Kannada NewsKarnataka NewsLatest

ಸ್ಮಾರ್ಟ್ ಸಿಟಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಅಂಗಡಿ, ಬೆನಕೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೊರೋನಾ ಹಿನ್ನೆಲೆಯಲ್ಲಿ ಸ್ಥಗಿತವಾಗಿದ್ದ ಬೆಳಗಾವಿ ಸ್ಮಾರ್ಟ್ ಸಿಟಿ ಕಾಮಗಾರಿಗಳ ಸ್ಥಿತಿ ಗತಿಯನ್ನು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹಾಗೂ ಶಾಸಕ ಅನಿಲ ಬೆನಕೆ ಶನಿವಾರ ಪರಿಶೀಲಿಸಿದರು.

ಈಗ ಬಹುತೇಕ ಮಳೆಗಾಲ ಮುಕ್ತಾಯವಾಗಿ, ಬಿಸಿಲಿನ ವಾತಾವರಣ ಬರುತ್ತಿರುವ ಸಂದರ್ಭದಲ್ಲಿ ಕಾಮಗಾರಿಗಳನ್ನು ಪುನಃ ಚುರುಕುಗೊಳಿಸಬೇಕು. ವಿವಿಧ ಇಲಾಖೆಗಳ ಮಧ್ಯೆ ಇರುವ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಪರಿಹರಿಸಬೇಕು ಎಂದು ಅಂಗಡಿ ಸೂಚಿಸಿದರು.

ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಜಿಟಿಟಿಸಿಗೆ ವಹಿಸುವ ಬದಲು ನೇರವಾಗಿ ಸ್ಮಾರ್ಟ್ ಸಿಟಿ ಯೋಜನೆಯಿಂದಲೇ ನಡೆಸುವ ಕುರಿತು ಚರ್ಚಿಸಲಾಯಿತು. ಸ್ಮಾರ್ಟ್ ಸಿಟಿಯಿಂದ ನಿರ್ಮಾಣವಾಗಿರುವ ವಿವಿಧ ಬಸ್ ನಿಲ್ದಾಣಗಳ ಬಳಿ ಬಸ್ ನಿಲ್ಲಿಸದೇ ಇರುವುದರಿಂದ ಅವು ಬಿಡಾಡಿ ದನಗಳ ತಂಗುದಾಣವಾಗಿದೆ. ಆಟೋ ಚಾಲಕರ ವಿಶ್ರಾಂತಿ ಕೇಂದ್ರವಾಗಿದೆ. ನಿರ್ಮಾಣದ ಉದ್ದೇಶ ಈಡೇರುತ್ತಿಲ್ಲ ಎನ್ನುವ ಕುರಿತು ಸಹ ಚರ್ಚಿಸಿ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಬಸ್ ಗಳು ನಿಗದಿತ ಸ್ಥಳದಲ್ಲಿಯೇ ನಿಲ್ಲುವಂತೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಲಾಯಿತು.

ರಾಷ್ಟ್ರೀಯ ಹೆದ್ದಾರಿ 4 ಎ ಬೋಗಾರ್ ವೇಸ್ ನಿಂದ ಫಿಶ್ ಮಾರ್ಕೆಟ್ ವರೆಗಿನ ಅಗಲೀಕರಣ ಕುರಿತು ಸುದೀರ್ಘ ಚರ್ಚಿಸಲಾಯಿತು. ರಸ್ತೆ ಅತಿಕ್ರಮಣವಾಗಿದ್ದರೂ ಅಲ್ಲಿನ ನಿವಾಸಿಗಳಿಗೆ ಪರಿಹಾರ ಕೊಡಬೇಕಾಗುತ್ತದೆ. ಅವರು ಲೀಸ್ ಮೇಲೆ ಜಾಗ ಪಡೆದುಕೊಂಡಿದ್ದಾರೆ ಎಂದು ಕ್ಯಾಂಟೋನ್ಮೆಂಟ್ ಬೋರ್ಡ್ ವಾದಿಸುತ್ತಿದೆ. ಹಾಗಾಗಿ ಈ ಬಗ್ಗೆ ತುರ್ತಾಗಿ ಪರಿಶೀಲಿಸಿ, ಕ್ರಮವಾಗಬೇಕು ಎಂದು ಶಾಸಕ ಅನಿಲ ಬೆನಕೆ ಹೇಳಿದರು.

ಅರ್ಧಕ್ಕೆ ನಿಂತಿರುವ ರಸ್ತೆ, ಗಟಾರ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಪೂರ್ಣಗೊಳಿಸಬೇಕು ಎಂದು ಸೂಚಿಸಲಾಯಿತು.

ಸ್ಮಾರ್ಟ್ ಸಿಟಿ ಎಂಡಿ ಶಶಿಧರ ಕುರೇರ, ಸ್ಮಾರ್ಟ್ ಸಿಟಿ ಕಾಮಗಾರಿಗಳ ಈಗಿನ ಸ್ಥಿತಿಗತಿ ಕುರಿತು ಮಾಹಿತಿ ನೀಡಿದರು. ಕಳೆದ ಜನೆವರಿ, ಫೆಬ್ರವರಿ, ಮಾರ್ಚ್ ಹೊತ್ತಿಗೆ ಕಾಮಗಾರಿ ಅತ್ಯಂತ ವೇಗವಾಗಿ ನಡೆದಿತ್ತು. ಆದರೆ ಕೊರೋನಾ ಬಂದಿದ್ದರಿಂದ ಸಂಪೂರ್ಣ ಸ್ಥಗಿತಗೊಳಿಸಬೇಕಾಯಿತು. ಕಾರ್ಮಿಕರೂ ತಮ್ಮ ತಮ್ಮ ಊರುಗಳಿಗೆ ಮರಳಿದ್ದರು. ಈಗ ಲಭ್ಯವಿರುವ ಕಾರ್ಮಿಕರನ್ನೇ ಬಳಸಿಕೊಂಡು ಮತ್ತೆ ವೇಗವಾಗಿ ಕಾಮಗಾರಿ ನಡೆಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮೊದಲಾದವರು ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button