ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕಾಂಗ್ರೆಸ್ ವಿರುದ್ಧ ತೀವ್ರ ಹರಿಹಾಯ್ದಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಮೊದಲಿನಿಂದಲೂ ಕಮಿಶನ್ ಏಜಂಟ್ ರೀತಿಯಲ್ಲಿ ಪಕ್ಷ ಕೆಲಸ ಮಾಡಿಕೊಂಡು ಬಂದಿದೆ ಎಂದು ಟೀಕಿಸಿದ್ದಾರೆ.
60 ವರ್ಷ ದೇಶವನ್ನಾಳಿದ ಕಾಂಗ್ರೆಸ್ ಸದಾ ರೈತ ವಿರೋಧಿಯಾಗಿಯೇ ನಡೆದುಕೊಂಡು ಬಂದಿದೆ. ಎಲ್ಲದಕ್ಕೂ ದಲ್ಲಾಳಿ ವ್ಯವಹಾರ ಮಾಡಿಕೊಂಡು ಬಂದಿದೆ. ಚುನಾವಣೆಯಲ್ಲಿ ನೀಡಿದ ಯಾವ ಆಶ್ವಾಸನೆಯನ್ನೂ ಈಡೇರಿಸುವುದು ಗೊತ್ತಿಲ್ಲ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮೇಲಿನ ದಾಳಿಗೂ ರಾಜಕೀಯಕ್ಕೂ ಸಂಬಂಧವಿಲ್ಲ. ಸಿಬಿಐ ತನ್ನದೇ ರೀತಿಯಲ್ಲಿ ಕೆಲಸ ಮಾಡುತ್ತಿರುತ್ತದೆ. ಡಿ.ಕೆ.ಶಿವಕುಮಾರ ಅವರು ತಾವು ಶಾಸಕರಾಗುವುದಕ್ಕೂ ಮೊದಲು ಎಷ್ಟು ಆಸ್ತಿ ಇತ್ತು, ಈಗ ಎಷ್ಟಿದೆ ಎನ್ನುವುದನ್ನು ಮೊದಲು ಬಹಿರಂಗ ಪಡಿಸಲಿ. ನಂತರ ಸಿಬಿಐ ಕುರಿತು ಮಾತನಾಡಲಿ ಎಂದು ಸವಾಲು ಹಾಕಿದರು.
ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ವಿಧಾನಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಸಂಜಯ ಪಾಟೀಲ, ರಾಜು ಚಿಕ್ಕನಗೌಡರ್ ಮೊದಲಾದವರಿದ್ದರು.
ಇದಕ್ಕೂ ಮೊದಲು, ಇತ್ತೀಚೆಗೆ ನಿಧನರಾಗಿರುವ ಕೇಂದ್ರ ಸಚಿವ ಸುರೇಶ ಅಂಗಡಿ ನಿವಾಸಕ್ಕೆ ಪ್ರಹಲ್ಲಾದ ಜೋಶಿ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ