ಕೆಎಲ್ಇ ಆಸ್ಪತ್ರೆಯಿಂದ ಯಿಂದ ಪೋಸ್ಟ್ ಕೋವಿಡ್ ಕೇರ್ ಮತ್ತು ರಿಹೆಬಿಲೈಟೇಶನ್ ಸೆಂಟರ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ನೂತನವಾಗಿ ಪ್ರಾರಂಭಿಸಲಾದ ಕೋವಿಡ್ -೧೯ ಸೊಂಕಿಗೆ ಒಳಗಾಗಿ ಗುಣಮುಖರಾದವರಲ್ಲಿ ಬೇರೆ ತೊಂದರೆಗಳು ಕಂಡುಬಂದರೆ ಅವರಿಗೆ ಸಮಗ್ರವಾದ ತಪಾಸಣೆ ಹಾಗೂ ಚಿಕಿತ್ಸೆ ನೀಡಲು ಪ್ರತ್ಯೇಕ(ಆರೈಕೆ ಕೇಂದ್ರ) ಘಟಕ (ಪೋಸ್ಟ್ ಕೋವಿಡ್ ಕೇರ್ ಮತ್ತು ರಿಹೆಬಿಲೈಟೇಶನ್ ಸೆಂಟರ್)ವನ್ನು ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಜಗತ್ತಿನಾದ್ಯಂತ ಜನರಲ್ಲಿ ತೀವ್ರ ಭಯವನ್ನು ಹುಟ್ಟಿಸಿ ಸಾವಿಗೆ ಕಾರಣವಾಗುತ್ತಿರುವ ಸಾಂಕ್ರಾಮಿಕ ರೋಗವಾದ ಕೊರೊನಾ ವೈರಸ್ ಕೋವಿಡ್ -೧೯ ಅನ್ನು ಈ ಭಾಗದಲ್ಲಿ ಎದುರಿಸುವಲ್ಲಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಜಿಲ್ಲಾಡಳಿತೊಂದಿಗೆ ಕೈಜೋಡಿಸಿ ಕೋವಿಡ್ ರಹಿತ ರೋಗಿಗಳಿಗೆ ಚಿಕಿತ್ಸೆ ನೀಡುತ್ತ ಸ್ವಾಸ್ಥ್ಯ ಸಮಾಜ ನಿರ‍್ಮಿಸುವಲ್ಲಿ ತನ್ನದೇ ಆದ ಕೊಡುಗೆ ನೀಡಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗ ಉಲ್ಬಣಗೊಂಡಾಗ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ವ್ಯವಸ್ಥೆಯನ್ನು ಮಾಡಿಕೊಂಡು ನೂತನ ಕಟ್ಟಡವನ್ನು ಅದಕ್ಕಾಗಿಯೇ ಮೀಸಲಿಟ್ಟು, ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಅಲ್ಲದೇ ಕೋವಿಡ್ ರಹಿತ ಸಾಮಾನ್ಯ ರೋಗಿಗಳಿಗೆ ಮುಖ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತ ಯಾವುದೇ ತೊಂದರೆ ಬಾರದಂತೆ ಅಗತ್ಯ ಕ್ರಮಕೈಗೊಂಡಿರುವದು ಅತ್ಯಂತ ಶ್ಲಾಘನೀಯ. ಸಂಸ್ಥೆಯ ಕಾರ‍್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ಸದಾ ಜಿಲ್ಲಾಡಳಿತಕ್ಕೆ ಸಹಕರಿಸುತ್ತ ವೈದ್ಯಕೀಯ ಸೇವೆಗೆ ನಮ್ಮೊಂದಿಗೆ ಕೈಜೊಡಿಸುತ್ತಾರೆ ಎಂದು ತಿಳಿಸಿದರು.
ಸಂಸ್ಥೆಯ ಕಾರ‍್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರು ಮಾತನಾಡಿ, ಕೊವಿಡ್ -೧೯ ಈ ಗಂಭೀರ ಪರಿಸ್ಥಿತಿಯಲ್ಲಿ ಯಾವುದೇ ರೀತಿಯ ಆರೋಗ್ಯ ತೊಂದರೆ ಉಂಟಾಗದಂತೆ ಅನೇಕ ಕ್ರಮಗಳನ್ನು ಕೈಗೊಂಡು, ಪ್ರತ್ಯೇಕ ಘಟಕವನ್ನು ಸ್ಥಾಪಿಸಿ ಸುಮಾರು ೧೩೦೦ಕ್ಕೂ ಅಧಿಕ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಅಲ್ಲದೇ ಹೆರಿಗೆ, ಹೃದಯ ಶಸ್ತ್ರಚಿಕಿತ್ಸೆ ಸೇರಿದಂತೆ ಅನೇಕ ಶಸ್ತ್ರಚಿಕಿತ್ಸೆ ಹಾಗೂ ಚಿಕಿತ್ಸೆಯನ್ನು ನೀಡಲಾಗಿದೆ. ಈ ಭಾಗದ ರೋಗಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಗತ್ಯ ವೈದ್ಯಕೀಯ ಸೇವೆಯನ್ನು ಕಲ್ಪಿಸಲು ಸದಾ ಕಾರ‍್ಯಪ್ರವೃತ್ತವಾಗಿದ್ದೇವೆ. ಸಾಮಾನ್ಯ ರೋಗಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಹಜವಾಗಿ ಎಲ್ಲ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಕೆಎಲ್‌ಇ ಅಕಾಡೆಮಿ ಆಫ್ ಹೈಯರ ಎಜ್ಯುಕೇಶನ್ ಆಂಡ ರಿಸರ್ಚನ ಕುಲಪತಿ ಡಾ. ವಿವೇಕ ಸಾವೋಜಿ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ‍್ಯರಾದ ಡಾ. ಎನ್ ಎಸ್ ಮಹಾಂತಶೆಟ್ಟಿ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ, ಕುಲಸಚಿವ ಡಾ. ವಿ ಎ ಕೋಠಿವಾಲೆ, ಡಾ. ಹೆಚ್ ಬಿ ರಾಜಶೇಖರ, ಡಾ. ವಿ ಡಿ ಪಾಟೀಲ, ಡಾ. ಆರ್ ಎಸ್ ಮುಧೋಳ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ