Kannada NewsLatest

ಗಾಂಧಿ ಕೊಂದ ವ್ಯಕ್ತಿಯೇ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರಿಗೆ ಆರಾಧ್ಯ ದೈವ – ಸಿದ್ದರಾಮಯ್ಯ

ಪ್ರಗತಿವಾಹಿನಿ ಸುದ್ದಿ, ಘಟಪ್ರಭಾ : ಕಾಂಗ್ರೆಸ್ ಪಕ್ಷ ಸ್ಥಾಪನೆಯಾಗಿರುವುದೆ ಮಹಾತ್ಮಾ ಗಾಂಧಿಜೀಯವರ ತತ್ವ ಆದರ್ಶಗಳ ಆಧಾರದ ಮೇಲೆ, ಆದರೆ ಮತಾಂಧರು ಗಾಂಧೀಜಿಯವರನ್ನು ಕೊಂದು ಹಾಕಿದರು. ಕೊಂದ ವ್ಯಕ್ತಿಯೇ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರಿಗೆ ಆರಾಧ್ಯ ದೈವ ಮತ್ತು ಮಹಾತ್ಮಾ. ಆದರೆ ನಮಗೆಲ್ಲಾ ಗಾಂಧೀಜೀ ಮಹಾತ್ಮನಾಗಿ ಕಾಣುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅವರು ಶುಕ್ರವಾರ ಗೋಕಾಕ ತಾಲೂಕಿನ ಘಟಪ್ರಭಾ ಪಟ್ಟಣದ ಡಾ. ನಾ.ಸು.ಹರ್ಡಿಕರ್ ರಾಷ್ಟ್ರೀಯ ತರಬೇತಿ ಅಕಾಡೆಮಿಯ ಕಾಂಗ್ರೆಸ್ ಸೇವಾದಳ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರಪಿತ ಮಹಾತ್ಮಾ ಗಾಂಧಿಜೀ ಹಾಗೂ ಲಾಲ್ ಬಹುದ್ದೂರ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾತ್ತಿದ್ದರು.

ಬಿಜೆಪಿಯವರದು ಸ್ವಾತಂತ್ರ ಸಂಗ್ರಾಮದಲ್ಲಿ ತ್ಯಾಗ ಬಲಿದಾನದ ಏನೂ ಪಾತ್ರವಿಲ್ಲ. ಅವರದು ಕೇವಲ ಜಾತಿ ಮಾಡುವುದು, ಸಮಾಜ ಒಡೆಯುವುದು, ಕೋಮುವಾದ ಮಾಡುವುದು ಮತ್ತು ಹಿಂದೂ-ಮುಸ್ಲಿಂರ ಮಧ್ಯೆ ಬೆಂಕಿ ಹಚ್ಚುವುದೆ ಇವರ ಕೆಲಸವೆಂದು ಇದೇ ಸಂದರ್ಭದಲ್ಲಿ ಹೇಳಿದರು.
ಸಮಾರಂಭದ ಪ್ರಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ, ದೇಶದ ಇತಿಹಾಸ, ಸ್ವಾತಂತ್ರ್ಯ ಪೂರ್ವ ಕಾಂಗ್ರೆಸ್ ನೀಡಿದ ಕೊಡುಗೆ ಬಗ್ಗೆ ಸೇವಾ ದಳ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಅರಿತುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಈ ಕೇಂದ್ರವು ರಾಷ್ಟ್ರಮಟ್ಟದ ತರಬೇತಿ ಕೇಂದ್ರವಾಗಿ ಹೊರಹೊಮ್ಮಲಿದೆ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ ಮಾತನಾಡಿ, ಹಿಂದೂಸ್ತಾನ ಸೇವಾ ದಳದ ಸಂಸ್ಥಾಪಕ ಡಾ||ನಾ.ಸು.ಹರ್ಡಿಕರ ರವರ ಕರ್ಮ ಭೂಮಿಯಾದ ಕರ್ನಾಟಕ ಆರೋಗ್ಯ ಧಾಮದ ೬ ಎಕರೆ ಪ್ರದೇಶದಲ್ಲಿ ಪಕ್ಷದ ಕಾರ್ಯಕರ್ತರಿಗಾಗಿ ತರಬೇತಿ ನೀಡಲು ಈ ಕೇಂದ್ರವನ್ನು ಪ್ರಾರಂಭಿಸಲಾಗುತ್ತಿದೆ. ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಮೇಲೆ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಕಾಂಗ್ರೆಸ್ ಮುಖಂಡರು ನನಗೆ ಮೊದಲು ಸೇವಾದಳದ ಕಾರ್ಯ ಚಟುವಟಿಕೆಗಳು ನಡೆಯುವಂತೆ ಆದೇಶ ಮಾಡಿದ ಹಿನ್ನೆಲೆಯಲ್ಲಿ ಪ್ರಥಮ ಬಾರಿಗೆ ಘಟಪ್ರಭಾ ಪಟ್ಟಣದಲ್ಲಿ ರಾಷ್ಟ್ರ ಮಟ್ಟದ ತರಬೇತಿ ಕೇಂದ್ರ ಸ್ಥಾಪಿಸಲಾಯಿತು ಎಂದರು.
ಸಮಾರಂಭಕ್ಕೂ ಮೊದಲು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸೇರಿದಂತೆ ಅನೇಕ ನಾಯಕರು ಸೇವಾದಳದ ಸಂಸ್ಥಾಪಕರಾದ ಡಾ||ನಾ.ಸು.ಹರ್ಡಿಕರ್ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದರು. ನಂತರ ಸೇವಾದಳ ಕೇಂದ್ರದ ಪರಿಶೀಲನೆ ನಡೆಸಿ ಅದೇ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿದರು. ಸಮಾರಂಭದಲ್ಲಿ ಮಹಾತ್ಮಾ ಗಾಂಧಿಜೀ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಲಕ್ಷ್ಮಣರಾವ ಚಿಂಗಳೆ ನಿರೂಪಿಸಿ, ಕಲ್ಪನಾ ಜೋಶಿ ಸ್ವಾಗತಿಸಿದರಲ್ಲದೇ ಭೀಮಾ ನಾಯ್ಕ ವಂದನಾರ್ಪಣೆ ಮಾಡಿದರು.
ವೇದಿಕೆಯ ಮೇಲೆ ಎಸ್.ಆರ್.ಪಾಟೀಲ್, ಬಿ.ಕೆ. ಹರಿಪ್ರಸಾದ್, ಈಶ್ವರ ಖಂಡ್ರೆ, ಪ್ಯಾರಿಜಾನ್, ಡಾ|| ಘನಶ್ಯಾಮ ವೈದ್ಯ, ಶಾಸಕರಾದ ಲಕ್ಷ್ಮೀ ಹೆಬ್ಬಾಳ್ಕರ್, ಗಣೇಶ ಹುಕ್ಕೇರಿ, ಮಹಾಂತೇಶ್ ಕೌಜಲಗಿ, ವೀರಣ್ಣ ಮತ್ತಿಕಟ್ಟಿ, ಅಶೋಕ ಪಟ್ಟಣ, ವೀರಕುಮಾರ ಪಾಟೀಲ ಹಾಜರಿದ್ದರು. ಹಾಗೂ ಜಿಲ್ಲಾ ಪಂಚಾಯತ, ತಾಲೂಕಾ ಪಂಚಾಯತ, ಗ್ರಾಮ ಪಂಚಾಯತಿ ಕಾಂಗ್ರೆಸ್ ಸದಸ್ಯರು, ಕಾಂಗ್ರೆಸ್ ಹಾಗೂ ಸೇವಾದಳದ ಕಾರ್ಯಕರ್ತರು ಸಮಾರಂಭದಲ್ಲಿ ಹಾಜರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button