Latest

ಜಿಐಟಿಯ ಎನ್‌ಪಿಟಿಇಎಲ್ ಅಧ್ಯಯನ ಕೇಂದ್ರಕ್ಕೆ ’ಎ’ ಗ್ರೇಡ್ ಮಾನ್ಯತೆ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ನಗರದ ಕೆಎಲ್‌ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ಎನ್‌ಪಿಟಿಇಎಲ್‌ನ ಸ್ಥಳೀಯ ಅಧ್ಯಯನ ಕೇಂದ್ರಕ್ಕೆ ’ಎ’ ಗ್ರೇಡ್ ಮಾನ್ಯತೆ ಸಿಕ್ಕಿದ್ದು, ದೇಶದಲ್ಲಿರುವ ಸುಮಾರು 2400 ಸ್ಥಳೀಯ ಕೇಂದ್ರಗಳ ಪೈಕಿ ಶ್ರೇಷ್ಠ 100 ಕೇಂದ್ರಗಳಲ್ಲಿ ಜಿಐಟಿ ಸ್ಥಾನ ಪಡೆದುಕೊಂಡಿದೆ.

’ಎ’ ಗ್ರೇಡ್ ಮಾನ್ಯತೆ ಸಿಕ್ಕ ಹಿನ್ನೆಲೆಯಲ್ಲಿ ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಜಿಐಟಿ ಅಧ್ಯಯನ ಕೇಂದ್ರದ ಸಂಯೋಜಕ ಪ್ರೊ. ಜಯಂತ ಕಿತ್ತೂರ ಪ್ರಮಾಣ ಪತ್ರ ಸ್ವೀಕರಿಸಿದರು.

ಜನವರಿಯಿಂದ ಏಪ್ರಿಲ್ ಮತ್ತು ಜುಲೈನಿಂದ ಅಕ್ಟೋಬರ್-2018 ರ ಅವಧಿಯಲ್ಲಿ ವಿವಿಧ ಮಾನದಂಡಗಳನ್ನು ಆಧರಿಸಿ ಸ್ಥಳೀಯ ಅಧ್ಯಾಯಗಳ ರೇಟಿಂಗ್ ಅನ್ನು ಇತ್ತೀಚೆಗೆ ಎನ್‌ಪಿಟಿಇಎಲ್ ಪ್ರಕಟಿಸಿತ್ತು.

ಜಿಐಟಿ ಕೇಂದ್ರದಿಂದ ಸುಮಾರು 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಪರೀಕ್ಷೆಗಳಲ್ಲಿ ಭಾಗವಹಿಸಿ ಎನ್‌ಪಿಟಿಇಎಲ್‌ನ ಗೋಲ್ಡ್ ಹಾಗೂ ಎಲೈಟ ಸ್ಥಾನಗಳೊಂದಿಗೆ ಪ್ರಮಾಣ ಪತ್ರಗಳನ್ನು ಪಡೆದುಕೊಂಡಿದ್ದಾರೆ.

ನ್ಯಾಷನಲ್ ಪ್ರೊಗ್ರಾಂ ಆನ್ ಟೆಕ್ನಾಲಜಿ ಎನ್ಹಾನ್ಸಡ್ ಲರ್ನಿಂಗ್ ಇದು(ಎನ್‌ಪಿ ಟಿಇಎಲ್) ಭಾರತ ಸರ್ಕಾರದ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಮಂತ್ರಾಲಯದ ಒಂದು ಯೋಜನೆಯಾಗಿದೆ. ಭಾರತೀಯ ತಾಂತ್ರಿಕ ಸಂಸ್ಥೆಗಳು (ಐಐಟಿ), ಭಾರತೀಯ ವಿಜ್ಞಾನ ಮಂದಿರ (ಐಐಎಸ್ಸಿ) ಹಾಗೂ ಭಾರತೀಯ ವ್ಯವಸ್ಥಾಪನಾ ಸಂಸ್ಥೆಗಳಲ್ಲಿ ಬೋಧನೆ ಮಾಡುತ್ತಿರುವ ನುರಿತ ತಜ್ಞರಿಂದ ಗುಣಮಟ್ಟದ ಶಿಕ್ಷಣ ಒದಗಿಸಲು ಪ್ರಾರಂಭಿಸಿದ ಒಂದು ವೇದಿಕೆಯಾಗಿದೆ. ವಿಜ್ಞಾನ, ತಂತ್ರಜ್ಞಾನ, ಮಾನವಶಾಸ್ತ್ರ ಮತ್ತು ಅರ್ಥಶಾಸ್ತ್ರಗಳನ್ನು ಒಳಗೊಂಡ ಸುಮಾರು 300 ಕ್ಕೂ ಅಧಿಕ ವಿಷಯಗಳನ್ನು ಕಲಿಯಲು ಹಾಗೂ ನಂತರ ಪರೀಕ್ಷೆ ಎದುರಿಸಿ ಅದಕ್ಕೆ ಪ್ರಮಾಣ ಪತ್ರ ಪಡೆಯಲು ಇಲ್ಲಿ ಅವಕಾಶವಿದೆ. ಇದೆಲ್ಲವೂ ಆನ್‌ಲೈನ್ ಇದ್ದು ಸಂಪೂರ್ಣ ಉಚಿತವಾಗಿದೆ.

ಕೆಎಲ್‌ಎಸ್ ಚೇರಮನ್ ಎಂ.ಆರ್. ಕುಲಕರ್ಣಿ, ಜಿಐಟಿ ಆಡಳಿತ ಮಂಡಳಿ ಅಧ್ಯಕ್ಷ ಯು.ಎನ್. ಕಾಲಕುಂದ್ರಿಕರ, ಪ್ರಾಚಾರ್ಯ ಡಾ. ಎ.ಎಸ್. ದೇಶಪಾಂಡೆ, ಕೇಂದ್ರದ ಸಂಯೋಜನಾಧಿಕಾರಿ ಡಾ. ಜಯಂತ ಕಿತ್ತೂರ ಹಾಗೂ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.

 

(ಪ್ರಗತಿವಾಹಿನಿ ಸುದ್ದಿಗಳನ್ನು ಪರಿಚಿತರಿಗೆ ಶೇರ್ ಮಾಡಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button