ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ವಿಚಾರಣೆ ಮುಗಿಸಿ ಹೊರ ಬಂದ ನಿರೂಪಕಿ ಅನುಶ್ರೀ, ಡ್ರಗ್ಸ್ ಮಾಫಿಯಾ ರಾಜ್ಯಕ್ಕೆ ಅಂಟಿರುವ ಭೂತ. ಆ ಭೂತವನ್ನು ತೊಡೆದು ಹಾಕಲು ಪೊಲೀಸರು ಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಡ್ರಗ್ಸ್ ಪ್ರಕರಣ ಸಂಬಂಧ ಮಂಗಳೂರು ಸಿಸಿಬಿ ಪೊಲೀಸರು ಅನುಶ್ರೀ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಪಣಂಬೂರಿನಲ್ಲಿರುವ ಸಿಸಿಬಿ ಕಚೇರಿಗೆ ಹಾಜರಾಗಿದ್ದ ಅನುಶ್ರೀ ಅವರನ್ನು ಡಿಸಿಪಿ ವಿನಯ್ ಗಾಂವ್ಕರ್ ನೇತೃತ್ವದಲ್ಲಿ ಸತತ ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು. ಇದೀಗ
ವಿಚಾರಣೆ ಬಳಿಕ ಹೊರಬಂದ ಅನುಶ್ರೀ, ಡ್ರಗ್ಸ್ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಆದರೆ ಇದು ರಾಜ್ಯಕ್ಕೆ ಅಂಟಿರುವ ಭೂತ. ಈ ಭೂತವನ್ನು ಹೋಗಲಾಡಿಸಲು ಪೊಲೀಸರು ಯತ್ನಿಸುತ್ತಿದ್ದಾರೆ. ಪೊಲೀಸರ ತನಿಖೆಗೆ ನಾನು ಸಹಕರಿಸುತ್ತೇನೆ ಎಂದರು.
ಇನ್ನು ಪ್ರಕರಣದಲ್ಲಿ ಬಂಧಕ್ಕೀಡಾಗಿರುವ ತರುಣ್ ರಾಜ್ ನನಗೆ 12 ವರ್ಷಗಳ ಹಿಂದಿನ ಪರಿಚಯ. ಆತ ನನಗೆ ಡಾನ್ಸ್ ಕೊರಿಯೋಗ್ರಾಫರ್ ಆಗಿದ್ದ. ಆದರೆ ಆತನ ವ್ಯವಹಾರಗಳ ಬಗ್ಗೆ ನನಗೆ ಮಾಹಿತಿ ಇಲ್ಲ. ಸಿಸಿಬಿ ಕೇಳಿರುವ ಎಲ್ಲಾ ಪ್ರಶ್ನೆಗೆ ಉತ್ತರಿಸಿದ್ದೇನೆ. ಮತ್ತೆ ವಿಚಾರಣೆಗೆ ಕರೆದರೆ ಬರಲು ಸಿದ್ಧ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ