ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ – ಹುಬ್ಬಳ್ಳಿಯಲ್ಲಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರ ಗೃಹ ಕಚೇರಿಯಲ್ಲಿ ಸಚಿವರಾದ ಪ್ರಲ್ಹಾದ್ ಜೋಶಿ ಮತ್ತು ರಾಜ್ಯದ ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ ಅವರು ಶನಿವಾರ ರಾತ್ರಿ ಭೇಟಿ ಮಾಡಿ ಮಾತುಕತೆ ನಡೆಸಿದರು.
ಅವರಿಬ್ಬರ ಮಾತುಕತೆಯ ವಿವರ ಇನ್ನೂ ಲಭ್ಯವಾಗಿಲ್ಲ. ಆದರೆ ಕಳೆದ 2 ತಿಂಗಳಲ್ಲಿ ಅವರಿಬ್ಬರದ್ದು ಇದು ಮೂರನೇ ಭೇಟಿ. ಒಂದು ಬಾರಿ ಹುಬ್ಬಳ್ಳಿಯಲ್ಲೇ ಇದೇ ರೀತಿ ರಾತ್ರಿ ವೇಳೆ ಭೇಟಿಯಾಗಿದ್ದರೆ ಮತ್ತೊಮ್ಮೆ ಬೆಂಗಳೂರಿನ ರಮೇಶ ಜಾರಕಿಹೊಳಿ ಅವರ ಮನೆಗೆ ಜೋಶಿ ತೆರಳಿದ್ದರು.
ಈ ಹಿಂದೆ ಅವರಿಬ್ಬರು ಭೇಟಿಯಾದಾಗ ಹಲವು ರಾಜಕೀಯ ಲೆಕ್ಕಾಚಾರಗಳು, ವದಂತಿಗಳು ಹರಡಿದ್ದವು.
ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಿಸಿ ಪ್ರಹ್ಲಾದ್ ಜೋಶಿ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂಡ್ರಿಸಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ರಮೇಶ ಜಾರಕಿಹೊಳಿ ಪ್ರಹ್ಲಾದ್ ಜೋಶಿ ಅವರನ್ನು ಭೇಟಿಯಾಗಿದ್ದಾರೆ ಎನ್ನುವ ಸುದ್ದಿ ಕೂಡ ಹರಡಿತ್ತು.
ಪ್ರಹ್ಲಾದ್ ಜೋಶಿ ಕೇಂದ್ರದಲ್ಲಿ ಪ್ರಭಾವಿ ಸಚಿವರಾಗಿರುವುದರಿಂದ ರಮೇಶ ಜಾರಕಿಹೊಳಿ ತಮ್ಮ ಜಲಸಂಪನ್ಮೂಲ ಇಲಾಖೆಯ ಕೆಲಸಗಳ ಹಿನ್ನೆಲೆಯಲ್ಲಿ ಭೇಟಿಯಾಗಿದ್ದರೂ ಇರಬಹುದು. ಆದರೆ ರಮೇಶ ಜಾರಕಿಹೊಳಿ ರಾಜ್ಯದಲ್ಲಿ ಬಿಜೆಪಿ ಸರಕಾರ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರಿಂದ ಅವರ ಎಲ್ಲ ವರ್ತನೆಗಳ ಹಿಂದೆ ರಾಜಕೀಯ ಕಣ್ಣು ನೆಟ್ಟಿರುತ್ತದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ