ಯ ವಾರ್ಡನ್ ಕಿರಣ ನಾಯ್ಕ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆಪ್ಟೆಂಬರ್ ೧ ರಿಂದ ಅರ್ಜಿಗಳನ್ನು ವಿತರಿಸಲಾಗುತ್ತಿದ್ದು, ಬೆಳಗ್ಗೆ ೧೧ ರಿಂದ ಸಾಯಂಕಾಲ ೫ರ ಒಳಗೆ ಅರ್ಜಿಗಳನ್ನು ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಸೆಪ್ಟೆಂಬರ್ ೧೫ರ ಸಂಜೆ ೪.೩೦ರ ಒಳಗೆ ಅರ್ಜಿ ಪಡೆದ ಸ್ಥಳದಲ್ಲಿಯೇ ಸಲ್ಲಿಸಬೇಕು.

ನೀಡಬೇಕಾದ ದಾಖಲಾತಿಗಳು:
ಅಭ್ಯರ್ಥಿಗಳು ಕನಿಷ್ಠ ೧೮ ರಿಂದ ಮೇಲ್ಪಟ್ಟು ದೈಹಿಕವಾಗಿ ಸಧೃಢವಾಗಿರುವವರು, ಕನಿಷ್ಠ ವಿದ್ಯಾರ್ಹತೆ ೧೦ನೇ ತರಗತಿ ಉತ್ತ್ತಿರ್ಣರಾಗಿರಬೇಕು, ಅರ್ಜಿಗಳೊಂದಿಗೆ ವಯಸ್ಸು ಧೃಢೀಕರಣಕ್ಕಾಗಿ ಶಾಲಾ ಪ್ರಮಾಣ ಪತ್ರ. (ಖಿಅ) ಅಥವಾ ಎಸ್.ಎಸ್.ಎಲ್.ಸಿ ಅಂಕಪಟ್ಟಿ, ವಿಳಾಸ ಧೃಡೀಕರಣಕ್ಕಾಗಿ ಆಧಾರ ಕಾರ್ಡ ನಕಲು ಪ್ರತಿ ಹಾಗೂ ೨ ಪಾಸ್‌ಪೊರ್ಟ್ ಅಳತೆ ಭಾವಚಿತ್ರಗಳನ್ನು ಲಗತ್ತಿಸುವುದು, ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗಿರುವ ಬಗ್ಗೆ ಸರ್ಕಾರಿ ಆಸ್ಪತ್ರೆಯಿಂದ ವೈದ್ಯಕೀಯ ಪ್ರಮಾಣ ಪತ್ರ ಲಗತ್ತಿಸುವುದು, ಅರ್ಜಿಯೊಂದಿಗೆ ಸ್ವಯಂ ವಿಳಾಸ ಬರೆದಿರುವ ೨ ಅಂಚೆ ಲಕೋಟೆ ಲಗತ್ತಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಕಚೇರಿ ವಿಳಾಸ, ಮುಖ್ಯ ವಾರ್ಡ್‌ನ್ ಪೌರರಕ್ಷಣೆ, ಛಿ/o ಜಿಲ್ಲಾ ಕಮಾಂಡಂಟ್ ಕಚೇರಿ ಹೋಂಗಾರ್ಡ್ಸ್, ಬೆಳಗಾವಿ ಜಿಲ್ಲೆ, ರಾಣಿ ಚನ್ನಮ್ಮಾ ಹೌಸಿಂಗ್ ಸೊಸೈಟಿ, ಶ್ರೀನಗರ, ಬೆಳಗಾವಿ-೫೯೦೦೧೭ ಗೆ ಸಂಪರ್ಕಿಸಬಹುದು ಎಂದು ಗೃಹರಕ್ಷಕದಳ ಮತ್ತು ಮುಖ್ಯ ವಾರ್ಡನ್ ಕಿರಣ ನಾಯ್ಕ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆ. ೨ ರಂದು ಶ್ರೀ ಬ್ರಹ್ಮಶ್ರೀ ನಾರಾಯಣಗುರು ಜಯಂತಿ

ಶ್ರೀ ಬ್ರಹ್ಮಶ್ರೀ ನಾರಾಯಣಗುರು ಜಯಂತಿಯನ್ನು ಸೆಪ್ಟೆಂಬರ್ ೨ ರಂದು ಆಚರಿಸಲಾಗುತ್ತಿದ್ದು, ಕೋವಿಡ್-೧೯ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಸರಳ ರೀತಿಯಿಂದ ಜಯಂತಿಯನ್ನು ಆಚರಿಸಲಾಗುತ್ತಿದೆ. ಸದರಿ ದಿನದಂದು ಬೆಳಗ್ಗೆ ೧೦.೩೦ ಗಂಟೆಗೆ ನಗರದ ಕುಮಾರ ಗಂಧರ್ವ ಕಲಾಮಂದಿರ ಆವರಣದ ಶ್ರೀ ಬಸವರಾಜ ಕಟ್ಟೀಮನಿ ಸಭಾಭವನದಲ್ಲಿ ಪೂಜಾ ಹಾಗೂ ಶ್ರೀ ಬ್ರಹ್ಮಶ್ರೀ ನಾರಾಯಣಗುರು ಭಾವಚಿತ್ರಕ್ಕೆ ಮಾಲಾರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹುಕ್ಕೇರಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ: ಅರ್ಜಿ ಆಹ್ವಾನ

ಹುಕ್ಕೇರಿ ತಾಲೂಕಿನಲ್ಲಿ ಪಿ.ಯು.ಸಿ, ಪದವಿ, ಸ್ನಾತಕೋತ್ತರ ಮತ್ತು ವೃತ್ತಿಪರ ಕೋರ್ಸಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಮಂಜೂರಾತಿಗೆ ಆನಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ.
ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವೆಬ್‌ಸೈಟ್   ನಲ್ಲಿ ಭರ್ತಿ ಮಾಡಿ ಪ್ರಾಚಾರ್ಯರ ಸಹಿ ಹಾಗೂ ಅಗತ್ಯ ದಾಖಲಾತಿಗಳೊಂದಿಗಿನ ತಾಲೂಕಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳು ಹುಕ್ಕೇರಿ ಇವರಿಗೆ ಸಲ್ಲಿಸಬೇಕು.

ಲಗತ್ತಿಸಬೇಕಾದ ದಾಖಲಾತಿಗಳು:
ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಪಾಸಾದ ಅಂಕ ಪಟ್ಟಿಯ ದೃಢೀಕರಣ ನಕಲು ಪ್ರತಿ, ವಿದ್ಯಾರ್ಥಿಯ ಜಾತಿ ಪ್ರಮಾಣ ಪತ್ರ, ವಿದ್ಯಾರ್ಥಿಯ ತಂದೆ/ತಾಯಿ/ಪಾಲಕರ ವಾರ್ಷಿಕ ಆದಾಯ ಪ್ರಮಾಣ ಪತ್ರ, ರಾಷ್ಟ್ರಿಕೃತ ಬ್ಯಾಂಕನಲ್ಲಿ ಖಾತೆ ಹೊಂದಿರುವ ಪಾಸ ಬುಕ್ಕಿನ ನಕಲು ಪ್ರತಿ, ಆಧಾರ ಕಾರ್ಡಿನ ಝೆರಾಕ್ಸ ಪ್ರತಿ ಅಥವಾ ಆಧಾರ ನೊಂದಣಿ ಪತ್ರದ ಝೆರಾಕ್ಸ ಪ್ರತಿ ಲಗತ್ತಿಸಬೆಕು.
ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ ೦೮೩೩೩-೨೬೬೪೧೯ಗೆ ಸಂಪರ್ಕಿಸಬಹುದಾಗಿದೆ ಎಂದು ಹುಕ್ಕೇರಿ ತಾಲೂಕಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆ.೩ ರಂದು ವಿದ್ಯುತ್ ನಿಲುಗಡೆ

ಹುಬ್ಬಳ್ಳಿ ವಿದ್ಯತ್ ಸರಬರಾಜು ಕಂಪನಿವತಿಯಿಂದ ಹೊಸ ೩೩ ಕೆ.ವ್ಹಿ ಮಾರ್ಗಗಳನ್ನು ನಿರ್ಮಿಸುವ ಕಾರ್ಯವನ್ನು ಕೈಗೊಳ್ಳುತ್ತಿರುವುದರಿಂದ ಸೆಪ್ಟೆಂಬರ್ ೩ ರಂದು ಬೆಳಿಗ್ಗೆ ೧೦ ಘಂಟೆಯಿಂದ ಸಾಯಂಕಾಲ ೫ ಘಂಟೆಯವರೆಗೆ ವಿದ್ಯುತ್ ನಿಲುಗಡೆ ಆಗಲಿದೆ.
೧೧೦ ಕೆ.ವ್ಹಿ. ಉಚಗಾಂವ ಉಪಕೇಂದ್ರದಿಂದ ಸರಬರಾಜು ಆಗುವ ಸುಳಗಾ, ಕಲ್ಲೇಹೋಳ, ಉಚಗಾಂವ, ಬಸುರ್ತೆ, ಬೆಕ್ಕಿನಕೇರಿ, ತುರಮುರಿ, ಕೋಣೆವಾಡಿ ಹಾಗೂ ಬಾಚಿ ಗ್ರಾಮಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಕಾರ್ಯನಿರ್ವಾಹಕ ಇಂಜಿನೀಯರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ

 

ವಿವಿಧ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ಪ್ರಥಮ ದರ್ಜೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ನವೆಂಬರ ೩೦ ಕೊನೆಯ ದಿನವಾಗಿದ್ದು, ಆನ್‌ಲೈನ್ ಮೂಲಕ ಅವಶ್ಯಕ ದಾಖಲೆಗಳೊಂದಿಗೆ ವೆಬ್‌ಸ್ಶೆಟ್  ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಯೋಜನೆಯ ವಿವರ:
ದ್ವಿತೀಯ ಪಿ.ಯು.ಸಿ ಪಾಸಾದ ವಿದ್ಯಾರ್ಥಿಗಳಿಗೆ ರೂ.೨೦,೦೦೦, ಪದವಿ ಮುಗಿಸಿದ ವಿದಾರ್ಥಿಗಳಿಗೆ ರೂ.೨೫,೦೦೦, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ರೂ.೩೦,೦೦೦ ಹಾಗೂ ಇಂಜಿನೀಯರಿಂಗ್/ವೈದ್ಯಕೀಯ/ಕೃಷಿ/ಪಶುವೈದ್ಯಕೀಯ ವಿದ್ಯಾರ್ಥಿಗಳಿಗೆ ರೂ ೩೫.೦೦೦ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ನೀಡಬೇಕಾದ ದಾಖಲಾತಿಗಳು;
ಕಡ್ಡಾಯವಾಗಿ ಆರ್.ಡಿ. ಸಂಖ್ಯೆ ಹೊಂದಿರುವ ವಿದ್ಯಾರ್ಥಿಯ ಜಾತಿ ಪ್ರಮಾಣ ಪತ್ರ ಹೊಂದಿರಬೇಕು, ವಿದ್ಯಾರ್ಥಿಯ ಬ್ಯಾಂಕ್ ಖಾತೆಯ ಪ್ರತಿಯನ್ನು ನೀಡಬೇಕು ಹಾಗೂ ಸದರಿ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಮೊದಲೇ ಆಧಾರ್ ಜೋಡಣೆ ಮಾಡಿರಬೇಕು, ನವೀಕರಿಸಿದ  ಸೂಕ್ತವಾದ ಆಧಾರ್ ಕಾರ್ಡ್ ಲಗತ್ತಿಸಬೇಕು. ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಅಂಕಪಟ್ಟಿಗಳನ್ನು ಕಡ್ಡಾಯವಾಗಿ ನೀಡುವುದು ಹಾಗೂ ಕೋರ್ಸುಗಳಿಗೆ ಅನಗುಣವಾಗಿ ಎಲ್ಲಾ ಸೆಮಿಸ್ಟರ್‌ಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಉತ್ತೀರ್ಣವಾದ ಬಗ್ಗೆ ದೃಢೀಕೃತ ಅಂಕಪಟ್ಟಿಗಳನ್ನು ಸಲ್ಲಿಸುವುದು. ಅರ್ಜಿ ಸಲ್ಲಿಸಿದ ನಂತರ ದಾಖಲೆಗಳನ್ನು ತಮ್ಮ ಕಾಲೇಜಿನ ಪ್ರಾಂಶುಪಾಲರಿಂದ ದೃಢೀಕರಣದೊಂದಿಗೆ ಕಾರ್ಯಾಲಯಕ್ಕೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು(ಗ್ರೇಡ್-೨) ಸಮಾಜ ಕಲ್ಯಾಣ ಇಲಾಖೆ, ಹುಕ್ಕೇರಿ ಇಲ್ಲಿ ಸಂಪರ್ಕಿಸುವುದು ಅಥವಾ ದೂರವಾಣಿ ಸಂಖ್ಯೆ ೦೮೩೩೩-೨೬೫೪೧೯ ಮೊಬೈಲ್ ಸಂಖ್ಯೆ ೯೪೮೦೮೪೩೦೬೮, ೭೮೧೫೦೩೪೬೪೮ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button