Kannada NewsKarnataka NewsLatest

ಸುರೇಶ ಅಂಗಡಿ ಸಮಗ್ರ ಅಭಿವೃದ್ಧಿಯ ದೃಷ್ಟಿಕೋನ ಹೊಂದಿದ್ದರು – ಬಾಲಚಂದ್ರ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಸಮಗ್ರ ಅಭಿವೃದ್ಧಿಯ ದೃಷ್ಟಿಕೋನದಿಂದ ಸಚಿವರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುರೇಶ ಅಂಗಡಿ ಅವರ ನಿಧನ ನಿಜಕ್ಕೂ ಆಘಾತಕಾರಿಯಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ದಿಗ್ಭ್ರಮೆ ವ್ಯಕ್ತಪಡಿಸಿದರು.
ಗುರುವಾರದಂದು ಕೆಎಂಎಫ್ ಪ್ರಧಾನ ಕಛೇರಿಯಲ್ಲಿ ಆಡಳಿತ ಮಂಡಳಿಯ ಸಭೆಗೂ ಮುನ್ನ, ನಿನ್ನೆ ನಿಧನರಾದ ಕೇಂದ್ರ ಸಚಿವ ಸುರೇಶ ಅಂಗಡಿ ಅವರಿಗೆ ಶೃದ್ಧಾಂಜಲಿ ಸಲ್ಲಿಸಿ ಮಾತನಾಡಿದ ಅವರು, ಅಂಗಡಿ ಅವರಂತಹ ಸರಳ ಸಜ್ಜನಿಕೆ ವ್ಯಕ್ತಿತ್ವದ ರಾಜಕಾರಣಿಯನ್ನು ಕಳೆದುಕೊಂಡಿರುವುದು ನಮಗೆಲ್ಲ ನೋವಿನ ಸಂಗತಿಯಾಗಿದೆ ಎಂದು ತಿಳಿಸಿದರು.
ಬೆಳಗಾವಿ ಲೋಕಸಭಾ ಕ್ಷೇತ್ರದ ಸದಸ್ಯರಾಗಿ, ಕೇಂದ್ರ ಸಚಿವರಾಗಿ ಜಿಲ್ಲೆ ಮತ್ತು ರಾಜ್ಯಕ್ಕೆ ಮಹತ್ತರ ಕೊಡುಗೆ ನೀಡಿದ್ದರು. ಸಮಗ್ರ ಅಭಿವೃದ್ಧಿಯೇ ಅವರ ಪರಮ ಗುರಿಯಾಗಿತ್ತು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಕೊರೋನಾದಂತಹ ಸೋಂಕಿಗೆ ಅವರು ಬಲಿಯಾಗುತ್ತಾರೆಂದು ಯಾರೂ ಕೂಡ ಊಹಿಸಿರಲಿಲ್ಲ. ಅವರು ನಮ್ಮನ್ನಗಲಿದ್ದಾರೆ ಎಂಬುದು ಕೂಡ ಇದುವರೆಗೂ ನಮಗೆ ನಂಬಲು ಸಹ ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಅಂಗಡಿ ಅವರ ಅಗಲಿಕೆಯಿಂದ ಬೆಳಗಾವಿ ಜಿಲ್ಲೆಯೂ ಸೇರಿದಂತೆ ರಾಜ್ಯ ಅನಾಥವಾಗಿದೆ. ಅವರದು ಮಗುವಿನಂತಹ ಮನಸ್ಸು. ಯಾರ ಮನಸ್ಸನ್ನು ನೋಯಿಸಿದ ಉದಾಹರಣೆಗಳಿಲ್ಲ. 30 ವರ್ಷಗಳ ಅವಧಿಯಲ್ಲಿ ಬಿಜೆಪಿಯ ನಿಷ್ಠಾವಂತ ಸೇವಕರಾಗಿ ಕಾರ್ಯನಿರ್ವಹಿಸಿ ಜನ ಮನ್ನಣೆ ಗಳಿಸಿದ್ದರು. ಅವರ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಸಂಸದರಾಗಿ, ಸಚಿವರಾಗಿ ರಾಜ್ಯಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಅಭಿವೃದ್ಧಿಯ ಕನಸುಗಳನ್ನು ಕಟ್ಟಿಕೊಂಡು ಆ ದಿಸೆಯಲ್ಲಿ ಕೆಲಸ ಮಾಡಿದ್ದರು. ಇನ್ನೂ ಸಾಕಷ್ಟು ಮಹತ್ವಾಕಾಂಕ್ಷೆ ಇಟ್ಟುಕೊಂಡಿದ್ದ ಅವರು ಇಷ್ಟು ಬೇಗನೇ ವಿಧಿವಶರಾಗುತ್ತಾರೆಂದು ಭಾವಿಸಿರಲಿಲ್ಲ. ಪರಮಾತ್ಮನು ಅವರ ದಿವ್ಯಾತ್ಮಕ್ಕೆ ಚಿರಶಾಂತಿ ನೀಡಲಿ. ಅವರ ಕುಟುಂಬ ವರ್ಗಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪರಮಾತ್ಮನಲ್ಲಿ ಪ್ರಾರ್ಥಿಸುವುದಾಗಿ ಅವರು ಹೇಳಿದರು.
ಕೆಎಂಎಫ್ ಆಡಳಿತ ಮಂಡಳಿ ನಿರ್ದೇಶಕರಾದ ಮಾಜಿ ಸಚಿವ ಹೆಚ್.ಡಿ ರೇವಣ್ಣ, ಶಾಸಕ ಭೀಮಾ ನಾಯಿಕ, ದಿವಾಕರ ಶೆಟ್ಟಿ, ಶ್ರೀಶೈಲ ಪಾಟೀಲ, ಆನಂದಕುಮಾರ, ಸಿ.ವೀರಭದ್ರಬಾಬು, ಮಾರುತಿ ಕಾಶಂಪೂರ, ಕುಮಾರ, ಹಿರೇಗೌಡರ, ಅಮರನಾಥ ಜಾರಕಿಹೊಳಿ, ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ, ಮತ್ತೀತರರು ಶೃದ್ಧಾಂಜಲಿ ಸಭೆಯಲ್ಲಿ ಹಾಜರಿದ್ದರು.
ದಿ. ಸುರೇಶ ಅಂಗಡಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಒಂದು ನಿಮಿಷ ಮೌನಾಚರಣೆ ಕೈಗೊಳ್ಳಲಾಯಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button