Latest

ಎಸ್.ವಿ.ರಂಗನಾಥ ಅವರನ್ನು ಹುದ್ದೆಯಿಂದ ಮುಕ್ತಗೊಳಿಸಿ – ಹೊರಟ್ಟಿ ಪತ್ರ

ಇದು ಭ್ರಷ್ಟಾಚಾರದ ಪ್ರಶ್ನೆಯಯಲ್ಲ, ಬದಲಾಗಿ ಇದೊಂದು ಶಿಷ್ಟಾಚಾರದ ಪ್ರಶ್ನೆ

 

ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ –  ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ಉಪಾಧ್ಯಕ್ಷ ಹುದ್ದೆಯಲ್ಲಿರುವ  ನಿವೃತ್ತ ಐ.ಎ.ಎಸ್. ಅಧಿಕಾರಿ ಎಸ್.ವ್ಹಿ.ರಂಗನಾಥ ಇವರನ್ನು  ಆ ಹುದ್ದೆಯಿಂದ ಮುಕ್ತಗೊಳಿಸಬೇಕೆಂದು ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಆಗ್ರಹಿಸಿದ್ದಾರೆ.

ಈ ಕುರಿತು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರಿಗೆ ಹೊರಟ್ಟಿ ಪತ್ರ ಬರೆದಿದ್ದಾರೆ.

ರಾಜ್ಯ ಸರಕಾರದ ಹಿರಿಯ ಐ.ಎ.ಎಸ್. ಅಧಿಕಾರಗಣದಲ್ಲಿ ತಮ್ಮ ದಕ್ಷತೆ, ಪ್ರಾಮಾಣಿಕತೆ, ಸರಳತೆಯಿಂದಾಗಿಯೇ ಗೌರವಾನ್ವಿತರೆನಿಸಿರುವ ಮಾಜಿ ಮುಖ್ಯ ಕಾರ್ಯದರ್ಶಿ ಮತ್ತು ನಿವೃತ್ತ ಐ.ಎ.ಎಸ್. ಅಧಿಕಾರಿ ಎಸ್.ವ್ಹಿ.ರಂಗನಾಥರವರನ್ನು ಅವರ ಪ್ರಸಕ್ತ ಹುದ್ದೆಯ ಅವಧಿ ತೀರಿದ ನಂತರವೂ ಮುಂದುವರಿಸಿರುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಬೇಕಾಗಿ ಬಂದಿರುವುದು ವಿಷಾದಕರ ಸಂಗತಿ ಎಂದು ಹೇಳಿದ್ದಾರೆ.

ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ಉಪಾಧ್ಯಕ್ಷ ಹುದ್ದೆಯಲ್ಲಿರುವಾಗಲೇ  ರಂಗನಾಥರವರು ಸನ್ ೨೦೧೯ನೇ ವರ್ಷದ ಜುಲೈ ೩೧ ರಂದು ಕೆಫೆ ಕಾಫೀಡೇ ಎಂಬ ಖಾಸಗಿ ಕಾರ್ಪೋರೇಟ್ ಕಂಪನಿಯ ಚೇರಮನ್ನರಾಗಿ ನೇಮಕಗೊಂಡು ಆಗಸ್ಟ್ ೯ ರಂದು ಆ ಪದವಿಯ ಅಧಿಕಾರ ವಹಿಸಿಕೊಂಡ ವಿಷಯ ತಮಗೆ ತಿಳಿದಿರಬಹುದು. ಕಾಫೀಡೇ ಕಂಪನಿಯು ಗುರುತರವಾದ ಆರ್ಥಿಕ ಅಪರಾಧವೆಸಗಿರುವ ಹಿನ್ನೆಲೆಯಿಂದಾಗಿಯೇ ಅದರ ಸಂಸ್ಥಾಪಕ ಅಧ್ಯಕ್ಷರು ಮಂಗಳೂರಿನ ಸಮೀಪದ ನೇತ್ರಾವತಿ ನದಿ ಸೇತುವೆಯಿಂದ ಹೊಳೆಗೆ ಹಾರಿ ಆತ್ಮಾರ್ಪಣೆ ಮಾಡಿಕೊಂಡ ದುರಂತವೂ ಇಡೀ ರಾಷ್ಟ್ರದ ಜನಮಾನಸವನ್ನು ಕಲಕಿದ ವಿಚಾರವೂ ಚಿರಪರಿಚಿತವೇ ಆಗಿದೆ.

ಹೀಗೊಂದು ತೀವ್ರತಮ ಆರ್ಥಿಕ ಅಪರಾಧಗಳ ಹಿನ್ನೆಲೆಯಿಂದಾಗಿ ವಿವಾದಕ್ಕೊಳಗಾದ ಹಾಗೂ ಭಾರತ ಸರಕಾರದ ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸುತ್ತಿರುವ ಒಂದು ಖಾಸಗಿ ಕಂಪನಿಯ ಅಧ್ಯಕ್ಷತೆಗೆ ಒಪ್ಪಿಕೊಳ್ಳುವ ಮುನ್ನ  ಎಸ್.ವ್ಹಿ.ರಂಗನಾಥರವರು ತಾವು ಹಿಂದಿನ ನಾಲ್ಕು ವರ್ಷಗಳಿಂದಲೂ ಅಲಂಕರಿಸಿದ್ದ ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ಉಪಾಧ್ಯಕ್ಷ ಪದವಿಯನ್ನು ತ್ಯಾಗ ಮಾಡುವ ಅಥವಾ ಶಿಕ್ಷಣ ಕ್ಷೇತ್ರದ ಪಾವಿತ್ರ್ಯತೆ ಹಾಗೂ ಅನನ್ಯತೆಯ ದೃಷ್ಟಿಯಿಂದ ಆ ವಿವಾದಗ್ರಸ್ತ ಕಂಪನಿಯ ಚೇರಮನ್ ಹುದ್ದೆಯನ್ನು ನಿರಾಕರಿಸಬಹುದಿತ್ತು. ಅವರು ಇಂತಹ ಸೂಕ್ಷ್ಮ ಸಂಗತಿಗಳನ್ನು ಅರಿತವರಾಗಿದ್ದರಿಂದ ಸರಕಾರಿ ಹಾಗೂ ಖಾಸಗಿ ಕಾರ್ಪೋರೇಟ್ ಕಂಪನಿಯೊಂದರ ಉನ್ನತ ಹುದ್ದೆಗಳೆರಡರಲ್ಲಿಯೂ ಮುಂದುವರಿದಿರುವುದು ರಾಜ್ಯದಲ್ಲಿ ಅನೇಕ ಜನ ನನ್ನಂತೆ  ರಂಗನಾಥರ ಬಗ್ಗೆ ವಿಶೇಷ ಗೌರವವಿಟ್ಟುಕೊಡಿದ್ದಾರೆ ಮತ್ತು ನನ್ನಂತಹ ಓರ್ವ ಶಿಕ್ಷಕ ಪ್ರತಿನಿಧಿ ಶಾಸಕ ಮತ್ತು ಮಾಜಿ ಶಿಕ್ಷಣ ಸಚಿವನಾದ ವ್ಯಕ್ತಿಗೆ ಸ್ವಲ್ಪ ಬೇಸರವನ್ನುಂಟು ಮಾಡಿದೆ.

ಎಸ್.ವ್ಹಿ.ರಂಗನಾಥರ ಬಗ್ಗೆ ಇದು ಭ್ರಷ್ಟಾಚಾರದ ಪ್ರಶ್ನೆಯಯಲ್ಲ, ಬದಲಾಗಿ ಇದೊಂದು ಶಿಷ್ಟಾಚಾರದ ಪ್ರಶ್ನೆಯಾಗಿ ಬಿಟ್ಟಿದೆ. ಸಾರ್ವಜನಿಕ ಹಿತಾಸಕ್ತಿ ಮತ್ತು ಖಾಸಗಿ ಹಿತಾಸಕ್ತಿಗಳ ನಡುವಿನ ಸಂಘರ್ಷಕ್ಕೆ ಕಾರಣರಾದ ಹಿರಿಯ ಅಧಿಕಾರಿ  ಎಸ್.ವ್ಹಿ.ರಂಗನಾಥರವರ ಬಗ್ಗೆ ಮಾಧ್ಯಮಗಳಲ್ಲಿ ಕೇಳಿ ಬಂದಿದೆ. ಆದ್ದರಿಂದ ಅವರ ಘನತೆ ಮತ್ತು ಗೌರವಗಳಿಗೆ ಚ್ಯುತಿ ಬರಬಾರದೆಂಬ ಒಂದೇ ಒಂದು ಉದ್ದೇಶದಿಂದ ಈ ಸಮಸ್ಯೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಅವರನ್ನು ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ಉಪಾಧ್ಯಕ್ಷ ಹುದ್ದೆಯಿಂದ ಮುಕ್ತಗೊಳಿಸುವುದು ಸೂಕ್ತವೆನಿಸುತ್ತದೆ ಎಂದು  ಬಸವರಾಜ ಹೊರಟ್ಟಿ  ಪತ್ರ ಬರೆದಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button