ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಅ.15ರಿಂದ ಶಾಲೆ-ಕಾಲೇಜುಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿರುವ ಬೆನ್ನಲ್ಲೇ ಶಾಲೆ ಆರಂಭದ ಬಗ್ಗೆ ರಾಜ್ಯದಲ್ಲಿ ಶುರುವಾಗಿದ್ದ ಗೊಂದಲಗಳ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮತ್ತೆ ತೆರೆ ಎಳೆದಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅವರು, ಮಕ್ಕಳ ಆರೋಗ್ಯ ಮುಖ್ಯವಾಗಿರುವುದರಿಂದ ಸಧ್ಯಕ್ಕೆ ತರಾತುರಿಯಲ್ಲಿ ಶಾಲೆ ಆರಂಭಿಸುವುದಿಲ್ಲ. ಶಾಲೆ ಆರಂಭ ಮಾಡುವುದು ಪ್ರತಿಷ್ಠೆಯಾಗಬಾರದು. ಮಕ್ಕಳ ಹಾಗೂ ಪೋಷಕರ ಆತಂಕ ಅರ್ಥಮಾಡಿಕೊಳ್ಳಬೇಕು. ಹಾಗಾಗಿ ಸಮಯ ನೀಡಿ ಶಾಲೆ ಆರಂಭಿಸುವ ಬಗ್ಗೆ ನಿರ್ಧರಿಸಲಾಗುವುದು. ಅಕ್ಟೋಬರ್ 2 ನೇ ವಾರದ ಬಳಿಕ ನಿರ್ಧಾರ ತಿಳಿಸುತ್ತೇವೆ ಎಂದರು.
ಅ.15ರಿಂದ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಶಾಲೆ ತೆರೆಯಬಹುದು. ಹಾಜರಾತಿ ಕಡ್ಡಾಯವಲ್ಲ. ಆದರೆ ಈ ಬಗ್ಗೆ ಶಿಕ್ಷಣ ಇಲಾಖೆಗಳ ಜೊತೆ ಚರ್ಚಿಸಿ ನಿರ್ಧರಿಸುವಂತೆ ಕೇಂದ್ರ ಸರ್ಕಾರ ತಿಳಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತ್ತೆ ಗೊಂದಲ ಆರಂಭವಾಗಿತ್ತು. ಇದೀಗ ಸಚಿವ ಸುರೇಶ್ ಕುಮಾರ್ ಸ್ಪಷ್ಟಣೆ ನೀಡಿದ್ದು, ಪೋಷಕರ ಜೊತೆ ಪ್ರತಿದಿನ ಚರ್ಚೆ ನಡೆಸಿದ್ದೇನೆ. ಸಧ್ಯಕ್ಕೆ ರಾಜ್ಯದಲ್ಲಿ ಶಾಲೆ ತೆರೆಯುವ ಪರಿಸ್ಥಿತಿ ಇಲ್ಲ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸಧ್ಯಕ್ಕೆ ಶಾಲೆಗಳು ಆರಂಭವಾಗುವುದುಲ್ಲ ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ