Latest

ಮೂರೂ ಪಕ್ಷಗಳಲ್ಲೀಗ ಸುಮಲತಾ ಸಂಕಷ್ಟ!

 

 

Related Articles

  ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ಇತ್ತೀಚೆಗೆ ನಿಧನರಾದ ಖ್ಯಾತ ಚಿತ್ರನಟ, ಮಾಜಿ ಸಂಸದ, ಮಾಜಿ ಸಚಿವ ಅಂಬರೀಶ್ ಪತ್ನಿ ಸುಮಲತಾ ಈಗ ರಾಜಕೀಯ ಚರ್ಚೆಯ ಕೇಂದ್ರಬಿಂದುವಾಗಿದ್ದಾರೆ. ಮೂರೂ ಪಕ್ಷಗಳು ಸುಮಲತಾ ಮತ್ತು ಅವರ  ಅಭಿಮಾನಿಗಳ ನಡೆಯ ಕುರಿತು ಕುತೂಹಲದಿಂದ ನೋಡುತ್ತಿವೆ.

ಇದಕ್ಕೆ ಎರಡು ಕಾರಣಗಳಿವೆ. ಸುಮಲತಾ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಬೇಕು ಎನ್ನುವ ಒತ್ತಡವನ್ನು ಅವರ ಅಭಿಮಾನಿಗಳು ಹಾಕುತ್ತಿರುವುದು ಒಂದು ಕಾರಣವಾದರೆ, ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆಯಾದರೆ ಮಂಡ್ಯ ಕ್ಷೇತ್ರವನ್ನು ಯಾವ ಪಕ್ಷಕ್ಕೆ ಬಿಟ್ಟುಕೊಡಬೇಕು ಎನ್ನುವ ಗೊಂದಲ ಮತ್ತೊಂದು ಕಾರಣ. ಈ ಗೊಂದಲದ ಮಧ್ಯೆಯೇ ಸುಮಲತಾ ಬಿಜೆಪಿಗೆ ಜಿಗಿದರೆ ಎನ್ನುವ ಆತಂಕವೂ ದೋಸ್ತಿಗಳಲ್ಲಿದೆ. 

ಅಂಬರೀಶ್ ಈ ಹಿಂದೆ ಸ್ಪರ್ಧಿಸಿದ್ದ ಮಂಡ್ಯ ಕ್ಷೇತ್ರದಿಂದ ಸುಮಲತಾ ಸ್ಪರ್ಧಿಸಬೇಕು ಎಂದು ಅವರ ಅಭಿಮಾನಗಳು ನಿರಂತರ ಒತ್ತಡ ಹೇರುತ್ತಿದ್ದಾರೆ. ಆದರೆ ರಾಜಕೀಯಕ್ಕೆ ಬರುವ ಕುರಿತು ತಾವೂ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಸುಮಲತಾ ಹೇಳಿದ್ದಾರೆ. ಹಾಗಂತ ಬರುವುದಿಲ್ಲ ಎಂದೂ ಹೇಳಿಲ್ಲ. 

ಸುಮಲತಾ  ಅಭಿಮಾನಿಗಳ ಒತ್ತಡ ಕಾಂಗ್ರೆಸ್ ನಲ್ಲಿ ತೀವ್ರ ಸಂಕಷ್ಟ ತಂದೊಡ್ಡಿದೆ. ಕಾರಣ, ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಡಲು ಜೆಡಿಎಸ್ ಒಪ್ಪುವ ಸಾಧ್ಯತೆ ಇಲ್ಲ. ಹಾಗಾಗಿ ಸುಮಲತಾಗೆ ಟಿಕೆಟ್ ನೀಡುವುದು ಕಷ್ಟ. ಜೆಡಿಎಸ್ ಟಿಕೆಟ್ ಕೊಡಲು ಸುಮಲತಾ ಜೆಡಿಎಸ್ ಪ್ರಾಥಮಿಕ ಸದಸ್ಯರೂ ಅಲ್ಲ. ಹಾಗೊಂದು ವೇಳೆ ಅವರಿಗೆ ಜೆಡಿಎಸ್ ಟಿಕೆಟ್ ಕೊಟ್ಟರೆ ದೋಸ್ತಿಗಳಲ್ಲಿ ಮತ್ತೊಂದು ಫೈಟ್ ಗೆ ದಾರಿ ಮಾಡಿಕೊಟ್ಟಂತಾಗುತ್ತದೆ. 

ಮಂಡ್ಯ ಕ್ಷೇತ್ರ ಯಾವ ಪಕ್ಷಕ್ಕೆ ಎನ್ನುವ ಕುರಿತಾಗಲಿ, ಸುಮಲತಾಗೆ ಟಿಕೆಟ್ ಕೊಡುವ ಕುರಿತಾಗಲಿ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಜೆಡಿಎಸ್ ಹೇಳಿದರೆ, ಸುಮಲತಾ ಜೆಡಿಎಸ್ ನ ಪ್ರಾಥಮಿಕ ಸದಸ್ಯರೂ ಅಲ್ಲ, ಹಾಗಾಗಿ ಅವರಿಗೆ ಜೆಡಿಎಸ್ ಟಿಕೆಟ್ ಕೊಡುವ ಪ್ರಶ್ನೆ ಇಲ್ಲ ಎಂದು ಜೆಡಿಎಸ್ ಹೇಳಿದೆ. ಆದರೆ ಸುಮಲತಾ ಅಭಿಮಾನಿಗಳು ಮಾತ್ರ ನಿರಂತರವಾಗಿ ಒತ್ತಡ ಹೇರುತ್ತಲೇ ಇದ್ದಾರೆ.

ಈ ಎಲ್ಲ ಬೆಳವಣಿಗೆಯನ್ನು ಬಿಜೆಪಿ ಸೂಕ್ಷ್ಮವಾಗಿ ನೋಡುತ್ತಿದ್ದು, ಸುಮಲತಾ ಪಕ್ಷಕ್ಕೆ ಬಂದರೆ ಟಿಕೆಟ್ ಕೊಡುವುದು ಖಚಿತವಾಗಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಮಂಡ್ಯ ರಾಜಕೀಯ ಬೆಳವಣಿಗೆ ತೀವ್ರ ಕುತೂಹಲ ಮೂಡಿಸಿದ್ದು, ಸಮ್ಮಿಶ್ರ ಸರಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button